ಕರೆಯಂ ಕಟ್ಟಿಸು ಬಾಯಿಯಂ ಸವೆಸು
"ಕೆರೆಯಂ ಕಟ್ಟಿಸು, ಬಾವಿಯಂ ಸವೆಸು" ಎಂದು ಕನ್ನಡತಿ ತಾಯಿಯೊಬ್ಬಳು ಒಬ್ಬ ಮಗನಿಗೆ ಹಾಲೂಡಿಸುವಾಗ ಕಿವಿಯಲ್ಲಿ ಹೇಳಿದಳಂತೆ. ಅವನು ಮುಂದೆ ಅಮಾತ್ಯನಾಗಿ ಕೆರೆ-ಕಟ್ಟೆ-ಬಾವಿಗಳನ್ನು ತೋಡಿಸಿದನಂತೆ. "ಕೆರೆಯಂ ಮುಚ್ಚಿಸು, ಕಟ್ಟಡಮಂ ಕಟ್ಟಿಸು" ಎಂದು ಅದು ಯಾರು ಯಾರ ಕಿವಿಯಲ್ಲಿ ಉಸುರಿದರೋ ಕಾಣೆ. ಬೆಂಗಳೂರಿನ ಅನೇಕ ಎ-ಕೆರೆಗಳು ಎಕರೆಗಳಾಗಿ ಬಿಕರಿಯಾಗಿದ್ದು ಈಗ ಹಳೆಯ ಕಥೆ. ತೊಂಬತ್ತರ ದಶಕದಲ್ಲಿ ಬೆಂದಕಾಳೂರು ಸಿಲಿಕಾನ್ ವ್ಯಾಲಿಯಾಗಿ ಬದಲಾಗತೊಡಗಿದ್ದು ಅಕ್ಕಪಕ್ಕದ ಊರುಗಳ ಕೆರೆಗಳಿಂದ ಅಹೋರಾತ್ರಿ ಲಾರಿಗಳಲ್ಲಿ ಸಿಲಿಕಾನ್ ಅರ್ಥಾತ್ ಮರಳು ಬಂದು ಬೀಳತೊಡಗಿದಾಗ. ಆ ಕೆರೆಯ ಮರಳನು ಈ ಕೆರೆಗೆ ಚೆಲ್ಲಿ ವರವ ಪಡೆದ ಭೂಪರು ಏಕಾಏಕಿ ಸಿರಿವಂತರಾದರು. ತರೀಕೆರೆ ಏರಿ ಮೇಲೆ ಅದೆಷ್ಟು ಕುರಿಗಳು ಮೇಯುತ್ತಿದ್ದವೋ ಗೊತ್ತಿಲ್ಲ. ಬೆಂಗಳೂರಿನ ಕೆರೆ ಏರಿ ಮೇಲಂತೂ ತೋಳಗಳು ಕುರಿಗಳ ಕೈಕುಲುಕಿ ದೇಶಾವರಿ ನಗೆ ಬೀರಿದ್ದನ್ನು ನೋಡಿದವರು ಇದ್ದಾರೆ. "ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದರಂತೆ" ಎಂಬ ಗಾದೆಯನ್ನು "ಇರುಳು ಕಂಡ ಕೆರೆಯಲ್ಲಿ ಹಗಲು ಇದ್ದರಂತೆ" ಎಂದು ಬದಲಾಯಿಸಬೇಕಾಯಿತು. ಒಂದು ಘಟನೆ ಹೀಗೂ ನಡೆಯಿತೆಂದು ಹೇಳುತ್ತಾರೆ. ಅದೆಷ್ಟು ನಿಜವೋ ಕಾಣೆ. ಕೆರೆ-ಎಸ್ಟೇಟಿನ ಮೇಲೆ ಕಟ್ಟಿದ ಬಹುಮಹಡಿ ಕಟ್ಟಡವೊಂದರಲ್ಲಿ ಮೊದಲನೇ ಮಹಡಿಯಲ್ಲಿ ಮನೆ ಖರೀದಿಸಿದವರೊಬ್ಬರು ಗೃಹಪ್ರವೇಶದ ನಂತರದ ದಿನ ಮನೆ ಬಾಗಿಲು ತೆಗೆದರೆ ಆಶ್ಚರ್ಯ!
"ರೀ! ಇಲ್ಲಿ ಬನ್ನಿ!" ಎಂದು ಮನೆಯಾಕೆ ಕೂಗಿದರು.
"ಕಾಫಿ ರೆಡಿಯಾಯಿತೆ?" ಎಂದರು ಆಕೆಯ ಪತಿ.
"ಅಯ್ಯೋ ಕಾಫಿ ಇರಲಿ! ಇಲ್ಲಿ ಬನ್ನಿ! ನಾವು ಕೊಂಡ ಅಪಾರ್ಟ್ಮೆಂಟು ಫಸ್ಟ್ ಫ್ಲೋರ್ ಮೇಲೆ ತಾನೇ ಇದ್ದಿದ್ದು?"
"ಯಾಕೆ? ನೆನ್ನೆ ತಾನೇ ಗೃಹಪ್ರವೇಶ ಮಾಡಿದೆವಲ್ಲ? ನಿಮ್ಮ ಅಮ್ಮ ಬಹಳ ಕಷ್ಟ ಪಟ್ಟು ಇಪ್ಪತ್ತೇಳು ಹತ್ತಿದರಲ್ಲ!"
"ಮತ್ತೆ, ಇಲ್ಲಿ ಬನ್ನಿ!"
ಪತಿರಾಯರಿಗೂ ನಂಬಲೇ ಆಗಲಿಲ್ಲ. ತಾವೇನು ಕನಸು ಕಾಣುತ್ತಿದ್ದೇವೋ ಎಂದು ಇಬ್ಬರೂ ಕಣ್ಣು ಹೊಸಕಿಕೊಂಡು ನೋಡಿದರು. ಮಹಡಿ ಮನೆ ಈಗ ಮರಳಿನಲ್ಲಿ ಕುಸಿದು ಗ್ರೌಂಡ್ ಫ್ಲೋರ್ ಮನೆಯಾಗಿತ್ತು! ಪಾಪ, ಗ್ರೌಂಡ್ ಫ್ಲೋರ್ ಮನೆಯವರ ಪಾಡು ಯಾಕೆ ಕೇಳುತ್ತೀರಿ!
ಈ "ಗ್ರೌಂಡ್ ರಿಯಾಲಿಟಿ" ಕಥೆ ಇಷ್ಟಕ್ಕೇ ಮುಗಿದಿದ್ದರೆ ಚೆನ್ನಾಗಿತ್ತು. ಆ ಅಪಾರ್ಟ್ಮೆಂಟಿನ ಹತ್ತಿರ ಒಂದು ದಿನ ಇದ್ದಕ್ಕಿದ್ದಂತೆ ಒಂದು ವಿಧ್ವಂಸಕ ಯಂತ್ರ ಗರ್ರೆಂದು ಸದ್ದು ಮಾಡುತ್ತಾ ಬಂದು ನಿಂತಾಗ ನಿವಾಸಿಗಳು ನೀರಿನ ಟ್ಯಾಂಕ್ ಬಂತೆಂದು ಬಕೆಟ್, ಬಿಂದಿಗೆ ಇತ್ಯಾದಿಗಳನ್ನು ಎತ್ತಿಕೊಂಡು ಓಡೋಡಿ ಬಂದರು. ಇವರು ಸಾಮಾನುಗಳನ್ನೆಲ್ಲಾ ಹೊರಗೆ ತಂದರೆಂದುಕೊಂಡು ಯಂತ್ರ ತನ್ನ ಕೆಲಸ ಪ್ರಾರಂಭಿಸಿಯೇ ಬಿಟ್ಟಿತು. ನಿವಾಸಿಗಳು ಕಕ್ಕಾಬಿಕ್ಕಿಯಾಗಿ ಕೂಗಿಕೊಂಡರು. "ನಿಮ್ಮ ಮನೆ ಕೆರೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಲಾಗಿದೆ. ನಿಮಗೆ ನೋಟೀಸ್ ಕಳಿಸಿದ್ದೇವೆ" ಎಂದರು.
ಕೆರೆಯ ಪಕ್ಕದ ಒಂದು ನಿವೇಶನದಲ್ಲಿ ನನ್ನ ಮಿತ್ರರೊಬ್ಬರು ಮನೆ ಕಟ್ಟಿಸಿಕೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ