ಓ ಬರಹಗಾರನಾಗಲು ಬಯಸುತ್ತೀಯೋ?

 ಓ ಬರಹಗಾರನಾಗಲು ಬಯಸುತ್ತೀಯೋ?

ಮೂಲ ಕವಿತೆ: ಚಾರ್ಲ್ಸ್ ಬ್ಯುಕೋವ್ಸ್ಕಿ

ಕನ್ನಡ ಅನುವಾದ: ಸಿ. ಪಿ. ರವಿಕುಮಾರ್



ನಿನ್ನೊಳಗಿನಿಂದ ಅದು ಒದ್ದುಕೊಂಡು ಹೊರಕ್ಕೆ ಬರದಿದ್ದರೆ

ಬೇಡ, ಬಿಟ್ಟುಬಿಡು.

ನಿನ್ನ ಹೃದಯ, ಮನಸ್ಸು, ಬಾಯಿ, ಕರುಳುಗಳ

ಮೂಲಕ ಹಾದು ಮುಖವಾಡ ತೊಡದೆ ಹೊರಬರದಿದ್ದರೆ

ಬೇಡ, ಬಿಟ್ಟುಬಿಡು.

ಕಂಪ್ಯೂಟರ್ ತೆರೆಯ ಮುಂದೆ 

ಅಥವಾ ಟೈಪ್ ರೈಟರ್ ಮುಂದೆ ಬೆನ್ನು ಬಗ್ಗಿಸಿ

ಪದಗಳಾಗಿ ಹುಡುಕುತ್ತಾ

ಗಂಟೆಗಟ್ಟಲೆ ಕೂಡಬೇಕೆಂದಾದರೆ 

ಬೇಡ, ಬಿಟ್ಟುಬಿಡು.

ಪ್ರಸಿದ್ಧಿಗಾಗಿ ಅಥವಾ ಹಣಕ್ಕಾಗಿ ಬರೆಯುತ್ತಿರುವೆಯಾದರೆ

ಬೇಡ, ಬಿಟ್ಟುಬಿಡು.

ಹೆಣ್ಣನ್ನು ಒಲಿಸಿಕೊಳ್ಳಲು ಬರೆಯುತ್ತಿರುವೆಯಾದರೆ

ಬೇಡ, ಬಿಟ್ಟುಬಿಡು.

ಬರೆದದ್ದನ್ನು ಮತ್ತೆ ಮತ್ತೆ ತಿದ್ದಬೇಕಾದರೆ

ಬೇಡ, ಬಿಟ್ಟುಬಿಡು.

ಬರೆಯುವ ಆಲೋಚನೆಯೇ ಕಷ್ಟ ಎನ್ನುವುದಾದರೆ

ಬೇಡ, ಬಿಟ್ಟುಬಿಡು.

ಬೇರೆ ಯಾರನ್ನೋ ಅನುಕರಿಸಿ ಬರೆಯಲು ಹೊರಟಿದ್ದರೆ

ಬೇಡ, ಮರೆತುಬಿಡು.

ನಿನ್ನೊಳಗಿನಿಂದ ಗರ್ಜಿಸುತ್ತಾ ಹೊರಬರಲು ಇನ್ನೂ ಕಾಯಬೇಕೆಂದಾದರೆ

ತಾಳ್ಮೆಯಿಂದ ಕಾಯಿ.

ಅದು ಗರ್ಜಿಸುತ್ತಾ ಎಂದೂ ಹೊರಬರಲೇ ಇಲ್ಲವೇ?

ಬೇರೆ ಏನಾದರೂ ಮಾಡು

ಬರೆದದ್ದನ್ನು ನಿನ್ನ ಹೆಂಡತಿಗೋ

ಗೆಳತಿಗೋ ಗೆಳೆಯನಿಗೋ

ಅಪ್ಪನಿಗೋ ಅಮ್ಮನಿಗೋ

ಅಥವಾ ಬೇರೆ ಯಾರಿಗೋ

ಓದಿ ಹೇಳಬೇಕೆಂದು ಅನ್ನಿಸಿದರೆ

ನೀನಿನ್ನೂ ಸಿದ್ಧನಾಗಿಲ್ಲ.


ಎಷ್ಟೋ ಜನ ಲೇಖಕರ ಹಾಗೆ ಆಗಬೇಡ.

ತಮ್ಮನ್ನು ಲೇಖಕರು ಎಂದು ಕರೆದುಕೊಳ್ಳುವ

ಎಷ್ಟೋ ಸಾವಿರಾರು ಜನರ ಹಾಗೆ ಆಗಬೇಡ,

ಹೊಳಪಿಲ್ಲದ, ಬೋರು ಹೊಡೆಸುವನಾಗಬೇಡ,

ಸೋಗು ಹಾಕಬೇಡ, 

ಸ್ವಪ್ರೇಮದಲ್ಲಿ ಕರಗಿಹೋಗಬೇಡ.


ಗ್ರಂಥಾಲಯಗಳು ತೂಕಡಿಸಿ ತೂಕಡಿಸಿ

ನಿದ್ದೆ.ಹೋಗಿವೆ ನಿನ್ನಂಥವರಿಂದ.

ಬೇಡ.

ಅವರ ಪಟ್ಟಿಗೆ

ಇನ್ನೊಂದನ್ನು ಸೇರಿಸಬೇಡ.


ರಾಕೆಟ್ ತರಹ ಹೊರಹೊಮ್ಮದಿದ್ದರೆ  ನಿನ್ನ ಆತ್ಮದಿಂದ

ಇನ್ನು ಸುಮ್ಮನಿದ್ದರೆ ನಿನಗೆ ಹುಚ್ಚೇ ಹಿಡಿಯುತ್ತದೆ

ಅಥವಾ ಅತ್ಮಹತ್ಯೆಗೋ ಕೊಲೆಗೋ ನೂಕುತ್ತದೆ

ಎಂದಿಲ್ಲವಾದರೆ ಬರೆಯಬೇಡ.

ನಿನ್ನೊಳಗಿನ ಸೂರ್ಯ 

ನಿನ್ನ ಕರುಳನ್ನು ಸುಡುತ್ತಿಲ್ಲವಾದರೆ

ಬರೆಯಬೇಡ.


ಅದಕ್ಕೆ ನಿನ್ನಿಂದಲೇ ಬರೆಸಿಕೊಳ್ಳಬೇಕು ಎಂದಿದ್ದರೆ

ಸಮಯ ಬಂದಾಗ

ತನ್ನಿಂತಾನೇ ಬರೆಯುತ್ತದೆ

ಮತ್ತು ಬರೆಯುತ್ತಲೇ ಇರುತ್ತದೆ

ಇಲ್ಲವೇ ನೀನು ಸಾಯುವವರೆಗೆ

ಇಲ್ಲವೇ ನಿನ್ನಲ್ಲಿ ಅದು ಸಾಯುವವರೆಗೆ.


ಇದು ಬಿಟ್ಟು ಬೇರೆ ಮಾರ್ಗವಿಲ್ಲ.


ಎಂದೂ ಇರಲಿಲ್ಲ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)