ಕೆಲಸವಿಲ್ಲದ ಸೂರ್ಯ ಅದೃಷ್ಟವಂತ

ಮೂಲ ಅಮೆರಿಕನ್ ಹಾಡು: ಹೇವನ್ ಗಿಲೆಸ್ಪಿ 

ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 
Image result for lucky old sun


ಬೆಳಗಾಗೆದ್ದು ಹೊರಟು ನಿಂತೆನೆಂದರೆ ನೋಡು
ದೆವ್ವ ಬಂದವರಂತೆ ದಿನವಿಡೀ ದುಡಿತ
ದಿನವಿಡೀ ಮೇಲೆ ಸ್ವರ್ಗದಲ್ಲುರುಳಾಡುವನು
ಕೆಲಸವಿಲ್ಲದ ಸೂರ್ಯ, ಅದೃಷ್ಟವಂತ


ರೇಗುವ ಹೆಂಡತಿಯ ಜೊತೆ ಏಗುತ್ತಾ ಮಕ್ಕಳಿಗಾಗಿ
ಸುಕ್ಕಾಗಿದೆ ತೊಗಲು, ನೆರೆಬಂದು ಕೂದಲಿಗೆ ಬಾಗುತ್ತಿದೆ ಸೊಂಟ
ದಿನವಿಡೀ ಮೇಲೆ ಸ್ವರ್ಗದಲ್ಲುರುಳಾಡುವನು
ಕೆಲಸವಿಲ್ಲದ ಸೂರ್ಯ, ಅದೃಷ್ಟವಂತ

ಮೇಲಿರುವ ದೇವರೇ ಕಣ್ಣಿಲ್ಲವೇ ನಿನಗೆ
ಕಾಣುವುದಿಲ್ಲವೇ ನನ್ನ ಕಣ್ಣಲ್ಲಿನ ನೀರು?
ಕರೆಸಿಕೋ ನನ್ನನ್ನೂ ಮೇಲಿರುವ ಸ್ವರ್ಗಕ್ಕೆ
ಕಳಿಸಿಕೊಡು ಹಾರಾಡುವ ಬೆಳ್ಳಿತೇರು

ಹಾರಿಸು ನನ್ನನ್ನೂ ವೈತರಿಣಿಯ ಮೇಲೆ
ಕಳೆದುಹೋಗಲಿ ನನ್ನ ದುಃಖ ನೂರೆಂಟು
ಕೊಡಬೇಡ ನನಗೆ ಬೇರಾವುದೂ ಕೆಲಸ
ಸೂರ್ಯನಂತೆ ಸುಮ್ಮನೇ ಹೊರಳಾಡುವ ಹೊರತು


ಮೇಲಿರುವ ದೇವರೇ ಕಣ್ಣಿಲ್ಲವೇ ನಿನಗೆ
ಕಾಣುವುದಿಲ್ಲವೇ ನನ್ನ ಕಣ್ಣಲ್ಲಿ ನೀರು?
ಕರೆಸಿಕೋ ನನ್ನನ್ನೂ ಮೇಲಿರುವ ಸ್ವರ್ಗಕ್ಕೆ
ಕಳಿಸಿಕೊಡು ಹಾರಾಡುವ ಬೆಳ್ಳಿತೇರು

ಹಾರಿಸು ನನ್ನನ್ನೂ ವೈತರಿಣಿಯ ಮೇಲೆ
ಕಳೆದುಹೋಗಲಿ ನನ್ನ ದುಃಖ ನೂರೆಂಟು
ಕೊಡಬೇಡ ನನಗೆ ಬೇರಾವುದೂ ಕೆಲಸ
ಸೂರ್ಯನಂತೆ ಸುಮ್ಮನೇ ಹೊರಳಾಡುವ ಹೊರತು



Image result

"ಕೆಲಸವಿಲ್ಲದ ಸೂರ್ಯ ಅದೃಷ್ಟವಂತ" ಎಂಬ ಹಾಡನ್ನು ರಚಿಸಿದವನು ಅಮೆರಿಕನ್ ಬರಹಗಾರ ಹೇವನ್ ಗಿಲೆಸ್ಪಿ. ತಂದೆ ವಿಲಿಯಮ್ ಗಿಲೆಸ್ಪಿ ಮತ್ತು ತಾಯಿ ಆನಾ ರೇಲಿಗೆ ಇವನನ್ನೂ ಸೇರಿ ಒಂಬತ್ತು ಮಕ್ಕಳು. ಬಡತನದಲ್ಲಿ ಬದುಕಿದ ಸಂಸಾರ. ಕೆಂಟಕಿಯ ಕೋವಿಂಗ್ಟನ್ ಎಂಬಲ್ಲಿ ಮನೆಯೊಂದರ ನೆಲಮಾಳಿಗೆಯಲ್ಲಿ ವಾಸ. ನಾಲ್ಕನೇ ತರಗತಿಯ ನಂತರ ಶಾಲೆಗೆ ವಿದಾಯ ಹೇಳಿದ ಹೇವನ್ ತನ್ನ ಅಕ್ಕ ಮತ್ತು ಭಾವನೊಂದಿಗೆ ಇರಲು ಶಿಕಾಗೋ ನಗರಕ್ಕೆ ಹೋಗಬೇಕಾಯಿತು. ಅವನ ಭಾವ ಜಾನ್ ಹ್ಯೂಲಿಂಗ್ ಪುಸ್ತಕ  ಅಚ್ಚುಮಾಡುವ ವೃತ್ತಿಯಲ್ಲಿದ್ದವನು. ಪುಟ್ಟ ಹುಡುಗ ಹೇವನ್ ಬೆರಳಚ್ಚು ಜೋಡಿಸುವ ಕೆಲಸಕ್ಕೆ ಸೇರಿಕೊಂಡ. ಇದಾದ ಕೆಲವು ವರ್ಷಗಳ ನಂತರ  ಹೇವನ್ ತನ್ನ ಬಾಲ್ಯದ ಗೆಳತಿಯೊಂದಿಗೆ ಪತ್ರ ವ್ಯವಹಾರ ಪ್ರಾರಂಭಿಸಿದ. "ನನ್ನನ್ನು ಮದುವೆಯಾಗುತ್ತೀಯಾ?" ಎಂದು ಅವನು ಒಂದು ಪೋಸ್ಟ್ ಕಾರ್ಡ್ ಬರೆದು ಅವಳಿಗೆ ಕಳಿಸಿದ.  ಬರುವ ವರ್ಷದ ಮಾರ್ಚ್ ತಿಂಗಳಲ್ಲಿ ಅವರಿಗೆ ಮದುವೆಯಾಯಿತು. ಅವನ ಕಿಸೆಯಲ್ಲಿ ಹದಿನೈದು ಡಾಲರ್ ಇದ್ದವು. ಅವಳ ಬಳಿ ತಾಯಿ ಬಳುವಳಿಯಾಗಿ ನೀಡಿದ ಒಂದು ಡಾಲರ್ ಮಾತ್ರ ಇತ್ತು.  ಹೀಗೆ  ಸಂಸಾರ ಪ್ರಾರಂಭಿಸಿದ  ಹೇವನ್ ಜೀವನ ಹೇಗಿದ್ದೀತು ಎಂದು ಯಾರಾದರೂ ಊಹಿಸಬಹುದು. ಕೆಲವು ವರ್ಷಗಳ ನಂತರ ಅವನಿಗೆ ಸಿನ್ಸಿನಾಟಿ ಟೈಮ್ಸ್-ಸ್ಟಾರ್ ಎಂಬ ಪತ್ರಿಕೆಯಲ್ಲಿ ಬೆರಳಚ್ಚು ಜೋಡಿಸುವ ಕೆಲಸ ಸಿಕ್ಕಿತು. ಸಂಜೆಯ ಹೊತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ತಾನು ಬರೆದ ಹಾಡುಗಳನ್ನು ಹಾಡುವುದರಿಂದ ಒಂದಿಷ್ಟು ಮೇಲುಸಂಪಾದನೆ.  ಮದುವೆಯಾದ ಎರಡು ವರ್ಷಗಳ ನಂತರ ದಂಪತಿಗಳಿಗೆ  ಒಂದು ಗಂಡುಮಗುವಾಯಿತು. ಇದಾದ ಒಂದು ವರ್ಷದ ನಂತರ ಸಿನ್ಸಿನಾಟಿ ನಗರದ ಒಂದು ರಂಗಮಂದಿರದಲ್ಲಿ ರಾಯ್ ಸ್ಟೀವನ್ಸನ್ ಎಂಬ ಕಲಾಕಾರನೊಂದಿಗೆ ಭೇಟಿಯಾದಾಗ ಹೇವನ್ ಅದೃಷ್ಟ ಬದಲಾಯಿಸಿತು. ಇವರಿಬ್ಬರೂ ಸೇರಿ ನಾಟಕಕ್ಕೆ ಮೂರು ಹಾಡುಗಳನ್ನು ಒಟ್ಟಿಗೆ ರಚಿಸಿದರು.  ಈ ಹಾಡುಗಳ ಅಚ್ಚುಪ್ರತಿಗಳು ಮಾರಾಟವಾದಾಗ ಪ್ರತಿಯೊಂದಕ್ಕೆ ಒಂದೂವರೆ ಸೆಂಟ್ ಗೌರವಧನ ನಿಗಡಿಯಾಯಿತು. ಇದರಿಂದ ಹಲವಾರು ವರ್ಷಗಳಲ್ಲಿ ಹೇವನ್ ಪಡೆದುಕೊಂಡ ಗೌರವಧನ ಕೆಲವು ಡಾಲರ್ ಮಾತ್ರ!   ಹೀಗೆ ಗೀತರಚನೆ ಮತ್ತು ಹಾಡುಗಾರಿಕೆಯತ್ತ ಹೊರಳಿದ ಹೇವನ್ ತನ್ನ ಓಡಾಟಗಳ ನಡುವೆ ಕುಡಿಯುವ ಚಟಕ್ಕೆ ಬಿದ್ದ. ಇಪ್ಪತ್ತ,ಮೂರನೇ ವಯಸ್ಸಿನಲ್ಲಿ ಒಂದು ರಾತ್ರಿ ವಿಪರೀತ ಕುಡಿದ ಸ್ಥಿತಿಯಲ್ಲಿ ಜೋ ಫೋರ್ಡ್ ಎಂಬ ಯುವಕನೊಂದಿಗೆ ಅವನ ಪರಿಚಯವಾಯಿತು. ಸಿನ್ಸಿನಾಟಿ ಟ್ರಿಬ್ಯೂನ್  ಪತ್ರಿಕೆಗೆ ಜೋ ಮುದ್ರಣ ಮಾಡಿಕೊಡುವ ವೃತ್ತಿಯಲ್ಲಿದ್ದ. ಹೇವನನ್ನು ಅಮಲಿನ ಸ್ಥಿತಿಯಲ್ಲಿ ಅವನ ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಬುದ್ಧಿವಾದ  ಹೇಳಿದ. ಇಬ್ಬರಲ್ಲೂ ಗೆಳೆತನ ಉಂಟಾಯಿತು.  ಇದಾದ ಎರಡು ವರ್ಷಗಳ ನಂತರ ಹೇವನ್ ಗಿಲೆಸ್ಪಿಯ "ಡ್ರಿಫ್ಹ್ತಿಂಗ್ ಅಂಡ್ ಡ್ರೀಮಿಂಗ್" ಎಂಬ ಗೀತಸಂಗ್ರಹ  ಜನಪ್ರಿಯವಾಯಿತು.  ತನ್ನ ಜೀವನದಲ್ಲಿ ನಡೆದ ಘಟನೆಗಳ ಆಧಾರದ ಮೇಲೆ ಅವನು ಹಾಡುಗಳನ್ನು ರಚಿಸಿದ.  ಮುಂದೆ ಹೇವನ್ ನ್ಯೂಯಾರ್ಕ್ ನಗರದಲ್ಲಿ ಬಂದು ನೆಲೆಸಿದ.  "ಕೆಲಸವಿಲ್ಲದ ಸೂರ್ಯ ಅದೃಷ್ಟವಂತ" ಎಂಬ ಹಾಡು ಒಬ್ಬ ಕಷ್ಟಜೀವಿಯ ಪಾದನ್ನು ಧ್ವನಿಸುತ್ತದೆ. ಜೀವನದಲ್ಲಿ ಸಾಕಷ್ಟು ಬಡತನ ಅನುಭವಿಸಿದ ಹೇವನ್ ತನ್ನ ಸ್ವಂತ ಅನುಭವದ ಆಧಾರದ ಮೇಲೆ ರಚಿಸಿದ ಈ ಹಾಡು ತುಂಬಾ ಜನಪ್ರಿಯವಾಯಿತು. ಮುಂದೆ ಈ ಹಾಡನ್ನು ಫ್ರಾಂಕ್ ಸಿನಾಟ್ರಾ, ರೇ ಚಾರ್ಲ್ಸ್, ಬಾಬ್ ಡಿಲನ್ ಮೊದಲಾದ ಅನೇಕ ಪ್ರಸಿದ್ಧ ಗಾಯಕರು ಹಾಡಿದ್ದಾರೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)