ಜೀವನವೊಂದು ಕನಸು
ಮೂಲ: ಲೂಯಿಸ್ ಕ್ಯಾರಲ್
ಕನ್ನಡಕ್ಕೆ: ಸಿ. ಪಿ. ರವಿಕುಮಾರ್
ಹೊಳೆಯುವ ಸೂರ್ಯನ ಕೆಳಗೊಂದು ದೋಣಿ
ಕನಸೋ ಎಂಬಂತೆ ಮುಂದೆ ಸಾಗುತ್ತಿದೆ ತೇಲಿ
ಜುಲೈ ತಿಂಗಳ ಸಾಯಂಕಾಲದಲ್ಲಿ.
ಮೂವರು ಮಕ್ಕಳು ಕೂಡುತ್ತಾರೆ ಹತ್ತಿರ
ಕಣ್ಣಲ್ಲಿ ಕಿವಿಯಲ್ಲಿ ತುಂಬಿರುವ ಕಾತರ
ಕತೆಯೊಂದನ್ನು ಕೇಳಬೇಕೆಂಬ ಆತುರ.
ಇಂದು ಪೇಲವವಾಗಿದೆ ಅಂದು ಹೊಳೆದ ಆಕಾಶ
ಶಾಂತವಾದಂತೆ ಪ್ರತಿಧ್ವನಿ, ಬರಿದಾದಂತೆ ಸ್ಮೃತಿಕೋಶ
ಸತ್ತು ಬಿದ್ದಿದೆ ಜುಲೈ ತಾಳಲಾರದೆ ಶಿಶಿರದ ಆಕ್ರೋಶ.
ನನ್ನನ್ನು ಅವಳು ಇನ್ನೂ ಕಾಡುತ್ತಾಳೆ ಭೂತವಾಗಿ,
ಆಲಿಸ್, ಮೋಡಗಳಲ್ಲಿ ತೇಲುತ್ತಾ ಸಾಗಿ,
ಜಾಗೃತ ಕಣ್ಣುಗಳಿಂದ ನೋಡಲಾಗದ ಹುಡುಗಿ.
ಕಥೆ ಎಂದರೆ ಇನ್ನೂ ಆಸೆ ಮಕ್ಕಳಿಗೆ
ಕಣ್ಣಲ್ಲಿ ಕುತೂಹಲ, ಅಮೃತ ಕಿವಿಗಳಿಗೆ,
ಲಗುಬಗೆಯಿಂದ ಬಂದು ಕೂಡುವರು ಬಳಿಗೆ.
ಕೌತುಕಲೋಕದಲ್ಲಿ ವಿಹರಿಸುವರು ಅವರು
ಕನಸುಗಳ ಕಾಣುತ್ತ ದಿನವ ಕಳೆಯುವರು
ಬೇಸಗೆಗಳು ಬಂದರೂ ಬೇಸಗೆಗಳು ಮುಗಿದರೂ.
ತೇಲುತ್ತಾ ಸಾಗುವರು ತೊರೆಯ ಹರಿವಿನಲಿ,
ಬಂಗಾರದ ಬೆಳಕನ್ನು ಸ್ವೀಕರಿಸಿ ಅರಿವಿನಲಿ,
ಜೀವನವೊಂದು ಕನಸಲ್ಲದೇ ಬೇರೇನು ಹೇಳಿ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ