ಒಂದು ಪುರಾತನ ಸಂಜ್ಞೆ

 ಒಂದು ಪುರಾತನ ಸಂಜ್ಞೆ

ಮೂಲ: ಎಡ್ನಾ ಸೆಂಟ್ ವಿನ್ಸೆಂಟ್ ಮಿಲೇ

ಕನ್ನಡಕ್ಕೆ: ಸಿ. ಪಿ. ರವಿಕುಮಾರ್


ಹಿನ್ನೆಲೆ: ಯೂಲಿಸಿಸ್ ಯುದ್ಧಕ್ಕೆ ಹೋದಾಗ ಅವನ ಹೆಂಡತಿ ಪಿನೊಲಪಿ ಅವನಿಗಾಗಿ ಕಾಯುತ್ತಾಳೆ. ವರ್ಷಗಳು ಕಳೆದರೂ ಅವನು ಹಿಂತಿರುಗಿದೇ ಹೋದಾಗ ಅನೇಕರು ಅವಳನ್ನು ವರಿಸಲು ಮುಂದೆ ಬರುತ್ತಾರೆ. ಅವಳು ಒಂದು ವಸ್ತ್ರವನ್ನು ಹೆಣೆಯಲು ಪ್ರಾರಂಭಿಸಿ ಹೆಣಿಗೆ ಮುಗಿದಾಗ ತಾನು ಮತ್ತೊಮ್ಮೆ ಮದುವೆ ಆಗುತ್ತೇನೆ ಎಂದು ಆಶ್ವಾಸನೆ ನೀಡುತ್ತಾಳೆ. ಬೆಳಗ್ಗೆ ವಸ್ತ್ರ ಹೆಣೆದು ರಾತ್ರಿ ಅದನ್ನು ಬಿಚ್ಚಿಬಿಡುತ್ತಾಳೆ. ಹೀಗಾಗಿ ವಸ್ತ್ರದ ಹೆಣಿಗೆ ಮುಗಿಯುವುದೇ ಇಲ್ಲ. ಕೊನೆಗೆ ಯೂಲಿಸಿಸ್ ಹಿಂದಿರುಗಿ ಬಂದಾಗ ತನ್ನ ಪತ್ರ್ನಿ ತನಗೆ ನಿಷ್ಠೆಯಿಂದ ಕಾಯುವುದನ್ನು ಕಂಡು ಭಾವುಕನಾಗುತ್ತಾನೆ. (ಯುದ್ಧದಿಂದ ಹಿಂದಿರುಗುವಾಗ ಅವನು  ಪರಸ್ತ್ರೀಯರೊಂದಿಗೆ ಸಂಬಂಧ ಹೊಂದಿರುತ್ತಾನೆ.)

ಸೆರಗಿನ ತುದಿಯಿಂದ ಒರೆಸಿಕೊಂಡಾಗ ಒದ್ದೆಗಣ್ಣು 
ಯೋಚಿಸಿದೆ, ಇದನ್ನೇ ಮಾಡಿದಳು ಪಿನೋಲಪಿ ಸಹ
ಒಮ್ಮೆಯಲ್ಲ  ದಿನವಿಡೀ ಮಾಡಿದಳು ಇದನ್ನು
ಸುಲಭವೇ ಹೇಳಿ ದಿನವಿಡೀ ಹೆಣೆಯುವುದು ವಸ್ತ್ರ
ಮತ್ತು ಇಡೀ ರಾತ್ರಿ ಬಿಚ್ಚುವುದು ಹಾಕಿದ ಹೆಣಿಗೆ?
ಸೋತುಹೋಗುವುವು ತೋಳು, ಬಿಗಿಯುವುದು ಕುತ್ತಿಗೆ 
ಯಾವಾಗ ಆದೀತೋ ಎಂದು ಕಾದು ಬೆಳಗಿನ ಹೊತ್ತಿಗೆ
ಎಲ್ಲಿರುವನೋ ಗಂಡ ಮತ್ತು ಬರುವನೋ ಎಂದಿಗೆ 
ಎಂದು ಪರಿತಪಿಸಿ ವರ್ಷಗಟ್ಟಲೆ 
ದುಃಖ ಉಮ್ಮಳಿಸಿ ಒಮ್ಮೆಲೇ
ಮತ್ತೆ ಬೇರೇನಿದೆ ಮಾಡಲು 
ತೋಡಿಕೊಳ್ಳದೆ ತನಗೇ ತನ್ನ ಅಳಲು?

ಯೋಚಿಸಿದೆ ಮತ್ತೆ ಸೆರಗಿನ ತುದಿಗೆ ಒರೆಸಿಕೊಂಡು ಕಣ್ಣು
ಇದೊಂದು ಪುರಾತನ ಸಂಜ್ಞೆ, ಗ್ರೀಕ್ ಕಾಲದ ಶಾಸ್ತ್ರ
ಪತಿ ಯೂಲಿಸಿಸ್ ಕೂಡಾ ಅನುಸರಿಸಿದ ಇದನ್ನು
ಪ್ರಮಾದವೇನಲ್ಲ ಅಲ್ಲ ಪತ್ನಿ ಪಿನೋಲಪಿ ಮಾತ್ರ.
ಅವನೂ ಬಳಸಿದ ಇಡೀ ಸಂಜ್ಞೆಯನ್ನು, ಇಷ್ಟೇ ವ್ಯತ್ಯಾಸ,
ಅದೊಂದು ಸಂಜ್ಞೆ ಮಾತ್ರವಾಗಿತ್ತು ಅವನ ಪಾಲಿಗೆ,
ಭಾವೋನ್ಮಾದದಲ್ಲಿ. ಕಟ್ಟಿಹೋಗಿದೆ ತನ್ನ ನಾಲಿಗೆ
ಎಂದು ನೆರೆದ ಸಭಿಕರಿಗೆ ನೀಡಲು ಸೂಕ್ಷ್ಮ ಸಂದೇಶ.
ಪತ್ನಿ ಪಿನೋಲಪಿಯನ್ನು ನೋಡಿ ಯೂಲಿಸಿಸ್ 
ಮಾಡಿರಬಹುದು ಅವಳ ನಕಲು.
ನಿಜವಾದುದಾಗಿತ್ತು ಆದರೆ 
ಪಿನೋಲಪಿಯ ಅಳಲು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)