ಮಳೆ ಪದ್ಯ

 ಮಳೆ ಪದ್ಯ 

ಮಳೆ ಬರುತ್ತಿದೆ, ಹೊಯ್ಯುತ್ತಿದೆ, 
ಧೋ ಎಂದು ಸುರಿಯುತ್ತಿದೆ.
ಟಪಟಪ ಉದುರುತ್ತಿದೆ.

ತುಂತುರು ತುಂತುರಾಗಿ ಒಮ್ಮೆ
ಪಟಪಟ ಬೀಳುವ ಹನಿ.
ಧಾರಾಕಾರವಾಗಿ ಇನ್ನೊಮ್ಮೆ
ದೇವರು ಸುರಿಸಿದಂತೆ ಕಂಬನಿ.

ಮುಸಲಧಾರೆಯಾಗಿ ಒಮ್ಮೊಮ್ಮೆ
ಓಬವ್ವನ ಒನಕೆ.
ಹನಿಹನಿಯಾಗಿ ಒಮ್ಮೊಮ್ಮೆ
ತನಿ ಆವರ್ತನೆ ವಿನಿಕೆ.

ಜಿನುಗುತ್ತದೆ, ಆಕಾಶಕ್ಕೆ ತೂತು ಬಿದ್ದಂತೆ.
ಕೆಲವೊಮ್ಮೆ ಪುಷ್ಪವೃಷ್ಟಿ 
ಮಣ್ಣಿನ ಕಂಪು ಮೇಲೆದ್ದಂತೆ.
ಕೆಲವೊಮ್ಮೆ ಕುಳಿರ್ಗಾಳಿ ಜೊತೆಯಾಗಿ
ಬೆಚ್ಚಗೆ ಕಂಬಳಿ ಹೊದ್ದಂತೆ.

ಕದ್ದಿಂಗಳು, ಕಗ್ಗತ್ತಲು, ಕಾರ್ಮೋಡದ ರಾತ್ರಿ
ಕೋಲ್ಮಿಂಚು, ಗುಡುಗು, ಸಿಡಿಲುಗಳ ಜೊತೆ.
ಹೂ ಬಿಸಿಲಲ್ಲಿ ಕೆಲವೊಮ್ಮೆ ಸಪ್ತವರ್ಣದ ಸ್ವರ್ಣಲತೆ.
ಶ್ರಾವಣದ ಬಲ್ಸೋನೆಗೆ ಬೇಸತ್ತ 
ಮನೋರಮೆಗೆ ಕತೆ ಕೇಳುವ ಉತ್ಸುಕತೆ.

ಗೌರಿ ಹಬ್ಬದ ದಿವಸ 
ಬೀಳುವ ಗೌರಿ ಜಡಿ.
ಕಾಮದಹನದ ಬಳಿಕ  
ತಣಿಸಲು ರತಿಯ ದಳ್ಳುರಿ.

ನಂಬಲಾರದ ಚಿತ್ತಾ ಮಳೆ .
ತುಂಬಿಕೊಡುವ ಉತ್ತರೆ ಮಳೆ.

ಧೈರ್ಯವಾಗಿ ಮುಂದೆಯೇ ಕಾರುವ ಮುಂಗಾರು.
ಬೆನ್ನಹಿಂದೆ ಕಾರುವ ಹಿಂಗಾರು.

ಕಂಗೊಳಿಸುವ ಹಸಿರು ಹೊಳೆ.
ಉತ್ತು ಬಿತ್ತು ಪೈರು ಬೆಳೆ.
ಟಿವಿಯಲ್ಲಿ ಸದಾ ಕೂಗಾಡುವ ರಣಮಳೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ