ನನ್ನ ನವೆಂಬರ್ ಅತಿಥಿ

 


ಮೂಲ: ರಾಬರ್ಟ್ ಫ್ರಾಸ್ಟ್

ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಅತಿಥಿಯಾಗಿ ತಂಗಿರುವಾಗ ನನ್ನೊಂದಿಗೆ ನನ್ನ ಶೋಕ
ಅವಳಿಗೆ ಆಪ್ಯಾಯವಾದದ್ದು ಚಳಿಗಾಲದ ಮಳೆ
ಎಂಥ ಸುಂದರ ದಿನಗಳು, ಭೂಮಿಯ ನಾಕ
ಎನ್ನುತ್ತ ಓಡಾಡಿ ತೊಯ್ದ ನೆಲದ ಮೇಲೆ
ನೋಡುತ್ತ ನಿಲ್ಲುವಳು ಬೋಳು ಮರವನ್ನು ತದೇಕ.

ನನಗೆ ಇರಗೊಡದು ಅವಳ ಸಂತೋಷ.
ನನ್ನ ಕೆಲಸ ಅವಳ ಮಾತು ಕೇಳುವುದೇ.
ಹಕ್ಕಿಗಳು ಹೋದದ್ದಕ್ಕೆ ಇವಳಿಗೆ ಹರ್ಷ
ಮಂಜು ಬಿದ್ದಾಗ ತನ್ನ ಬೂದಿ ಬಣ್ಣದ ಮೇಲುದೆ
ಹೊಳೆಯವುದು ಬೆಳ್ಳಿಯಂತೆ ಎಂದು ಇವಳ ಉಲ್ಲಾಸ.

ಬರಿದಾಗಿ ಬೋಳಾಗಿ ನಿಂತಿರುವ ಮರಗಳು
ಬಣ್ಣ ಮಾಸಿದ ಭೂಮಿ, ಭಾರವಾದ ಆಕಾಶ
ಇವುಗಳಲ್ಲಿವಳು ಸೌಂದರ್ಯ ಕಾಣುವಳು
ನಿನ್ನ ಕಣ್ಣಿಗೆ ಕಾಣದೇ ಈ ಚೆಲ್ವು ಲವಲೇಶ,
ಹಾಗೇಕೆಂದು ನನ್ನನ್ನು ಮತ್ತೆಮತ್ತೆ ಕೇಳುವಳು.

ಹಿಮಪಾತವಾಗುವುದಕ್ಕೂ ಮುನ್ನ, ಬರಿ ಶೂನ್ಯ 
ತುಂಬಿರುವ ನವೆಂಬರ್ ಮಾಸದ ದಿನಗಳನ್ನು ನಾನು
ನೆನ್ನೆ ಮೊನ್ನೆ ಕಲಿತೆನೇ ಪ್ರೀತಿಸುವುದನ್ನ?
ವ್ಯರ್ಥ ಅವಳಿಗೆ ಹೇಳುವುದು ಅದನ್ನು.
ಅವಳ ಹೊಗಳಿಕೆಯೇ ಅವುಗಳಿಗೆ ಚೆನ್ನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)