ಸ್ಫೂರ್ತಿ: ರಾಬರ್ಟ್ ಲೂಯಿ ಸ್ಟೀವನ್ಸನ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್ ನೋಡಿ ನಾನು ಮನೆಯಲ್ಲೇ ಏನೇನು ಕಟ್ಟಬಲ್ಲೆ! ಅರಮನೆ, ದೇವಸ್ಥಾನ, ಕೋಟೆ ಕೊತ್ತಲ ಕಿಲ್ಲೆ! ಸುರಿದುಕೊಳ್ಳಲಿ ಎಷ್ಟು ಸುರಿಯುತ್ತದೋ ಮಳೆ, ನಾನಂತೂ ಕಟ್ಟುವ ಆಟ ಆಡುವೆ ಮನೆಯಲ್ಲೇ! ಮೇಜು ಕುರ್ಚಿಗಳೆಲ್ಲ ಆಗಿ ಬೆಟ್ಟದ ಸಾಲು, ಕೆಳಗೆ ಹಾಸಿದ ಚಾಪೆ ಆಗುವುದು ಕಡಲು! ಗೋಡೆ ಕಟ್ಟುವೆ ಸುತ್ತ ಪುಸ್ತಕಗಳ ಪೇರಿಸಿ, ಕಟ್ಟುವೆನು ಗುಡಿಗೋಪುರ, ಧ್ವಜವ ಮೇಲಿರಿಸಿ! ನಾಲ್ಕು ಕಂಬಗಳಿವೆ ನನ್ನ ಪುಸ್ತಕದರಮನೆಗೆ, ಚಾದರದ ಗೋಪುರವನೆಬ್ಬಿಸುವೆ ಕೊನೆಗೆ, ಮೇಲಿಂದ ರಾಜ ಮೆಟ್ಟಿಲು ಇಳಿಯುತ್ತಾ ಬಂದರೆ, ಸಿದ್ಧವಾಗಿದೆ ಕೆಳಗೆ ಜಹಜುಗಳ ಬಂದರೇ! ಅಮ್ಮನ ಪಾತ್ರೆಗಳೆಲ್ಲವೂ ನನ್ನ ಪಾಲು! ಸಾಲಾಗಿ ನಿಂತಿರುವ ಜಹಜುಗಳ ಸಾಲು! ಕಡಲಲ್ಲಿ ತೇಲುತ್ತಿವೆ ಒಂದೆರಡು ಬೋಟು, ಒಂದು ಅಕ್ಕನ ಪರ್ಸ್, ಒಂದು ತಾತನ ಕೋಟು!! ಗುಡಿಯ ಸುತ್ತಲೂ ದೀಪ ಹಚ್ಚಿಟ್ಟ ಹಾಗೆ ಹೇಗೆ ಮಾಡುವುದೆಂದು ಹೊಳೆದದ್ದೇ ನನಗೆ ತಂದು ಅಜ್ಜಿಯ ಭಾರೀ ಜರತಾರಿ ಸೀರೆ ಸುತ್ತಿರುವೆ, ನೋಡೋಣ ಏನನ್ನುತಾರೆ! ಮುಗಿಯಿತಲ್ಲ ಆಟ,ಕಟ್ಟಿದ್ದು ಸಾಕು ಈಗ ಕಟ್ಟಿದ್ದನ್ನು ಕೆಡವಲೇ ಬೇಕು ಕಟ್ಟಲು ಬೇಕಾಯಿತು ಒಂದೆರಡು ಗಂಟೆ ಕೆಡವಲು ಅಷ್ಟೆಲ್ಲಾ ವ್ಯವಧಾನ ಉಂಟೇ! ಕೋಣೆಯ ತುಂಬಾ ಬಿದ್ದಿರುವ ರಾಶಿ ಸಾಮಾನು, ನೋಡುತ್ತಾ ಕಲ್ಪಿಸಿಕೊಳ್ಳುವೆ ಕಟ್ಟಬಹುದು ಬೇರೇನು, ನಡೆದೇ ಇರುತ್ತದೆ ಕೆಡವಿ ಕಟ್ಟುವ ಆಟ, ಹೊಟ್ಟೆ ಹಾಕುತ್ತಿದೆ ತಾಳ, ಕರೆಯುತ್ತಿದೆ ಪಾಠ