ಮೂರು ಮಿನಿಕಥೆಗಳು

ಸಿ. ಪಿ. ರವಿಕುಮಾರ್ 

ಮುಕ್ತಾಯ 


ಅವರು ಮನೆಯಲ್ಲಿ ಇಂಗ್ಲಿಷ್ ಮಾತಾಡುವುದನ್ನು ರೂಢಿ ಮಾಡಿಕೊಂಡಿದ್ದರು. ಗಂಡ ಮತ್ತು ಹೆಂಡತಿ ಅವತ್ತು ರಜಾ ಆಚರಿಸಲು ಹೊರಗೆ ಹೊರಟಿದ್ದರು. ಗಂಡ ಕಾರಿನಲ್ಲಿ ಕುಳಿತು ಹೆಂಡತಿಗಾಗಿ ಕಾಯುತ್ತಿದ್ದ. ಒಂದೆರಡು ಸಲ ಹಾರ್ನ್ ಮಾಡಿ ಆಕೆಯ ಗಮನ ಸೆಳೆಯಲು ಪ್ರಯತ್ನಿಸಿಯೂ ಆಗಿತ್ತು. ಆಕೆ ತನ್ನ ಶೃಂಗಾರ ಮುಗಿಸಿ ಹೊರಗೆ ಬರುವಾಗ ಗಡಿಬಿಡಿಯಲ್ಲಿ ಮನೆಗೆ ಬೀಗ ಹಾಕುವುದನ್ನೇ ಮರೆತು ಕಾರಿನತ್ತ ಧಾವಿಸುವುದನ್ನು ಕಂಡು ಗಂಡ
"ದ ಲಾಕ್" ಎಂದು ಕೂಗಿದ. ಆಕೆ ದಿಗ್ಭ್ರಮೆಯಾದವಳಂತೆ ಏನೂ ತೋರದೆ ಅಲ್ಲೇ ನಿಂತಳು. ಗಿಡಕ್ಕೆ ನೀರು ಹಾಕುತ್ತಿದ್ದ ಪಕ್ಕದ ಮನೆಯವನು ತಲೆಯೆತ್ತಿ ನೋಡಿದ.
"ದ ಲಾಕ್! ದಲಾಕ್!" ಎಂದು ಗಂಡ ಮತ್ತೆರಡು ಬಾರಿ ಕೂಗಿದ.
ಕತೆ ಮುಗಿಯಿತು.

ಹೆಸರಿನಲ್ಲೇನಿದೆ?


"ನಮ್ಮ ಬಾರ್ ಗೆ ಗಿರಾಕಿಗಳೇ ಇಲ್ಲವಲ್ಲ" ಎಂದು ಮಂಜು ಪೇಚಾಡಿದ.
"ಯಾಕೆ ಅಂದ್ರೆ ಬೀದಿಗೊಂದು ಮಧುಲೋಕ ಇದೆ," ಎಂದು ಸಂಜು ಸಮಜಾಯಿಷಿ ಹೇಳಿದ. ಗಿರಾಕಿಗಳೇ ಇಲ್ಲದ ಕಾರಣ ಅವರು ತಾವೇ ಕುಡಿಯುತ್ತಾ ಕುಳಿತಿದ್ದರು.
"ಏನಾದರೂ ಮಾಡಲೇ ಬೇಕು."
"ಹೊಸ ಬಾರ್ ಗಳೆಲ್ಲಾ ನೋಡು, ಹ್ಯಾಗೆ ಚಮಕ್ ಚಮಕ್ ಅಂತ ಹೊಳೆಯುತ್ತಾ ಇವೆ."
"ರೀಮಾಡೆಲಿಂಗ್ ಮಾಡಿಸಬೇಕು."
"ಒಂದು ಹೊಸಾ ಹೆಸರು ಕೂಡಾ ಇಡಬಹುದು."
"ಗ್ರೇಟ್ ಐಡಿಯಾ. ಏನು ಹೆಸರಿಡಬಹುದು?"
"..."
"..."
"ಹೂಂ, ಹೊಳೀತು!"
"ಹೇಳು!"
"ಅಬ್ ಕೀ ಬಾರ್ ಅಂತ ಇಟ್ರೆ?"


ಹೆಸರಿನ ಸೊಗಸು 

ವಾದಿರಾಜನನ್ನು ಎಲ್ಲರೂ ವಾದಿ ಎಂದೇ ಕರೆಯುತ್ತಿದ್ದರು. ಪಾಪ ಅವನು ಎಂದೂ ವಾದಿಸುತ್ತಲೇ ಇರಲಿಲ್ಲವಾದರೂ ಈ ಹೆಸರು ಕಾಯಂ ಆಯಿತು. ಅವನು ಇಂಜಿನಿಯರಿಂಗ್ ಮುಗಿಸಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಅವನ ಟೀಮ್ ಮೇಟ್ ತಮಿಳುನಾಡಿನ ಕೋಮಲ್ ಎಂಬ ಸುಂದರಿ. ಅವಳನ್ನು ಎಲ್ಲರೂ ಕೋಮು ಎಂದು ಕರೆಯುತ್ತಿದ್ದರು. ಆಕೆ ಇವನಿಗೆ ಪ್ರೋಪೋಸ್ ಮಾಡಿದಾಗ ಎಂದೂ ವಾದಿಸದ ವಾದಿ "ಮದುವೆಯಾದ ಮೇಲೆ ನಿನ್ನ ಹೆಸರಿಗೆ ನನ್ನ ಹೆಸರನ್ನು ಸೇರಿಸಿಕೊಳ್ಳಬೇಕು" ಎಂದು ಷರತ್ತು ಹಾಕಿದ.
ಈಗ ಆಕೆ ಕೋಮುವಾದಿ ಎಂದೇ ಪ್ರಸಿದ್ಧಳಾಗಿದ್ದಾಳೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)