ನಿನ್ನ ಕೈಗಳು ಇರಲಿ ನನ್ನ ಕಂಗಳ ಮೇಲೆ (ಪಾಬ್ಲೋ ನೆರುಡಾ)

 ಮೂಲ ಕವಿತೆ: ಪಾಬ್ಲೋ ನೆರುಡಾ

ಅನುವಾದ: ಸಿ. ಪಿ. ರವಿಕುಮಾರ್





ನಿನ್ನ ಕೈಗಳು ಇರಲಿ ನನ್ನ ಕಂಗಳ ಮೇಲೆ ನನ್ನ ಮೃತ್ಯುವಿನ ಸಮಯದಲ್ಲಿ.  
ನಿನ್ನ ಕೈಗಳ ಬೆಳಕು, ಗೋಧಿ ತೆನೆಯ ನವೋಲ್ಲಾಸ 
ಇನ್ನೊಮ್ಮೆ ಹರಿದು ಬರಲಿ ನನ್ನತ್ತ. 
ಮತ್ತೊಮ್ಮೆ ಅನುಭವಿಸುವೆನು ನನ್ನ ವಿಧಿಯನ್ನು ಬದಲಿಸಿದ ಅವುಗಳ ಮೃದುತ್ವ.

ನಾನು ನಿದ್ರಿಸುವಾಗ ನಿನ್ನ ನಿರೀಕ್ಷೆಯಲ್ಲಿ 
ನೀನು ಬದುಕಬೇಕೆಂದು ನನ್ನಾಸೆ. 
ನಿನ್ನ ಕಿವಿಗಳಲ್ಲಿ ಮೊರೆಯುತ್ತಿರಲಿ ಸಮುದ್ರದ ಗಾಳಿ,
ತೀಡುತ್ತಿರಲಿ ನಿನ್ನ ಬಳಿ ನಮಗಿಬ್ಬರಿಗೂ ಆಪ್ಯಾಯವಾಗಿದ್ದ ಕಡಲಿನ ಗಂಧ
ನಾವಿಬ್ಬರೂ ನಡೆಯುತ್ತಿದ್ದ ಕಡಲತೀರದಲ್ಲಿ ಅಡ್ಡಾಡು ಎಂದಿನಂತೆ

ಅನಂತಕಾಲವೂ ಜೀವಿಸಲಿ ನಾನು ಪ್ರೀತಿಸಿದ್ದೆಲ್ಲವೂ
ಇನ್ನು ನೀನೋ ನನಗೆ ಪ್ರಿಯತಮ
ನಿನ್ನನ್ನು ಪ್ರೀತಿಸಿದೆ ಎಲ್ಲಕ್ಕಿಂತಲೂ ಉತ್ಕಟವಾಗಿ
ನಿನ್ನನ್ನು ಹಾಡಿದೆ ಅತ್ಯುಚ್ಚ ಕಂಠದಲ್ಲಿ
ಹೀಗಾಗಿ ಸದಾ ಕುಸುಮಿಸುತ್ತಿರು ಓ ನನ್ನ ಕುಸುಮ!
ನನ್ನ ಪ್ರೀತಿಯು ಆದೇಶಿಸಿದ್ದೆಲ್ಲವೂ ದೊರಕಲಿ ನಿನಗೆ
ನನ್ನ ನೆರಳು ಹಾಯುತ್ತಿರಲಿ ನಿನ್ನ ಕುರುಳೊಳಗೆ
ನನ್ನ ಹಾಡಿಗೆ ಕಾರಣ ತಿಳಿಯಲಿ ಅವರಿಗೆ ಹೀಗೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)