ಬ್ರಹ್ಮ

 ಮೂಲ: ರಾಲ್ಫ್ ವಾಲ್ಡೋ ಎಮರ್ಸನ್

ಕನ್ನಡಕ್ಕೆ: ಸಿ. ಪಿ. ರವಿಕುಮಾರ್


ದಾರುಣ ಹಂತಕನು ತಾನು ಕೊಂದೆನೆಂದು ಬೀಗಿದರೆ,
ಹತ್ಯೆಯಾದವನು ಭಾವಿಸಿದರೆ ಮುಗಿಯಿತೆಂದು ತನ್ನ ಕತೆ,
ಅವರಿಗೆ ಸರಿಯಾಗಿ ತಿಳಿಯದು  ನನ್ನ ಸೂಕ್ಷ್ಮ ನಡೆ,
ನಾನು ಕಾಪಿಡುವೆ, ದಾಟಿಸುವೆ, ತಿರುಗಿಸುವೆ ಮತ್ತೆ.

ಹತ್ತಿರ ಎನ್ನಿಸುವುದು ನನಗೆ ದೂರವಿರುವುದು, ಮರೆತದ್ದು;
ನೆರಳು ಬೆಳಕುಗಳು ಎರಡೂ ನನಗೆ ಸಮಾನ;
ಅದೃಶ್ಯ ದೇವತೆಗಳು ನನಗೆ  ಕಾಣಿಸಿಕೊಳ್ಳುವರು,
ನನಗೆ ಒಂದೇ ತೂಕ ಪ್ರಸಿದ್ಧಿ, ಅಪಮಾನ.

ತಪ್ಪಾಗಿದೆ ನನ್ನನ್ನು ಕೈ ಬಿಟ್ಟವರ ಲೆಕ್ಕಾಚಾರ,
ನನ್ನನ್ನೇರಿ ಹಾರಿದರೆ ನಾನು ರೆಕ್ಕೆಗಳ ಆಧಾರ,
ಸಂದೇಹವೂ ನಾನೇ, ಸಂದೇಹಿಯೂ ನಾನೇ,
ನಾನು ಬ್ರಾಹ್ಮಣನುಚ್ಚರಿಸುವ ವೇದಸಾರ.

ಕೊರಗುವರು ಬಲಿಷ್ಠ ದೇವತೆಗಳೂ ನನ್ನಾಲಯ ಬಯಸಿ,
ಮರುಗುವರು ಬಯಸಿ ಪವಿತ್ರ ಸಪ್ತರೂ ಇದನ್ನು.
ಉತ್ತಮವ ಹುಡುಕುತ್ತಿರುವ ಓ ಸೌಮ್ಯ ಅನ್ವೇಷಕ!
ಕಂಡುಕೊಂಡರೆ ನನ್ನ ಮಾಡಿದಂತೆ ಸ್ವರ್ಗಕ್ಕೆ ಬೆನ್ನು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)