ಚೇಳಿನ ರಾತ್ರಿ

ಮೂಲ: ನಿಸ್ಸೀಮ್ ಎಳಿಕಿಯೆಲ್

ಕನ್ನಡಕ್ಕೆ: ಸಿ. ಪಿ. ರವಿಕುಮಾರ್



ನೆನಪಿದೆ ನನಗೆ ನನ್ನ ತಾಯಿಯನ್ನು ಚೇಳು ಕಚ್ಚಿದ ರಾತ್ರಿ.
ಹತ್ತು ಗಂಟೆ ನಿರಂತರ ಸುರಿದ ಮಳೆಗೆ ಬೇಸತ್ತು
ಅಕ್ಕಿಯ ಚೀಲದ ಕೆಳಗೆ ಬಂದು ಸೇರಿಕೊಂಡಿತ್ತು.
ಕೋಣೆಯ ಕತ್ತಲಿನಲ್ಲಿ 
ತನ್ನ ಪೈಶಾಚಿಕ ಕೊಂಡಿಯಿಂದ ನೀಡಿ ವಿಷದ ಚುಚ್ಚುಮದ್ದು
ಮತ್ತೊಮ್ಮೆ ಮಳೆಯನ್ನು ಎದುರಿಸಲು ನಿರ್ಧರಿಸಿತು.
ನೊಣಗಳ ಹಿಂಡಿನ ಹಾಗೆ ಬಂದು ಸೇರಿದ ರೈತಾಪಿ ಜನ
ಗುಂಯ್ ಗುಟ್ಟಿದರು ನೂರಾರು ಸಲ ದೇವರ ಹೆಸರನ್ನ
ದುಷ್ಟಶಕ್ತಿಯನ್ನು ಮಾಡಲು ಶಮನ.

ಕೈಯಲ್ಲಿ ಹಿಡಿದು ಲಾಂದ್ರ ಮೋಂಬತ್ತಿ
ಮಣ್ಣಿನ ಗೋಡೆಯ ಮೇಲೆ ನಡೆದಾಡುತ್ತಿರಲು ಚೇಳುನೆರಳು 
ಹೋದರು ಅದನ್ನು ಬೆಂಬತ್ತಿ
ಯಾರಿಗಾದರೂ ಸಿಕ್ಕಿದ್ದರೆ ಕೇಳು.

ಬಂದವರು ಲೊಚಗುಟ್ಟಿದರು.
ಏನೇನೋ ಕತೆ ಕಟ್ಟಿದರು.
ಚೇಳು ಓಡಾಡಿದಾಗೆಲ್ಲನಿನ್ನ ರಕ್ತದಲ್ಲೂ 
ವಿಷ ಹರಡುವುದು ಎಂದರು.
ಒಂದು ಕಡೆ ತೆಪ್ಪಗೆ ಬಿದ್ದಿದ್ದರೆ ಸಾಕು ಹಾಳಾದ್ದು!

ನಿನ್ನ ಪೂರ್ವಜನ್ಮದ ಕರ್ಮ! ಸುಟ್ಟುಹೋಗಲಿ ಇಂದು!
ಮುಂದಿನ ಜನ್ಮದ ನೋವು ಕಡಿಮೆಯಾಗುವುದು ಬಿಡು!
ಜಗತ್ತಿನಲ್ಲಿದೆ ಕೆಟ್ಟದ್ದು ಒಳ್ಳೆಯದು ಎರಡೂ,
ಕೆಟ್ಟದ್ದು ಒಂದಿಷ್ಟು ನಾಶವಾದೀತು! 

ವಿಷವು ನಿನ್ನ ದೇಹವನ್ನು ಮಾಡಲಿ ಶುದ್ಧ,
ನಶಿಸಲಿ ಮೋಹ,ಮತ್ಸರ,ಲೋಭ,ಕಾಮಕ್ರೋಧ!
ಹೀಗೆ ಮಾತಾಡುತ್ತ ಕುಳಿತರು ಅಮ್ಮನ ಸುತ್ತ,
ಅರಿವಿನಿಂದ ಶಾಂತವಾದಂತಿತ್ತು ಅವರ ಚಿತ್ತ.
ಇನ್ನಷ್ಟು ಮೋಂಬತ್ತಿ, ಇನ್ನಷ್ಟು ಲಾಂದ್ರಗಳು,
ಇನ್ನಷ್ಟು ನೆರೆಯವರು, ಇನ್ನಷ್ಟು ಕೀಟಕ್ರಿಮಿ,
ಮತ್ತು ನಿಲ್ಲದೆ ಸುರಿಯುವ ಮಳೆ.
ಅಮ್ಮ ಚಾಪೆಯ ಮೇಲೆ 
ಹೊರಳಾಡುತ್ತಿದ್ದಳು ಅಲ್ಲೇ.

ಅಪ್ಪ ವಿಚಾರವಂತ, ಏನೇನೋ ಪ್ರಯತ್ನಿಸಿದ,
ಪುಡಿ, ಕಷಾಯ, ಮುಲಾಮು, ಔಷಧ,
ಕರಗಿಸಿ ಮೇಣ ಕಚ್ಚಿದ ಕಾಲುಬೆರಳಿನ ಮೇಲೆ 
ಸುರಿದು ಬೆಂಕಿ ಕಡ್ಡಿ ಗೀರಿ ಮಾಡಿದ ಜ್ವಾಲೆ.
ಪೂಜಾರಿ ಬಂದು ಪಠಿಸಿ ಮಂತ್ರ ಮಣಮಣ
ತೀರ್ಥ ಎರಚಿ ಮಾಡಲು ಯತ್ನಿಸಿದ ಶಮನ.

ಯಾವುದಕ್ಕೂ ಬಗ್ಗದ ನೋವು
ಇಪ್ಪತ್ತು ಗಂಟೆಗಳ ನಂತರ 
ಕಳೆದುಕೊಂಡಿತು ಕಾವು.

ಅಮ್ಮ ಮೇಲೆದ್ದು ಕೈ ಮೇಲೆತ್ತಿ ಪ್ರಾರ್ಥಿಸಿದಳು ದೇವರ ದಯ!
ನನ್ನ ಮಕ್ಕಳನ್ನು ಬಿಟ್ಟು ಸದ್ಯ ನನ್ನನ್ನು ಕಚ್ಚಿತಲ್ಲ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)