ಪ್ರತಿಬಿಂಬದ ಬಂಧನ

ಶಹರಿಯಾರ್ ಅವರ ಒಂದು ಗಜಲ್ ಭಾಷಾಂತರಿಸುವ ಸಾಹಸ ಇಲ್ಲಿದೆ.  ಅವರ ಇನ್ನೂ ಅನೇಕ ರಚನೆಗಳಂತೆ ಇಲ್ಲೂ ನಗರಜೀವನದ ಬಗ್ಗೆ ಒಂದಿಷ್ಟು ನೋಟಗಳಿವೆ. ನಗರದ ಜೀವನ ಒಂದು ಮರೀಚಿಕೆಯಂತೆ. ಮಾತಿನಲ್ಲಿ ಅದನ್ನು ಬಂಧಿಸಿಡುವುದು ಕೂಡಾ ಕಷ್ಟ.  ನಾವು ನಡೆಯುತ್ತಿದ್ದೇವೆಂಬ (ನಂಬಿಕೆಯ) ಹಾದಿ ಗಟ್ಟಿಯಾದದ್ದೆಂಬುದು ಒಂದು ಭ್ರಮೆ!  ಸ್ಮಾರ್ಟ್ ಸಿಟಿ ಎಂಬ ಕಲ್ಪನೆಯನ್ನೇ ತೆಗೆದುಕೊಳ್ಳಿ. ಈ ಅದ್ಭುತ ಕಲ್ಪನಾಲೋಕ ಎಂದಾದರೂ ನಿಜವಾದೀತೇ? ಅದರ ಸಾಧ್ಯತೆ ಕಡಿಮೆಯೇ ಎಂದು ನಮಗೆ ಗೊತ್ತಿದ್ದರೂ ನಾವು ಕನಸು ಕಾಣುವುದನ್ನು ಬಿಡುವುದಿಲ್ಲ! 


ಮೂಲ ಉರ್ದೂ : ಶಹರಿಯಾರ್ 
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್


ಪ್ರತಿಬಿಂಬ ಹಿಡಿದಿಡಲೇ,  ತೊಡಿಸಲೇ ನೆರಳಿಗೆ ಕಡಿವಾಣ?
ಹೇಗೆ ಸಾಕ್ಷಾತ್ಕರಿಸಿಕೊಳ್ಳಲಿ ಮರೀಚಿಕೆಯನ್ನ?


ಪದತಲದಲ್ಲಿ ಇದೆಯಲ್ಲ ಅದು ಗಟ್ಟಿನೆಲವೆಂದು  
ನಡೆ ಇನ್ನೊಂದಿಷ್ಟು ದಿನ ಭ್ರಮೆಯನ್ನು ಹರಡೋಣ 

ಭರವಸೆಗಳ ನಗರ ನಿಜವೇ ಆಗುವುದು ಸಾಧ್ಯವಿಲ್ಲ 
ಎಂದಾದರೆ ಅದನ್ನು ಕಲ್ಪನೆಯಲ್ಲೇ ಹಿಡಿದಿಡೋಣ 

ಹೆಚ್ಚೂ ಕಡಿಮೆ ಈಗ ಕಣ್ಣುಗಳಿಗೆ ಇರುವ ಕೆಲಸ ಒಂದೇ 
ಕಂಡ ಕನಸುಗಳಿಗೆಲ್ಲಾ ಹುಡುಕುವುದು ಅರ್ಥವನ್ನ 

ನೆನ್ನೆಯೆಷ್ಟಿತ್ತೋ ನನಗೆ ಇಂದೂ ಅಷ್ಟೇ ಇದೆ ಅಧೈರ್ಯ 
ಯಾರ ತುಟಿಗಳ ಮೇಲೆ ಬರೆಯಲಿ ದಾಹವನ್ನ?

ಸವೆಸೋಣ ಉಳಿದ ಬದುಕಿನ ಹಾದಿ ಈ ನಂಬಿಕೆಯ ಮೇಲೆ:
ಬಿಸಿಲನ್ನು ನೆರಳಿನ ಮೂಲಕವೇ ಅರ್ಥೈಸಿಕೊಳ್ಳೋಣ 

(c) 2016 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)