ನಿಮ್ಮ ಪಿನ್ ಬದಲಾಯಿಸಿ

 


ಇವತ್ತೊಂದು ಭಯಾನಕ ಅನುಭವ. ಒಂದೆರಡು ದಿನಗಳ ಹಿಂದೆ ನನ್ನ ಫೋನ್ "ನಿಮ್ಮ ಪಿನ್ ಬದಲಾಯಿಸಿ" ಅಂತ ಒಂದೇ ಸಮನೆ ಹೊಡಕೋತಿತ್ತು. 


ಪಿನ್ನು ಪಿನ್ನೆಂದೇಕೆ ಗೋಳುಗರೆವರು

ನನ್ನ ಪಾಡಿಗೆ ನನ್ನ ಬಿಡದ ಕಾವಲರು


ಎಂದು ನಾನು ಕುಪಿತನಾದೆ. ಎಲ್ಲೆಡೆ ಈ ಕಾವಲರ ಅಥವಾ ಸೆಕ್ಯೂರಿಟಿಯವರದ್ದೆ ರಾಜ್ಯ. 


ಪಿನ್ನು ಪಾಸ್ವರ್ಡ್ ಬಯೋಮೆಟ್ರಿಕ್ಸ್  ಕಾಪ್ಚ

ನನ್ನದೇ ಫೋನ್ ಬಳಸಲು ನನಗೆಷ್ಟು ಕಷ್ಟ 


ಎಂದು ನಾನು ದಾಸರ ಶೈಲಿಯಲ್ಲಿ  ಹಾಡುವ ಮುನ್ನ ಹಾಳಾಗಿ ಹೋಗಲಿ ಎಂದು ಪಿನ್ ಬದಲಾಯಿಸಿದೆ. ಹಳೆಯ ಪಿನ್ನನ್ನೇ ಏನೋ ಒಂದಿಷ್ಟು ಅದಲು ಬದಲು ಮಾಡಿ ಹೊಸ ಪಿನ್ ತಯಾರಿಸಿ ಪಿನ್ ಪೀಡೆಯಿಂದ ಪಾರಾದೆ.   ನನ್ನ  ಹೆಬ್ಬೆಟ್ಟು ಗುರುತಿನಿಂದ ಖುಲ್ ಜಾ ಸಿಮ್ ಸಿಮ್ ಎಂದು ಅಣತಿ ಮಾಡುತ್ತಿದ್ದ ನನಗೆ ಇವತ್ತು ಬೆಳಗ್ಗೆ ಫೋನ್ ಪಿನ್ ಹೇಳೆಂದು ಕೇಳಿತು. ಆಲಿಬಾಬಾನ ತಮ್ಮನಿಗೂ ಇಂಥದ್ದೇ ಏನೋ ಆಗಿರಬಹುದು. ನಿಮಗೆ ಈ ಆಲಿಬಾಬಾ ಕಥೆ ಗೊತ್ತು ತಾನೇ? ಕಳ್ಳರಿಂದ ಕಳ್ಳತನದ ಮಾಲನ್ನು ಕಳ್ಳತನ ಮಾಡಿದವನಿಗೆ ಬಾಬಾ ಎಂಬ ಹೆಸರು ಯಾಕೆ ಬಂತೋ ಎಂದು ನಾನು ಹಿಂದೆ ಯೋಚಿಸುತ್ತಿದ್ದೆ.  ನಮ್ಮ ಜೀವಮಾನದಲ್ಲಿ ಅದೆಷ್ಟೋ ಬಾಬಾಗಳು ಸ್ವಾಮಿಗಳು ಇಂಥದ್ದೇ ಸಾಧನೆಗಳನ್ನು ಮೆರೆದು ನನ್ನ ಅನುಮಾನ ಪರಿಹಾರವಾಗಿದೆ. ಈ ಆಲಿಬಾಬಾನ ತಮ್ಮನ ಹೆಂಡತಿಗೆ ತನ್ನ ಓರಗಿತ್ತಿ ಒಮ್ಮೆಲೇ ಒಳ್ಳೊಳ್ಳೆಯ ಉಡುಗೆ ತೊಟ್ಟು ಒಳ್ಳೊಳ್ಳೆಯ ಅಡುಗೆ ಮಾಡುವುದು ಇವೆಲ್ಲ ಕಣ್ಣು ಕುಕ್ಕಿತು.  ಅವಳು ತನ್ನ ತನಿಖೆ ಮುಂದುವರೆಸಿ ಖಂಡಿತಾ ಆಲಿಬಾಬಾ ಕೈಗೆ ಯಾವುದೋ ನಿಧಿ ದೊರಕಿದೆ ಎಂದು ತೀರ್ಮಾನ ಮಾಡಿದಳು. ಇಂದಿನ ಏಐ ತಂತ್ರಾಂಶಗಳು ಇವಳನ್ನು ನೋಡಿ ಕಲಿಯಬೇಕು. ನಿಮ್ಮ ಡೇಟಾ ಮೇಲೆ ಕಣ್ಣಿಟ್ಟಿರುವ ಎಲ್ಲಾ ತಂತ್ರಾಂಶಗಳು ಇವಳ ಹಾಗೆ ಜಾಣ್ಮೆ ಮೆರೆದರೆ ಹೇಗಿರಬಹುದು ಊಹಿಸಿ. ಆಲಿಬಾಬಾನ ಅತ್ತಿಗೆಯ ಕುತೂಹಲ ಪಾಪ ಅವನ ತಮ್ಮನ ಕುತ್ತಿಗೆಗೆ  ಕತ್ತಿ ತಂದಿತು.   ಇವಳ ಮಾತು ಕೇಳಿ ಅವನು ಅಣ್ಣನ ಬಳಿ ಹೋಗಿ ನಿನಗೆ ಸಿಕ್ಕ ನಿಧಿ ಯಾವುದು ಎಂದೆಲ್ಲಾ ಗೋಗರೆದ. ತಮ್ಮನ ಕಾಟ ತಾಳಲಾರದೆ ಆಲಿಬಾಬಾ ಅವನಿಗೂ ಪಾಸ್ವರ್ಡ್ ಕೊಟ್ಟು ಉಂಡು ಸಂತಸದಿಂದಿರು ಎಂದು ಹರಸಿದರೂ ಗುಹೆಯಲ್ಲಿ ಕಳ್ಳ ಮಾಲನ್ನು ಕೂಡಿಟ್ಟ ದರೋಡೆಕೋರರು ಎಷ್ಟು ಅಪಾಯಕಾರಿ ಎಂದು ಹೇಳಲು ಮರೆಯಲಿಲ್ಲ. ಪಾಸ್ವರ್ಡ್ ಸಿಕ್ಕ ದಿವಸವೇ ಲಾಗಿನ್ ಮಾಡಲು ಆಲಿಬಾಬಾನ ತಮ್ಮ ಹೊರಟೇ ಬಿಟ್ಟ.


ಗುಹೆಯ ಮುಂದೆ ನಿಂತು ಖುಲ್ ಜಾ ಸಿಮ್ ಸಿಮ್ ಎಂದು ಕೂಗಿದಾಗ ಗುಹೆಯ ಸಿಮ್ ಕಾರ್ಡ್ "ಓಕೆ" ಎಂದು ದ್ವಾರವನ್ನು ಖುಲ್ಲಾಯಿಸಿತು.  ಒಳಗೆ ಹೋದ ಆಲಿಬಾಬಾನ ತಮ್ಮ ತನ್ನ ಅಣ್ಣನ ಮಾತನ್ನು ಮರೆತು ಗುಹೆಯಲ್ಲಿ ಏನೇನಿದೆ ಎಂದು ದೊಡ್ಡ ಲಿಸ್ಟ್ ಮಾಡಲು ತೊಡಗಿದ್ದು ಅವನ ದೊಡ್ಡ ತಪ್ಪು.  ಸುಮ್ಮನೆ ಕೈಗೆ ಸಿಕ್ಕಿದ ಒಂದೆರಡು ನಾಣ್ಯದ ಗಡಿಗೆಗಳನ್ನು ತಂದಿದ್ದರೆ ಏನೂ ಆಗುತ್ತಿರಲಿಲ್ಲ.  ಅದರ ಬದಲು ಬಿನ್ ಪ್ಯಾಕಿಂಗ್  ಆಪ್ಟಿಮೈಸೇಷನ್ ಮಾಡುತ್ತಾ ನಿಂತಿದ್ದು ತಪ್ಪಾಯಿತು. ದೂರದಲ್ಲಿ ಕುದುರೆಗಳ ಖುರಪುಟ ಕೇಳಿಸಿದಾಗ ಮಾತ್ರ ಅವನ ಬುದ್ಧಿಗೆ ಇಂಟರಪ್ಟ್ ಸಿಕ್ಕಿದ್ದು.  ಗುಹೆಯ ಬಾಗಿಲು ತೆರೆದು ವಾಪಸ್ ಹೋಗಲು ಕೂಡಾ ಪಾಸ್ವರ್ಡ್ ಬೇಕಾದ ಸ್ಥಿತಿ ಇದೆಯೆಂದು ಅವನಿಗೆ ಮರೆತೇ ಹೋಗಿತ್ತು. ಧಡಪಡಿಸಿ ಪಾಸ್ವರ್ಡ್ ನೆನಪಿಸಿಕೊಂಡ. ಓಹೋ "ಪಾಸ್ವರ್ಡ್" ಎಂಬುದೇ ಪಾಸ್ವರ್ಡ್ ಇರಬಹುದು ಎಂದು ಅದನ್ನು ಪ್ರಯತ್ನಿಸಿದ. ನಂತರ ಗುಹೆಯ ಮಾಲೀಕನ ಹೆಸರೇ ಪಾಸ್ವರ್ಡ್ ಇರಬಹುದು ಎಂದು "ಗುಹೇಶ್ವರ" "ಗುಹೇಶ್ವರ೧೨೩" "ಗುಹೇಶ್ವರ@೧೨೩" ಇವೆಲ್ಲಾ ಆದವು.  ಗುಹೆಯ ಬಾಗಿಲು ತೆರೆಯಿತು, ಆದರೆ ಹೊರಗಿದ್ದ ದರೋಡೆಕೋರರು ಸರಿಯಾದ ಪಾಸ್ವರ್ಡ್ ಹೇಳಿದ್ದ ಕಾರಣ. ಪಾಪ ಆಲಿಬಾಬಾ ತಮ್ಮ ಸಿಕ್ಕಿಬಿದ್ದ.


ನಾನು ಪಿನ್ ಬದಲಾಯಿಸಿದ್ದೆ ಅಂದೆನಲ್ಲವೇ? ಇಂದು ಒಮ್ಮೆಲೇ ಪಿನ್ ಕೊಡು ಎಂದು ಫೋನು ದುಂಬಾಲು ಬಿತ್ತು. ನಾನು ಆಲಿಬಾಬಾ ತಮ್ಮನ ಮಾದರಿಯಲ್ಲಿ ನನ್ನ ಹಳೆಯ ಪಿನ್ನನ್ನೇ ಹಲವು ಸಲ ಕೊಟ್ಟೆ. ಏಕೆ ಇಂಥ ಕೆಲಸ ಮಾಡಿದಿರಿ ಎಂದು ಕೇಳುವಿರಲ್ಲವೇ? ಕೇಳಿ. ಅದು ಕೇಳಬೇಕಾದ ಪ್ರಶ್ನೆಯೇ. ಈ ಹಾಳು ಟಚ್ ಸ್ಕೀನ್ ಒಂದಿದೆಯಲ್ಲ ರೀ. ಒಮ್ಮೊಮ್ಮೆ ಎಷ್ಟೇ ಟಚ್ ಮಾಡಿದರೂ ಏನೂ ಪ್ರತಿಕ್ರಿಯೆ ಇಲ್ಲದೆ ಸುಮ್ಮನೇ ಇರುತ್ತದೆ. ಆ ಅಕ್ಷರಗಳೋ! ಅಂಗೈ ಅಗಲದ ಫೋನಲ್ಲಿ ಎಲ್ಲವನ್ನೂ ಪಕ್ಕಪಕ್ಕದಲ್ಲೇ ಜೋಡಿಸಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ. ಈ ಫೋನಲ್ಲಿ ಮೆಸೇಜ್ ಟೈಪ್ ಮಾಡುವುದು ಅದೆಂಥಾ ಸಾಹಸವೆಂದು ನಿಮಗೇನು ಗೊತ್ತು! ಜೊತೆಗೆ ಈ ಆಟೋಕರೆಕ್ಟ್ ಕಾಟ.  ಪಿನ್ ಟೈಪ್ ಮಾಡುವಾಗ ಎಲ್ಲಿ ಹೋಗಿತ್ತೋ ಹಾಳು ಆಟೋ ಕರೆಕ್ಟ್! ಅಥವಾ ಅದೇ ಹಳೆಯ ಪಿನ್ನನ್ನು ನನ್ನಿಂದ ಬರೆಸಿತೋ! ಒಟ್ಟಿನಲ್ಲಿ ನನಗೆ ಜ್ಞಾನೋದಯ ಆಗಿದ್ದು "ನೀನು ಈಗಾಗಲೇ ಆರು ಸಲ ತಪ್ಪು ಪಿನ್ ನೀಡಿರುವೆ. ಹತ್ತು ಸಲ ತಪ್ಪಾದರೆ ನಿನ್ನನ್ನು ಗಲ್ಲಿನ ಕಂಬಕ್ಕೆ ಹತ್ತಿಸುವೆ" ಎಂಬ ವಾರ್ನಿಂಗ್ ಕಂಡಾಗಲೇ! ಒಮ್ಮೆಲೇ ನನಗೆ ಕುದುರೆಯ ಖುರಪುಟ ಕೇಳಿಸಿತು. 


ಒಮ್ಮೆಲೇ ಹೇಗೆ ಆಲಿಬಾಬಾ ತಮ್ಮನಿಗೆ ಪಾಸ್ವರ್ಡ್ ಮರೆಯಿತೋ ಹಾಗೆ ನನಗೂ ಹಾಳು ಪಿನ್ ಮರೆತೇ ಹೋಯಿತು. ಲುಕಿಂಗ್ ಫಾರ್ ಎ ಪಿನ್ ಇನ್ ಎ ಹೇ ಸ್ಟಾಕ್ ಎಂಬುದು ನೆನಪಿಗೆ ಬಂತು. (ಅದು ಪಿನ್ ಅಲ್ಲ, ನೀಡಲ್ ಎಂದು ನೀವೇನಾದರೂ ಕರೆಕ್ಷನ್ ನೀಡಲು ಬಂದರೆ ಜಾಗ್ರತೆ!) ಈ ಸಂಖ್ಯೆಗೆ ಪಿನ್ ಎಂಬ ಹೆಸರು ಬಂದಿರುವುದು ಏಕೆಂದು ನನಗೆ ಆಗ ತಿಳಿಯಿತು. ಅಷ್ಟರಲ್ಲಿ ನನಗೆ ಉಳಿದಿದ್ದು ಇನ್ನೊಂದೇ ಚಾನ್ಸ್ ಎಂದು ಮೊಬೈಲ್ ಫೋನು ನನಗೆ ಪ್ರೀತಿಯಿಂದ ನೆನಪಿಸಿತು.


ಈಗ ಏನು ಗತಿ! 


ಹಳೇ ಗಂಡನ ಪಾದವೇ ಗತಿ ಎಂದು ಲಾಪ್ ಟಾಪ್ ಕಡೆಗೆ ಓಡಿದೆ. ಸದ್ಯ, ಅದರ ಪಾಸ್ವರ್ಡ್ ಕೈಕೊಡಲಿಲ್ಲ. ಗೂಗಲ್ ಮಾತಾ ನನ್ನನ್ನು ಸ್ಯಾಮ್ಸಂಗ್ ಸ್ಮಾರ್ಟ್ ಥಿಂಗ್ಸ್ ಫೈಂಡ್ ಎಂಬ ಆಶ್ರಮಕ್ಕೆ ಕಳಿಸಿದಳು. ಅಲ್ಲಿದ್ದ ಶ್ಯಾಮಶೃಂಗ ಋಷಿ ನನ್ನನ್ನು ಗುರುತಿಸಿ "ಚಿಂತಿಸಿ ಫಲವಿಲ್ಲ!" ಎಂದು ಧೈರ್ಯ ತುಂಬಿ ನನಗೆ ಅನ್ಲಾಕ್ ಮಂತ್ರ ಉಪದೇಶಿಸಿದರು. 


ಏನಾಶ್ಚರ್ಯ! ನಾನು ಪಿನ್ ನೀಡದಿದ್ದರೂ ನನ್ನ ಫೋನ್ ಖುಲ್ ಜಾ ಸಿಮ್ ಸಿಮ್ ಆಯಿತು. 


ಈಗ ಮತ್ತೊಮ್ಮೆ ಪಿನ್ ಬದಲಾಯಿಸಿದ್ದೇನೆ. ಇದನ್ನು ನಾನು ಮರೆಯಲಾರೆ ಬಿಡಿ. ನಮ್ಮ ಆನಿವರ್ಸರಿ ದಿನಾಂಕ. ಎಲ್ಲ ಗಂಡಂದಿರಿಗೂ ಅದು ಮರೆಯಲಾರದ ದಿವಸ ಅಲ್ಲವೇ?

ಕಾಮೆಂಟ್‌ಗಳು

  1. ಇಂದಿನ ಹೊಸ ತಾಂತ್ರಿಕ ದಿನಗಳಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಎದುರಾಗುವ ಸಮಸ್ಯೆ ಗಳಲ್ಲಿ ಪಿನ್ ಸಹ ಒಂದು. ಇವು ಕೆಲವು ಸಮಯದಲ್ಲಿ ಬೇಕು, ಕೆಲವೊಮ್ಮೆ ಇದು ಏಕೋ ಎನಿಸುತ್ತದೆ. ಈ ಪ್ರಸಂಗಗಳನ್ನು ವಿಡಂಬನಾತ್ಮಕ ವಾಗಿ ಚಿತ್ರಿಸಿರುವ ಪಿನ್ ಬದಲಾಯಿಸಿ ಲೇಖನ ಆಸಕ್ತಿ ಯಿಂದ ಓದಿಸುತ್ತದೆ. ಲೇಖನದಲ್ಲಿ ಬಹುಶಃ ಮೊದಲ ಪಿನ್ ಪ್ರಸ್ತಾಪಿಸಿದ ಆಲಿಬಾಬನ ಕಥೆ ಸಮಯೋಚಿತವಾಗಿದೆ. ಬಹುತೇಕ ಜನರ ಮನದಲ್ಲಿ ಬರುವ ಮನದನ್ನೆಯನ್ನು ಪಡೆದ ದಿನಾಂಕವೇ ಅವರ ಪಿನ್ ಎಂಬ ಊಹೆ ಸರಿಯಾಗಿದೆ. ನಮ್ಮ ಮನಸ್ಥಿತಿಗೆ ಹೊಂದುವಂತೆ ವಿದೇಶಿ ಸ್ಯಾಮ್ಸಂಗ್ ಶ್ಯಾಮಶೃಂಗ ಒಂದು ಅತ್ಯುತ್ತಮ ಕಲ್ಪನೆ. ಆಧುನಿಕತೆಯಲ್ಲಿ ಒಂದು ಪ್ರಹಸನ ಹುಡುಕಿ ಬರೆದ ಲೇಖಕ ರವಿಕುಮಾರ್ ರವರಿಗೆ ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)