ಕವಿತಾವಾಚನಗಳು (ಚಾರ್ಲ್ಸ್ ಬ್ಯುಕೋವ್ಸ್ಕಿ)

 ಕವಿತಾವಾಚನಗಳು

ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ

ಕನ್ನಡ ಅನುವಾದ: ಸಿ ಪಿ ರವಿಕುಮಾರ್



ಕವಿತಾವಾಚನಗಳಿಗಿಂತಲೂ ಹ್ಯಾಪಮೋರೆಯ ವಸ್ತುಗಳು

ಇಲ್ಲವೇನೋ.

ಗುಂಪಣ್ಣ ಮತ್ತು ಗುಂಪಕ್ಕಗಳು ಒಂದೆಡೆ ಸೇರಿ

ವಾರವಾರವೂ ತಿಂಗಳು ತಿಂಗಳೂ ವರ್ಷವರ್ಷವೂ

ವಯಸ್ಸಿನಲ್ಲಿ ದೊಡ್ಡವರಾಗುತ್ತಾ

ಸಣ್ಣ ಸಭಿಕಸಮೂಹಕ್ಕೆ ಓದುತ್ತಾ

ತಮ್ಮ ಮೇಧಾವೀ ವ್ಯಕ್ತಿತ್ವವನ್ನು ಒಂದುದಿನ 

ಗುರುತಿಸಲಾಗುವುದೆಂದು ಇನ್ನೂ ಆಸೆ ಇಟ್ಟುಕೊಂಡವರು

ಧ್ವನಿಮುದ್ರಿಕೆ ಕ್ಯಾಸೆಟ್ ಇತ್ಯಾದಿ ಮಾಡುತ್ತಾ

ಚಪ್ಪಾಳೆಗಾಗಿ ಕಾಯುತ್ತಾ

ಇವರು ಓದುವುದು ಪರಸ್ಪರರಿಗಾಗಿ

ಇವರು ಯಾರಿಗೂ ಸಿಕ್ಕಿಲ್ಲ

ನ್ಯೂಯಾರ್ಕಿನ ಯಾವ ಪ್ರಕಾಶಕ

ಅಥವಾ ಮೈಲುಗಳ ದೂರದಲ್ಲೂ ಬೇರೊಬ್ಬ.

ಆದರೂ ಅವರು ಓದಿದ್ದೂ ಓದಿದ್ದೇ

ಅಮೆರಿಕದ ಕಾವ್ಯಬಿಲಗಳಲ್ಲಿ

ಎಂದೂ ಧೃತಿಗೆಡದೆ.

ಅವರಿಗೆ ಎಂದೂ ಸಂದೇಹ ಬಂದಿಲ್ಲ

ತಮ್ಮ ಪ್ರತಿಭೆ ತೀರಾ ತೆಳುವಿರಬಹುದು

ಕಣ್ಣಿಗೆ ಕಾಣಿಸದಷ್ಟು ಎಂದು.

ಓದಿಯೇ ಓದುವರು

ಅಮ್ಮಂದಿರ ಮುಂದೆ ಅಕ್ಕಂದಿರ ಮುಂದೆ

ಗಂಡಂದಿರ ಮುಂದೆ ಹೆಂಡತಿಯರ ಮುಂದೆ

ಗೆಳೆಯಗೆಳತಿಯರ ಮುಂದೆ

ಒಡನಾಡಿ ಕವಿಗಳ ಮುಂದೆ

ಮತ್ತು ಎಲ್ಲಿಂದಲೋ ಹೇಗೋ ಇತ್ತ ಅಡ್ಡಾಡುತ್ತಾ

ಬಂದ ಒಂದಿಬ್ಬರು ಅಡನಾಡಿಗಳ ಮುಂದೆ.


ನನಗೆ ನಾಚಿಕೆಯಾಗುತ್ತದೆ ಇವರನ್ನು ಕಂಡು

ಇವರು ಒಬ್ಬರಿನ್ನೊಬ್ಬರ ಬೆನ್ನು ತಟ್ಟುವುದನ್ನು ಕಂಡು

ಇವರ ತೊದಲುವ ಅಸ್ಮಿತೆಯನ್ನು ಕಂಡು

ಇವರ ಧೈರ್ಯಗೇಡಿತನವನ್ನು ಕಂಡು.


ಇವರು ನಮ್ಮ ಸೃಜನಶೀಲರಾದರೆ

ದಯವಿಟ್ಟು ಬೇರೆ ಯಾರಾದರನ್ನೂ ಕೊಡಿ:

ಬೋಲಿಂಗ್ ಆಲಿಯಲ್ಲಿ ಆಡುವ ಒಬ್ಬ ಕುಡುಕ ಪ್ಲಂಬರ್

ನಾಲ್ಕುಸುತ್ತಿನ ಆಟದಲ್ಲಿ ಮೊದಲ ಆಟ ಪ್ರಾರಂಭಿಸುತ್ತಿರುವ ಹುಡುಗ

ರೇಸಿನಲ್ಲಿ ಕುದುರೆಯನ್ನು ನಿಧಾನವಾಗಿ ನಡೆಸಿಕೊಂಡು ಬರುವ ಜಾಕಿ

ತನ್ನ ಡ್ಯೂಟಿ ಮುಗಿಸುತ್ತಿರುವ ಬಾರ್ ಟೆಂಡರ್

ನನ್ನ ಬಟ್ಟಲಿಗೆ ಕಾಫಿ ಸುರಿಯುವ ವೇಟ್ರೆಸ್

ಕುಡಿದು ವರಾಂಡದಲ್ಲಿ ನಿದ್ದೆ ಹೋದವನು

ಒಣಕಲು ಮೂಳೆ ಕಡಿಯುವ ನಾಯಿ

ಸರ್ಕಸ್ ಡೇರೆಯಲ್ಲಿ ಡುರಕಿ ಹೊಡೆಯುವ ಆನೆ

ಸಂಜೆ ಆರರ ಟ್ರಾಫಿಕ್ ದಟ್ಟಣೆ

ಪೋಲಿ ಜೋಕ್ ಹೇಳುವ ಅಂಚೆಯವನು.


ಯಾರೇ ಆದರೂ ಸರಿ

ಯಾರೇ ಆದರೂ ಪರವಾಗಿಲ್ಲ

ಇವರನ್ನು ಬಿಟ್ಟು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)