ಚಿನ್ನದ ಕಣ


ಮೂಲ - ರಾಬರ್ಟ್ ಫ್ರಾಸ್ಟ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 


ಧೂಳೋ ಧೂಳು ಹಾರಾಡುತ್ತದೆ ಊರೊಳಗೆ
ನೆಲಕ್ಕೆ ಔಕಿದ ಹೊರತು ಅದನ್ನು ಕಡಲಿನ ಹಬೆ
ನನ್ನಂಥ ಮಕ್ಕಳ ಕಿವಿಗೆ ಆಗಾಗ ಬೀಳುತ್ತಿತ್ತು ನುಡಿ:
ಈ ಧೂಳಿನಲ್ಲಿ ಸೇರಿದೆ ಒಂದಿಷ್ಟು ಬಂಗಾರದ ಹುಡಿ

ಮುಗಿಲೆತ್ತರ ಎದ್ದ ಧೂಳು ಸಂಜೆಯ ಹೊತ್ತು
ದೈವ ಸಾಕ್ಷಾತ್ಕಾರದಂತೆ ತೋರುತ್ತಿತ್ತು
ದೊಡ್ಡವರು ನನಗೆ ಹೇಳಿದರು, ಮರಿ,
ಇದರಲ್ಲಿ ಬೆರೆತಿದೆ ಬಂಗಾರದ ಹುಡಿ

ಹೀಗಿತ್ತು ಜೀವನ ಗೋಲ್ಡನ್ ಗೇಟಿನಲ್ಲಿ
ಧೂಳಿತ್ತು ಉಂಡದ್ದರಲ್ಲಿ ಕುಡಿದದ್ದರಲ್ಲಿ
ನನ್ನಂಥ ಮಕ್ಕಳಿಗೆ ಎಲ್ಲರೂ ಹೇಳುತ್ತಿದ್ದ ಮಾತು
ನಮ್ಮ ಪಾಲಿನ ಚಿನ್ನದ ಕಣವನ್ನು ನಾವು ತಿನ್ನಬೇಕು


ಕವಿತೆಯ ಸ್ವಾರಸ್ಯ: ಇದನ್ನು ಬರೆದ ರಾಬರ್ಟ್ ಫ್ರಾಸ್ಟ್ ಒಬ್ಬ ಪ್ರಸಿದ್ಧ ಅಮೇರಿಕನ್ ಕವಿ. ಯೌವ್ವನದಲ್ಲಿ ಇವನು ತನ್ನ ಅಜ್ಜ ಬಳುವಳಿಯಾಗಿ ಕೊಟ್ಟ ಹೊಲದಲ್ಲಿ ಒಂಬತ್ತು ವರ್ಷ ದುಡಿದ. ಆದರೆ ಈ ಕೆಲಸದಲ್ಲಿ ಅವನಿಗೆ ಸಿಕ್ಕಿದ್ದು ವೈಫಲ್ಯ ಮತ್ತು ನಿರಾಶೆ.  ಮುಂದೆ ಅವನು ಹೊಟ್ಟೆ ಪಾಡಿಗಾಗಿ ಇಂಗ್ಲಿಷ್ ಅಧ್ಯಾಪಕನಾಗಿ ದುಡಿದ. ರೈತನಾಗಿ ದುಡಿಯುವ ಅವಧಿಯಲ್ಲಿ ಅವನ ಮನಸ್ಸಿನಲ್ಲಿ ಈ ಕವಿತೆ ಹುಟ್ಟಿರಬಹುದು. ಕವಿತೆಯಲ್ಲಿ ಬರುವ ಗೋಲ್ಡನ್ ಗೇಟ್ (ಸೇತುವೆ) ಇರುವುದು ಕ್ಯಾಲಿಫಾರ್ನಿಯಾ ರಾಜ್ಯದಲ್ಲಿ. ಈ ರಾಜ್ಯದಲ್ಲಿ ಒಮ್ಮೆ ಚಿನ್ನದ ಗಟ್ಟಿಗಳು ದೊರೆಯುತ್ತಿದ್ದವು  ಎಂದು ಎಲ್ಲೆಡೆಯಿಂದ ಜನ ಅಲ್ಲಿಗೆ ವಲಸೆ ಬಂದರು. ರಾಬರ್ಟ್ ಫ್ರಾಸ್ಟ್ ಹುಟ್ಟುವ ಮುನ್ನವೇ ಈ ಚಿನ್ನದ ಧಾವಂತ ಮುಗಿದು ಹೋಗಿತ್ತು. ಆದರೂ ಅದನ್ನು ಕುರಿತ ಕತೆಗಳನ್ನು ರಾಬರ್ಟ್ ಫ್ರಾಸ್ಟ್ ಕೇಳಿರಬಹುದು. ಈ ಹಿನ್ನೆಲೆಯಲ್ಲಿ ಕವಿತೆಯನ್ನು ಓದಿ. ಧೂಳಿನಲ್ಲಿ ಚಿನ್ನವಿದೆ ಎಂಬುದನ್ನು ಒಬ್ಬ ರೈತನ ದೃಷ್ಟಿಯಿಂದ ನೋಡಿದಾಗ ಯಾವ ಅರ್ಥ ಹೊಮ್ಮುತ್ತದೆ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)