ಅನ್ವೇಷಕರು (ಅನುವಾದಿತ ಕವಿತೆ)

 ಅನ್ವೇಷಕರು

ಮೂಲ: ಪಾಬ್ಲೋ ನೆರುಡಾ 

ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 



ಉತ್ತರದಿಂದ ತಂದನು ಅಲ್ಮಾಗ್ರೋ ಗುಡುಗು ಮಿಂಚಿನ ವಂಕಿ.

ಮತ್ತು ಭೂಪಟದ ಮೇಲೆ ಬಾಗಿದಂತೆ ಕುಳಿತನು ಹಗಲೂರಾತ್ರಿ
ಅತ್ತ ಹಿನ್ನೆಲೆಯಲ್ಲಿ ಬೆಳಗುತ್ತಿದ್ದಾಗ ಆಗಸವನ್ನು ವಿಸ್ಫೋಟಗಳು.
ದತ್ತೂರಿಯ ನೆರಳು ಅವನು, ಮುಳ್ಳುಗಿಡದ ಅಂಟಿನ ನೆರಳು
ಐತಂದು ಸ್ಪೇನ್ ದೇಶದಿಂದ ಐಕ್ಯನಾದನು ಒಣಕಲು ಆಕೃತಿಯಲ್ಲಿ
ಕತ್ತು ಬಾಗಿಸಿ ಗಮನಿಸುತ್ತಾ ಭೂಮಿಯ ವ್ರಣಿತ ಹುನ್ನಾರಗಳನ್ನು.


ಕತ್ತಲರಾತ್ರಿ, ಹಿಮ ಮತ್ತು ಉಸುಕು ಇವುಗಳಿಂದ ಆದದ್ದು 
ನನ್ನ ತೆಳ್ಳನೆಯ ಪಿತೃಭೂಮಿ, 
ಮೌನ ಆವರಿಸಿದೆ ಅದರ ಉದ್ದನೆಯ ಅಂಚನ್ನು.
ಅದರ ಕಡಲಗಡ್ಡದಿಂದ ಉಕ್ಕುತ್ತದೆ ನೊರೆ
ಅದರ ಒಡಲನ್ನು ತುಂಬಿದೆ ಇದ್ದಲು ರಹಸ್ಯಮಯ ಮುತ್ತುಗಳಂತೆ.
ಚಿನ್ನ ಉರಿಯುವುದು ಅದರ ಕೈಬೆರಳಲ್ಲಿ ಕೆಂಡದಂತೆ.
ಬೆಳ್ಳಿ ಬೀರುವುದು ನಸುಬೆಳಕು 
ಹಸಿರುಚಂದ್ರಮನಂತೆ
ಈ ಸ್ಮಶಾನಭೂಮಿಯ ನೆರಳ ಮೇಲೆ.

ಸ್ಪೇನ್ ದೇಶದಿಂದ ಬಂದು ಗುಲಾಬಿಯ ಬಳಿಯಲ್ಲಿ
ತೈಲದ ಬಳಿಯಲ್ಲಿ, ದ್ರಾಕ್ಷಾರಸದ ಬಳಿಯಲ್ಲಿ, 
ವೃದ್ಧ ಆಕಾಶದ ಬಳಿಯಲ್ಲಿ ಕೂತವನಿಗೆ 
ಅರಿವಿಲ್ಲ ಒಂದು ದಿನ 
ಕಡಲಹದ್ದಿನ ಲದ್ದಿಯಿಂದ
ಮೇಲೆದ್ದು ಬರಬಹುದು ಇಂಥದ್ದೊಂದು
ಕೋಪಾವಿಷ್ಟ ಶಿಲೆ ಎಂದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)