ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ

ಮೂಲ: ಅವಧಿ ಜಾನಪದ

ಮೇಲೇಳು ಸಿಂಗರಿಸಿಕೋ ಸೀತೆ,
ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ!


ತಲೆಯ ಮೇಲೆ ರೇಷ್ಮೆಯ ಸೆರಗಿನೊಳು 
ಸೀತೆಯ ಮುಖಕಮಲವು ಅರಳುತಿದೆ!
ಹಣೆಯ ಮೇಲೆ ಮಾಣಿಕ್ಯದ ತಿಲಕ 
ತಾರಗೆಯಂತೆ ಬೆಳಗುತಿದೆ!
ಅರಳದೆ ಏನು, ಬೆಳಗದೆ ಏನು
ಸೀತೆಯು ರಘುರಾಮನ ಪ್ರೇಮಲತೆ!
ಮೇಲೇಳು ಸಿಂಗರಿಸಿಕೋ ಸೀತೆ,
ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ!


ಕೈಗಳಲ್ಲಿ ಕಿಂಕಿಣಿಸುವ ಬಳೆ ಕೆಂಪು
ಏನೋ ಗುಣುಗುಣು ಗುನುಗುತಿದೆ
ತೋಳಬಂದಿಯೊಳು ಚಿನ್ನದ ನಡುವೆ
ವಜ್ರವು ಫಳಫಳ ಮಿನುಗುತಿದೆ!
ಗುನುಗದೆ ಏನು ಮಿನುಗದೆ ಏನು 
ಸೀತೆಯು ರಘುರಾಮನ ಪ್ರೇಮಲತೆ!
ಮೇಲೇಳು ಸಿಂಗರಿಸಿಕೋ ಸೀತೆ,
ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ!


ಬಂಗಾರದ ಹೊಳೆಹೊಳೆಯುವ ಡಾಬು
ಸೀತೆಯ ಸೊಂಟವ ಬಳಸುತಿದೆ!
ಕಿವಿಗಳಲ್ಲಿ ತೂಗುವ ಬಿಳಿಮುತ್ತು
ಏನೋ ಹೇಳಲು ಬಯಸುತಿದೆ!
ಬಳಸದೆ ಏನು, ಬಯಸದೆ ಏನು,
ಸೀತೆಯು ರಘುರಾಮನ ಪ್ರೇಮಲತೆ!
ಮೇಲೇಳು ಸಿಂಗರಿಸಿಕೋ ಸೀತೆ,
ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ!


ಕಾಲಿನಲ್ಲಿ ಘಲುಘಲು ಎಂದು
ನೂಪುರ ಹರುಷದಿ ನುಡಿಯುತಿದೆ
ಪದ್ಮಪಾದಗಳ ಕಾಲಂದುಗೆಯೋ
ಸಿಹಿನೋವಿನಲಿ ಮಿಡಿಯುತಿದೆ!
ನುಡಿಯದೆ ಏನು, ಮಿಡಿಯದೆ ಏನು
ಸೀತೆಯು ರಘುರಾಮನ ಪ್ರೇಮಲತೆ!
ಮೇಲೇಳು ಸಿಂಗರಿಸಿಕೋ ಸೀತೆ,
ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)