ಭಾವಗೀತೆಯ ಗುಂಗು

ಸಿ  ಪಿ ರವಿಕುಮಾರ್ 




"ಸಂವಾದ" ಟ್ರಸ್ಟ್ ಪ್ರತಿ ತಿಂಗಳು ಆಯೋಜಿಸುವ 'ಸಂವಾದ' ಕಾರ್ಯಕ್ರಮದಲ್ಲಿ ಭಾಗವಹಿಸಿ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಮಾತುಗಳನ್ನು ಕೇಳುವ ಅವಕಾಶ ಇವತ್ತು ಸಿಕ್ಕಿತು.

ಬಿ ಆರ್ ಲಕ್ಷ್ಮಣರಾವ್ ತಮ್ಮ ಕಾವ್ಯದ ಬಗ್ಗೆ ಸಂಕ್ಷಿಪ್ತವಾಗಿ ಆದರೆ ಸ್ವಾರಸ್ಯವಾಗಿ ಮಾತಾಡಿದರು. ಕೇವಲ ಒಂದೂವರೆ ಗಂಟೆಯ ಕಾರ್ಯಕ್ರಮದಲ್ಲಿ ಸಮಯ ಪಾಲನೆ ಬಹಳ ಮುಖ್ಯ. ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಪ್ರಶ್ನೆ ಕೇಳಬಹುದು - ಹೀಗಾಗಿ ಸಮಯ ನಿಯಂತ್ರಿಸುವುದು ಒಂದು ಕಲೆ. ಇದನ್ನು ಕವಿ ಲಕ್ಷ್ಮಣರಾವ್ ಚೆನ್ನಾಗಿ ಮಾಡಿದರು ಎನ್ನಿಸಿತು. ಅನೌಪಚಾರಿಕವಾಗಿದ್ದರೂ ಕಾರ್ಯಕ್ರಮದಲ್ಲಿ ಆಯೋಜಕರು ಒಂದು ರೂಪರೇಷೆಯನ್ನು ಇಟ್ಟುಕೊಂಡಿದ್ದರು.  ಮೊದಲು ಕವಿ ತಾವು ಕಾವ್ಯಜೀವನಕ್ಕೆ ಹೇಗೆ ಬಂದರು ಎಂಬ ಬಗ್ಗೆ ಮಾತಾಡಿದರು. ಅವರ ಕೆಲವು ಗೀತೆಗಳನ್ನು ಉಪಾಸನಾ ಮೋಹನ್ ಮತ್ತು ವರ್ಷಾ ಎಂಬ ಕಲಾವಿದರು ಸುಶ್ರಾವ್ಯವಾಗಿ ಹಾಡಿದರು. ಕವಿ ತಮ್ಮ ಕೆಲವು ಕವಿತೆಗಳನ್ನು ಓದಿದರು. ಪ್ರಶ್ನೋತ್ತರಕ್ಕೂ ಅವಕಾಶವಿತ್ತು. ಪೂರ್ವನಿಯೋಜಿತವಲ್ಲದ ಒಂದು ದಿಢೀರ್ ವಿಮರ್ಶೆ ಕೂಡಾ ನಡೆಯಿತು - ಪ್ರೊ ಸಿ ಎನ್ ರಾಮಚಂದ್ರನ್ ಅವರನ್ನು ಕವಿ ಕೆಲವು ಮಾತುಗಳನ್ನು ಆಡಬೇಕೆಂದು ಕೇಳಿಕೊಂಡಿದ್ದು ಒಂದಿಷ್ಟು ಒಳ್ಳೆಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಹೀಗೆ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುವುದು ಮತ್ತು ನಿರ್ವಹಣೆ ಮಾಡುವುದು ಕೂಡಾ ಅಪರೂಪದ ಕಲೆ. 'ಸಂವಾದ' ನಡೆಸುತ್ತಿರುವ ವಿ ಆರ್ ಕುಲಕರ್ಣಿ ಮತ್ತು ಅವರ ಮಿತ್ರರು ಈ ಕೆಲಸವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.



ಲಕ್ಷ್ಮಣರಾವ್ ಅವರನ್ನು 'ತುಂಟ ಕವಿ' ಎಂದು ಕರೆದವರಿದ್ದಾರೆ. ಅವರ 'ಗೋಪಿ ಮತ್ತು ಗ್ಯಾಂಡೊಲೀನಾ' ಕವಿತೆಯನ್ನು ಲಂಕೇಶ್ ಅವರು ಸಂಪಾದಿಸಿದ 'ಅಕ್ಷರ ಹೊಸಕಾವ್ಯ' ಸಂಗ್ರಹದಲ್ಲಿ ಆಯ್ದುಕೊಂಡಿದ್ದು ಅವರು  ಉದಯೋನ್ಮುಖ ಕವಿಗಳಾಗಿದ್ದಾಗಲೂ ಹೇಗೆ ಎಲ್ಲರ ಗಮನ ಸೆಳೆದರು ಎಂಬುದನ್ನು ತೋರಿಸುತ್ತದೆ. ಈ ಕವಿತೆಯನ್ನು ರಾಮಚಂದ್ರನ್ ಅವರ ಅಪೇಕ್ಷೆಯ ಮೇಲೆ ಲಕ್ಷ್ಮಣರಾವ್ ಇವತ್ತು ಬಹಳ ಸ್ವಾರಸ್ಯವಾಗಿ ಹಾಡಿದರು. ಕನ್ನಡದಲ್ಲಿ ಕವಿಗಳು ಕಾವ್ಯವನ್ನು ಓದುವುದೇ ಹೆಚ್ಚು - ಹಾಡಿದವರನ್ನು ನಾನು ನೋಡೇ ಇಲ್ಲ. ಕಂಬಾರ ಅವರು ಕವಿಗೋಷ್ಠಿಗಳಲ್ಲಿ ಹಾಡುತ್ತಾರೆ ಎಂದು ಕೇಳಿದ್ದೇನೆ, ಅಷ್ಟೆ. ಲಕ್ಷ್ಮಣರಾವ್ ಅವರು ತಾವು ವಿದ್ಯಾರ್ಥಿಯಾಗಿದ್ದಾಗ ಹಾಡುತ್ತಿದ್ದುದನ್ನು, ಮೊದಲ ಬಹುಮಾನ ಗಳಿಸುತ್ತಿದ್ದುದನ್ನು ನೆನೆಸಿಕೊಂಡರು. ಅವರಿಗೆ ಕಾವ್ಯ ಬರೆಯಲು ಪ್ರೇರಣೆ ಸ್ವಯಂ ಲಕ್ಷಣರಾವ್ ಅವರೇ - ಅವರ ಮನೆಯಲ್ಲಿ ಯಾರೂ ಲೇಖಕರಿರಲಿಲ್ಲ.  ಅವರಿಗೆ ಹುಡುಗರಾಗಿದ್ದಾಗ ಸಿನಿಮಾ ನೋಡುವ ಹುಚ್ಚಿತ್ತಂತೆ - ಪಿ ಯು ಸಿ ವಿದ್ಯಾರ್ಥಿಯಾಗಿದ್ದಾಗ ಒಂದು ವರ್ಷದಲ್ಲಿ ನೂರೊಂದು ಸಿನಿಮಾ ನೋಡಿ ಅವುಗಳನ್ನು  ಕುರಿತು ತಮ್ಮ ದಿನಚರಿ ಪುಸ್ತಕದಲ್ಲಿ ಬರೆದಿದ್ದನ್ನು ಅವರು ನೆನೆದರು. ಹಾಡುಗಳನ್ನು ಕೇಳುತ್ತಾ-ಹೇಳುತ್ತಾ ಅವರಿಗೆ ಹಾಡುಗಳನ್ನು ಬರೆಯುವ ಹುಚ್ಚು ಹಿಡಿದದ್ದು ಹೆಚ್ಚೇನಲ್ಲ!  ಅವರು ಬರೆದ ಪ್ರೇಮಗೀತೆಗಳನ್ನು ಹಾಗೂ ಇನ್ನಿತರ ಭಾವಗೀತೆಗಳನ್ನು ಅನೇಕ ಗಾಯಕ-ಗಾಯಕಿಯರು ಹಾಡಿದ್ದಾರೆ; ಕ್ಯಾಸೆಟ್ ಮತ್ತು ಸಿಡಿಗಳಲ್ಲಿ ಅವರ ಗೀತೆಗಳು ಲಭ್ಯವಾಗಿವೆ.

ಹಾಡು ಕೂಡಾ ಸಾಹಿತ್ಯವೇ ಎಂದು ಕೆಲವರು ಹುಬ್ಬೇರಿಸಬಹುದು. ಹಿಂದಿ-ತಮಿಳು-ತೆಲುಗು ಭಾಷೆಗಳಲ್ಲಿ ಪ್ರಸಿದ್ಧ ಕವಿಗಳು ಸಿನಿಮಾಗೀತೆಗಳನ್ನು ಬರೆದದ್ದಿದೆ.  ಗುಲ್ಜಾರ್, ಸಾಹಿರ್, ಕೈಫಿ ಆಜ್ಮಿ, ಜಾವೇದ್ ಅಖ್ತರ್, ಶ್ರೀಶ್ರೀ, ಇವರೆಲ್ಲಾ  ಮೊದಲು ಕವಿಗಳಾಗಿ ಆನಂತರ ಸಿನಿಮಾ ಸಾಹಿತಿಗಳಾದವರು. ಕನ್ನಡದಲ್ಲಿ ಪ್ರಸಿದ್ಧ ಕವಿತೆಗಳನ್ನು ಸಿನಿಮಾಗೀತೆಗಳಿಗೆ ಅಳವಡಿಸಿಕೊಳ್ಳಲಾಗಿದೆ, ಆದರೆ ಸಿನಿಮಾಗೀತೆಗಳನ್ನು ಬರೆದ ಕವಿಗಳು ಬಹುಶಃ ಇಲ್ಲ.

ಕವನಗಳನ್ನು ಹಾಡುವುದು ಸರಿಯೇ ಎಂಬುದು ಕೂಡಾ ಚರ್ಚಿತ ವಿಷಯ. ನನಗೆ ನೆನಪಿರುವಂತೆ ಕನ್ನಡದಲ್ಲಿ ಭಾವಗೀತೆಗಳನ್ನು ಮೊದಲು ಜನಪ್ರಿಯಗೊಳಿಸಿದ್ದು ಆಕಾಶವಾಣಿ.  ಎಚ್. ಆರ್. ಲೀಲಾವತಿ ಬಹುಶಃ ಭಾವಗೀತೆಗಳನ್ನು ಹಾಡಿದ ಮೊದಲ ಗಾಯಕಿ.  ಪಿ ಕಾಳಿಂಗರಾವ್ ಬಹುಶಃ ಭಾವಗೀತೆಗಳ ಪ್ರಥಮ ಗಾಯಕ.  ಮೈಸೂರು ಅನಂತಸ್ವಾಮಿ ಕನ್ನಡ ಭಾವಗೀತೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಿದರು.  ಅವರ ನಂತರ ಅಶ್ವಥ್, ಶಿವಮೊಗ್ಗ ಸುಬ್ಬಣ್ಣ. ಈಗ ಗಾಯಕ-ಗಾಯಕಿಯರ ದೊಡ್ಡ ಸಮೂಹವೇ ಇದೆ.  ಕವಿಗಳಲ್ಲಿ ಕೆ ಎಸ್ ನರಸಿಂಹಸ್ವಾಮಿ, ಜಿ ಎಸ್ ಶಿವರುದ್ರಪ್ಪ, ಕೆ ಎಸ್ ನಿಸಾರ್ ಅಹ್ಮದ್, ಎಚ್ ಎಸ್ ವೆಂಕಟೇಶ ಮೂರ್ತಿ, ಲಕ್ಷ್ಮಣರಾವ್, ಲಕ್ಷ್ಮೀನಾರಾಯಣ ಭಟ್ಟ - ಇವರೆಲ್ಲರ ಭಾವಗೀತೆಗಳೂ ಜನಪ್ರಿಯವಾಗಿವೆ.

ನಾನು ವಿದ್ಯಾರ್ಥಿಯಾಗಿದ್ದಾಗ ಓದುವಾಗ ಆಕಾಶವಾಣಿಯ ಯಾವುದಾದರೂ ಚಾನೆಲ್ ಹಿನ್ನೆಲೆಯಲ್ಲಿ ಇರಲೇಬೇಕು. "ಹಾಡು ಕೇಳಿಕೊಂಡು ಅದು ಹೇಗೆ ಓದುತ್ತೀರೋ!" ಎಂದು ನನ್ನ ತಂದೆ ಆಶ್ಚರ್ಯ ಪಡುತ್ತಿದ್ದರು. ಆಗ ಕೇಳಿದ ಗೀತೆಗಳು ನೆನಪಿನಲ್ಲಿ ಇನ್ನೂ ಹಸಿರಾಗಿವೆ.  ಮೊದಲ ಪೀಳಿಗೆಯ ಭಾವಗೀತೆಗಳಲ್ಲಿ ಹೆಚ್ಚು ವಾದ್ಯಗೋಷ್ಠಿ ಇರುತ್ತಿರಲಿಲ್ಲ. ವೀಣೆ, ಕೊಳಲು, ಮೃದಂಗ, ಹಾರ್ಮೋನಿಯಂ. ಭಾವ ಮತ್ತು ಸಾಹಿತ್ಯದ ಮೇಲೆ ಹೆಚ್ಚು ಒತ್ತು ಇರುತ್ತಿತ್ತು.  ಎರಡನೇ ಪೀಳಿಗೆಯ ಭಾವಗೀತೆಗಳಲ್ಲಿ  ವಾದ್ಯಗೋಷ್ಠಿಯ ಕೈ ಮೇಲಾಯಿತು. ಇದನ್ನು ಇವತ್ತು ವಿಮರ್ಶಕ ರಾಮಚಂದ್ರನ್ ಕೂಡಾ ಬೆರಳು ಮಾಡಿ ತೋರಿಸಿದರು. ಇದರ ಬಗ್ಗೆ ಸ್ವಲ್ಪ ಚರ್ಚೆ ಕೂಡಾ ನಡೆಯಿತು.  ಕವಿ ಲಕ್ಷಣರಾವ್ ಅವರ ಪ್ರಕಾರ ಉತ್ತಮ ರೆಕಾರ್ಡಿಂಗ್ ಉಳ್ಳ ಗೀತೆಗಳಲ್ಲಿ ಹಿನ್ನೆಲೆ ವಾದ್ಯ ಗೋಚರವಾಗದಷ್ಟು ಸೂಕ್ಷ್ಮವಾಗಿರುತ್ತದೆ. ಉಪಾಸನಾ ಮೋಹನ್ ಅವರ ಪ್ರಕಾರ ಇಂದಿನ ಪೀಳಿಗೆಯವರಿಗೆ ವಾದ್ಯಗೋಷ್ಠಿ ಇಲ್ಲದ ಹಾಡುಗಳು ಪ್ರಿಯವಾಗುವುದಿಲ್ಲ.  "ನಾವು ಬರೀ ಒಂದು-ಎರಡು ವಾದ್ಯ ಇಟ್ಟುಕೊಂಡು ಹಾಡಿದರೆ ಮುಂದಿನ ಪೀಳಿಗೆಯವರು ಭಾವಗೀತೆಗಳನ್ನು ಮರೆತೇ ಬಿಡುತ್ತಾರೆ" ಎಂಬುದು ಅವರ ಶಂಕೆ.  ಒಮ್ಮೆ ಲತಾ ಮಂಗೇಶ್ಕರ್ ಹೀಗೆ ಹೇಳಿದ್ದನ್ನು ನಾನು ಕೇಳಿದ್ದೇನೆ - "ಹಿಂದೆ ನಾವು ಹಾಡುವುದನ್ನು ನಿಲ್ಲಿಸಿದಾಗ ವಾದ್ಯದವರು ನುಡಿಸುತ್ತಿದ್ದರು; ಈಗ ಅವರು ನಿಲ್ಲಿಸಿದಾಗ ನಾವು ಹಾಡುತ್ತೇವೆ!" ಸಾಹಿತ್ಯ ಮತ್ತು ಭಾವಗಳು ಮರೆಯಾಗುತ್ತಿರುವುದನ್ನು ಈಗಿನ ಗೀತೆಗಳಲ್ಲಿ ನಾವು ನೋಡುತ್ತೇವೆ. ಆದರೆ ಇದನ್ನು ನಾವು ಕಾಲಕ್ಕೆ ತಕ್ಕ ಬೆಳವಣಿಗೆ ಎಂದು ಸ್ವೀಕರಿಸಲೇ ಬೇಕು! ಆದರೆ ಹಳೆಯ ಗೀತೆಗಳನ್ನು ಇಂದಿನ ಕೆಲವು ಮಕ್ಕಳು ಲೀಲಾಜಾಲವಾಗಿ ಪ್ರತಿಭಾ ಶೋಧನಾ ಕಾರ್ಯಕ್ರಮಗಳಲ್ಲಿ ನೋಡಿದಾಗ ಸುಶ್ರಾವ್ಯ ಗೀತೆಗಳು ಇನ್ನೂ ಚಾಲ್ತಿಯಲ್ಲಿವೆಯಲ್ಲ ಎಂದು ಸಮಾಧಾನವಾಗುತ್ತದೆ!

ಲಕ್ಷ್ಮಣರಾವ್ ಅವರು ಓದಿದ ಇತ್ತೀಚಿನ ಕವಿತೆಗಳು ಗಂಭೀರ ಸ್ವರೂಪದವು. ತಮ್ಮ ಕಾವ್ಯ ಮತ್ತು ಹೆಂಡತಿ ಇಬ್ಬರನ್ನೂ ಉದ್ದೇಶಿಸಿ ಬರೆದ ಕವಿತೆ "ಇವಳು ನದಿಯಲ್ಲ" ಎಲ್ಲರ ಹೃದಯ ಮುಟ್ಟಿತು. ಹಾಗೇ "ಅಧ್ಬುತ" ಎಂಬ ಕವಿತೆ ಕೂಡ. ಇದರಲ್ಲಿ ಇಂದಿನ ಸಮಾಜದಲ್ಲಿ ಅದ್ಭುತ ಎಂದರೆ ಏನು ಎಂಬುದನ್ನು ಒಬ್ಬ ಸಾಮಾನ್ಯ ಗೃಹಿಣಿಯ ದೃಷ್ಟಿಯ ಮೂಲಕ ಕವಿ ನೋಡಿದ್ದಾರೆ.

ಲಕ್ಷ್ಮಣರಾವ್ ಅವರ ಕೆಲವು ಕವಿತೆಗಳನ್ನು ಬಹಳ ಹಿಂದೆ ನಾನು ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದೆ. ಇವುಗಳಲ್ಲಿ ಕೆಲವು ನನ್ನ ಬ್ಲಾಗ್ ನಲ್ಲಿ ಲಭ್ಯ.  ನೀವು ನೋಡಬಹುದು (ಇಲ್ಲಿ ಮತ್ತು ಇಲ್ಲಿ). ಟುವಟಾರ ಎಂಬ ಅವರ ಕವಿತೆಯ ನನ್ನ ಭಾಷಾಂತರ ಎಲ್ಲೋ ಕಳೆದುಹೋಗಿದೆ! ಅವರ ಇತ್ತೀಚಿನ ಕವಿತೆಗಳಲ್ಲಿ ಕೆಲವನ್ನು ನಾನು ಮುಂದೆ ಎಂದಾದರೂ ಭಾಷಾಂತರಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.


ಕಾಮೆಂಟ್‌ಗಳು

  1. Namaskara Sreeyuta CPRavarige, Neevu Nalku Tantiya "Naanu Neenu Aanu Taanu" anuvaadha madidhalli, dayamaadi link kaluhisi.
    Nimma Abhimaani haagu PSIyalli project shishye - Meera

    ಪ್ರತ್ಯುತ್ತರಅಳಿಸಿ
  2. ಮೀರಾ, ನಿಮ್ಮ ಕಾಮೆಂಟ್ ನೋಡಿ ಬಹಳ ಸಂತೋಷವಾಯಿತು! ನಿಮ್ಮ ಜೊತೆ ಇನ್ನೂ ಇಬ್ಬರು ಗೆಳೆಯರಿದ್ದರು - ಅವರ ಹೆಸರು ಶ್ರೀನಿವಾಸ್ ಮತ್ತು ವಾನತಿ ಅಂತ ನೆನಪು. ನಿಮಗೆಲ್ಲರಿಗೂ ಶುಭಾಶಯಗಳು! ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)