ಎಲ್ಲಿ ಹುಡುಕುತ್ತಿರುವೆ ಪ್ರಶ್ನೆಗಳಿಗೆ ಉತ್ತರ?

ಮೂಲ: ಬಾಬ್ ಡಿಲನ್ (2016 ನೊಬೆಲ್ ಪ್ರಶಸ್ತಿ ವಿಜೇತ)
ಕನ್ನಡ ಅನುವಾದ : ಸಿ. ಪಿ. ರವಿಕುಮಾರ್

ಈ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದುಕೊಂಡ ಬಾಬ್ ಡಿಲನ್ ಪ್ರಸಿದ್ಧ ಅಮೆರಿಕನ್ ಗೀತಕಾರ ಮತ್ತು ಹಾಡುಗಾರ.  ಅರವತ್ತನೆಯ ಶತಮಾನದಲ್ಲಿ ಅವನು ಬರೆದು ಹಾಡಿದ ಶಾಂತಿಪರ ಗೀತೆಗಳಿಂದ ಅವನಿಗೆ ಖ್ಯಾತಿ ದೊರೆಯಿತು. "ದ ಆನ್ಸರ್ ಈಸ್ ಬ್ಲೋಯಿಂಗ್ ಇನ್ ದ ವಿಂಡ್" ಅವನ ಪ್ರಸಿದ್ಧ ಗೀತೆ. ಜಗತ್ತಿನಲ್ಲಿ ಕೆಲವು ಜನಾಂಗಗಳ ಶೋಷಣೆಗೆಅಡೆತಡೆಯೇ ಇಲ್ಲದಂತೆ ಇತಿಹಾಸದ ಉದ್ದಕ್ಕೂ ನಡೆದು ಬಂದಿದೆ. ಯುದ್ಧಗಳು ಇತಿಹಾಸದ ಉದ್ದಕ್ಕೂ ನಡೆಯುತ್ತಲೇ ಇವೆ. ಇವುಗಳಿಗೆಲ್ಲ ಯಾವಾಗ ಕೊನೆ? ಈ ಪ್ರಶ್ನೆಗೆ ಉತ್ತರವನ್ನು ಹುಡುಕಬೇಕಾದದ್ದು ಬೇರೆಲ್ಲೂ ಅಲ್ಲ, ನಮ್ಮಲ್ಲೇ. "ಇದು ತಪ್ಪು, ಇದನ್ನು ನಿಲ್ಲಿಸಬೇಕು" ಎಂಬ ನಿರ್ಧಾರ ತೆಗೆದುಕೊಳ್ಳಲು ತಡವೇಕೆ ಎಂಬುದು ಕವಿಯ ಪ್ರಶ್ನೆ. 



ಇನ್ನೆಷ್ಟು ಅಗ್ನಿಗಳನ್ನು ಹಾದು ಬರಬೇಕು ಮಾನವ
ಮನುಷ್ಯನೆಂದು ನೀನವನನ್ನು ಗುರುತಿಸುವ ಮುನ್ನ?
ಇನ್ನೆಷ್ಟು ಸಾಗರಗಳನ್ನು ಈಜಿ ಬರಬೇಕು ಬೆಳ್ಳಕ್ಕಿ
ಮರಳಿನಲ್ಲಿ ಹಾಯಾಗಿ ನಿದ್ರಿಸುವ ಮುನ್ನ?
ಇನ್ನೆಷ್ಟು ತೋಪುಗುಂಡುಗಳು ಹಾರಬೇಕಾಗಿದೆ
ಸಂಪೂರ್ಣ ಅವನ್ನು ನಿಷೇಧಿಸುವ ಮುನ್ನ?
ಎಲ್ಲಿ ಹುಡುಕುತ್ತಿರುವೆ ಗೆಳೆಯಾ ಈ ಪ್ರಶ್ನೆಗಳಿಗೆ ಉತ್ತರ? 

ಗಾಳಿಯಲ್ಲಿ ಅಲ್ಲೇ ಹಾರುತ್ತಿದೆ ಹತ್ತಿರ.

ಎಷ್ಟು ಸಾವಿರ ವರ್ಷ ಬಾಳುವುದು ಪರ್ವತ
ಸಾಗರದಲ್ಲಿ ಕರಗಿ ನೀರಾಗುವ ಮುನ್ನ?
ಎಷ್ಟು ಸಾವಿರ ವರ್ಷ ಬದುಕಿರಬೇಕು ಕೆಲ ಜನಾಂಗಗಳು
ಸ್ವಾತಂತ್ರ್ಯಅವರಿಗೆ ಲಭಿಸುವ ಮುನ್ನ?
ತಿರುಗಿ ನೋಡಿದರೂ ನೋಡದ ಹಾಗೆ ಮಾನವ
ಎಷ್ಟು ಸಲ ಮುಚ್ಚಿಕೊಳ್ಳಬಲ್ಲ ಕಣ್ಣ?
ಎಲ್ಲಿ ಹುಡುಕುತ್ತಿರುವೆ ಗೆಳೆಯಾ ಈ ಪ್ರಶ್ನೆಗಳಿಗೆ ಉತ್ತರ?
ಗಾಳಿಯಲ್ಲಿ ಅಲ್ಲೇ ಹಾರುತ್ತಿದೆ ಹತ್ತಿರ.


ಎಷ್ಟು ಸಲ ಮಾನವನು ನೋಡಬೇಕು ಕತ್ತೆತ್ತಿ
ಮೇಲಿರುವ ಗಗನ ಗೋಚರಿಸುವ ಮುನ್ನ?
ಎಷ್ಟು ಕಿವಿಗಳು ಬೇಕು ಒಬ್ಬ ಮಾನವನಿಗೆ
ಜನರ ರೋದನ ಕಿವಿಗೆ ಕೇಳಿಸುವ ಮುನ್ನ?
ಸತ್ತವರ ಸಂಖ್ಯೆ ಇನ್ನೆಷ್ಟು ಬೆಳೆಯಬೇಕು
ಅತಿಯಾಯಿತು ಎಂದು ಉದ್ಗರಿಸುವ ಮುನ್ನ?
ಎಲ್ಲಿ ಹುಡುಕುತ್ತಿರುವೆ ಗೆಳೆಯಾ ಈ ಪ್ರಶ್ನೆಗಳಿಗೆ ಉತ್ತರ?
ಗಾಳಿಯಲ್ಲಿ ಅಲ್ಲೇ ಹಾರುತ್ತಿದೆ ಹತ್ತಿರ.


ಅನುವಾದ (c) ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)