ಹಿಮ

ಮೂಲ ಅಮೆರಿಕನ್ ಕವಿತೆ  - ಡೇವಿಡ್ ಬರ್ಮನ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

Withered Tree Under Dusk Sky
ಹೊಲದ ಮೂಲಕ ಹಾದು ಹೋಗುತ್ತಿದ್ದೆ ತಮ್ಮ ಸೆತ್ ಜೊತೆ.
ಹಿಮದಲ್ಲಿ ಮಕ್ಕಳು ನಿರ್ಮಿಸಿದ್ದ ದೇವತೆಗಳ ಮೂರ್ತಿಗಳ ಕಡೆ
ಬೆರಳು ಮಾಡಿ ತೋರಿಸಿದೆ.
ನಂತರ ಏನೆನ್ನಿಸಿತೋ ಅವನಿಗೆ ಹೀಗೆಂದೆ -
"ಬಂದೂಕಿನಿಂದ ಹೊಡೆದು ಹಾಕಿದ್ದಾರೆ,
ಕರಗಿ ಹೋಗುತ್ತಾರೆ ಕುಸಿದು ಬಿದ್ದಾಗ ನೆಲಕ್ಕೆ."
ಗುಂಡಿಟ್ಟು ಕೊಂದವರು ಯಾರು ಎಂದು ಕೇಳಿದ.
ಒಬ್ಬ ರೈತ, ಎಂದೆ. 

ನಾವೀಗ ಸರೋವರದ ಮೇಲೆ ನಡೆಯುತ್ತಿದ್ದೆವು.
ಮಂಜು ನೀರಿನ ಛಾಯಾಚಿತ್ರದಂತೆ ತೋರುತ್ತಿತ್ತು.
ಯಾಕೆ ? ಅವನು ಕೇಳಿದ. ಯಾಕೆ ಗುಂಡಿಟ್ಟು ಕೊಂದಿದ್ದು?
ಈ ಸಂಭಾಷಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೋ ತೋಚಲಿಲ್ಲ.
ಆತನಿಗೆ ಸೇರಿದ ಜಮೀನಿನ ಮೇಲೆ ಇದ್ದರಲ್ಲ, ಅಂದೆ.
ಹಿಮ ಸುರಿಯುವಾಗ ಹೊರಗಿನ ಜಗತ್ತು
ಒಂದು ಕೋಣೆಯ ಹಾಗೆ ಕಾಣುತ್ತದೆ. 

ಬೆಳಗ್ಗೆ ಪಕ್ಕದ ಮನೆಯವನೊಂದಿಗೆ
ಉಭಯ ಕುಶಲೋಪರಿ ನಡೆಸಿದಾಗ ದೂರದಿಂದಲೇ ಕೂಗಿ
ನಮ್ಮ ಧ್ವನಿಗಳು ಒಂದನ್ನೊಂದು ಸಮೀಪಿಸಿದಾಗ
ಕೋಣೆಯ ಒಂದು ಗೋಡೆ ವಿಸ್ಫೋಟಿಸಿ
ಪುಡಿಪುಡಿಯಾಗಿ ನೆಲಕ್ಕೆ ಉದುರಿತು. 

ನಾವು ಮತ್ತೆ ತಲೆತಗ್ಗಿಸಿ ಹಿಮ ತೋಡುವುದನ್ನು ಮುಂದುವರೆಸಿದೆವು
ಪಕ್ಕಪಕ್ಕದಲ್ಲೇ, ಮೌನವಾಗಿ ಕೆಲಸ ಮಾಡಿದೆವು. 

ಅವರು ಯಾಕೆ ಅವನ ಜಮೀನಿನ ಮೇಲಿದ್ದರು?
ಎಂದವನು ಕೇಳಿದ.

ಕವಿತೆಯ ಸ್ವಾರಸ್ಯ: ನಮ್ಮ ಜಮೀನುಗಳ ನಡುವೆ ನಾವು ಹಾಕಿಕೊಂಡ ಗೆರೆಗಳನ್ನು ಸುರಿಯುವ ಹಿಮ ಮುಚ್ಚಿಬಿಡುತ್ತದೆ. ಎರಡೂ ಕಡೆಯ ಜನರನ್ನು ಇಬ್ಭಾಗ ಮಾಡುವ ಸರೋವರವನ್ನು ಕೂಡಾ ಹಿಮವು ಘನೀಕರಿಸಿ ಒಂದು ಸೇತುವೆಯನ್ನು ನಿರ್ಮಿಸುತ್ತದೆ.  ಹೇಮಂತ ಋತುವಿನ ಒಂದು ದಿನ ಇಬ್ಬರು ಹುಡುಗರು ನಡೆದುಕೊಂಡು ಹೊರಟಿದ್ದಾರೆ. ಇವರಲ್ಲಿ ಒಬ್ಬ ಇನ್ನೂ ಎಳೆಯ ಹುಡುಗ. ಜಗತ್ತಿನ ನಿಯಮಗಳನ್ನು ಇನ್ನೂ ತಿಳಿಯದವನು.  ಇವನ ಅಣ್ಣನಿಗೆ ಲೋಕಾರೂಢಿಯ ಪರಿಚಯವಿದೆ.  ಅಮೇರಿಕಾ ಸಂಸ್ಥಾನದಲ್ಲಿ ರೈತರು ಬಂದೂಕನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ತಮ್ಮ ಪ್ರಾಪರ್ಟಿಯ ಮೇಲೆ ಯಾರಾದರೂ ಬಂದರೆ ಅವರನ್ನು ಗುಂಡಿಕ್ಕಿ ಕೊಲ್ಲುವುದು ಅಲ್ಲಿ ನ್ಯಾಯಸಮ್ಮತ.  ನೀವು ಹಾಲಿವುಡ್ ವೆಸ್ಟರ್ನ್ ಚಿತ್ರಗಳನ್ನು ನೋಡಿದರೆ ಇದರ ಹಿಂದಿನ ಇತಿಹಾಸ ಕೂಡಾ ನಿಮಗೆ ತಿಳಿಯುತ್ತದೆ.   "ದುಷ್ಟರು" ಕುದುರೆಗಳ ಮೇಲೆ ಕುಳಿತು ಪಿಸ್ತೂಲು ಹಿಡಿದು ಬೇರೊಬ್ಬರ ಜಮೀನಿಗೆ ನುಗ್ಗಿ ಕಳ್ಳತನ-ಸುಲಿಗೆ ಮಾಡುತ್ತಿದ್ದರು. ಹೀಗಾಗಿ ಯಾರಾದರೂ ಇನ್ನೊಬ್ಬರ ಪ್ರಾಪರ್ಟಿಯನ್ನು ದಾಟಿ ಕಾಲಿಟ್ಟರೆ ಅವರನ್ನು ಗುಂಡಿಕ್ಕಿ ಕೊಲ್ಲುವುದು ನ್ಯಾಯಸಮ್ಮತ!  ಯಾರೋ "ದೇವತೆಗಳು" (ನಮ್ಮಲ್ಲಿ ಅತಿಥಿಗಳನ್ನು ದೇವತೆಗಳೆಂದೇ ಪರಿಗಣಿಸುತ್ತಾರೆ) ಒಬ್ಬ ರೈತನ ಹೊಲಕ್ಕೆ ಕಾಲಿಟ್ಟಾಗ ಅವನನ್ನು ಹೊಡೆದು ಉರುಳಿಸಿದ ಘಟನೆ ಅಣ್ಣನ ಮನಸ್ಸಿನಲ್ಲಿ ಅಚ್ಚೊತ್ತಿದೆ.  ಅವನು ತಮ್ಮನಿಗೆ ಹಿಮದ ಮೇಲಿರುವ ಬೊಂಬೆಗಳನ್ನು ತೋರಿಸಿ "ಅವು ದೇವತೆಗಳು, ಅವುಗಳಿಗೆ ರೈತ ಬಂದೂಕಿನಿಂದ ಹೊಡೆದಿದ್ದಾನೆ" ಎಂದು ಸುಮ್ಮನೆ ಉಡಾಫೆ ಹೇಳುತ್ತಾನೆ.

ಹಿಮ ಸುರಿದಾಗ ಪ್ರಾಪರ್ಟಿಗಳ ನಡುವಣ ಬೇಲಿಗಳು ಕೂಡಾ ಹೂತುಹೋಗುತ್ತವೆ.  ಇಡೀ ಜಗತ್ತು ಒಂದೇ ಕೋಣೆಯಂತೆ ಕಾಣುತ್ತದೆ. ಅದೇ ದಿನ ಬೆಳಗ್ಗೆ ಇವನ ಪಕ್ಕದ ಹೊಲದ ರೈತನ ಜೊತೆ ಅವನು ದೂರದಿಂದಲೇ (!) ಸಂಭಾಷಣೆ ನಡೆಸಿದ್ದಾನೆ. ಬಹುಶಃ ಇಂಥ ಸಂಭಾಷಣೆ ಕೂಡಾ ಈಗ ಕಡಿಮೆಯಾಗಿವೆ. ಮನುಷ್ಯ-ಮನುಷ್ಯನ ನಡುವೆ ಗೋಡೆಗಳು ಎದ್ದಿವೆ.  ಬೆಳಗ್ಗೆ ಉಭಯ ಕುಶಲೋಪರಿ  ಸಂಭಾಷಣೆ ನಡೆದಾಗ  ಅದರಿಂದ ಹಿಮದ ಗೋಡೆಯೊಂದು ಕುಸಿದು ಪುಡಿಪುಡಿಯಾದಂತೆ ಅಣ್ಣನಿಗೆ ಅನ್ನಿಸಿದೆ.  ಈಗ ಕವಿತೆಯನ್ನು ಮತ್ತೊಮ್ಮೆ ಓದಿ.








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)