ಪೋಸ್ಟ್‌ಗಳು

ಫೆಬ್ರವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬರವಣಿಗೆ

 ಮೂಲ: ಕ್ರಿಸ್ಟೊಫರ್ ಸೆಕ್ಸ್ಟನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಬರವಣಿಗೆ ಎಂದರೆ ಸಾಮಾನ್ಯವೆಂದು ತಿಳಿಯದಿರಿ ಅದು ಚರ್ಮವನ್ನು ಸ್ಪರ್ಶಿಸದೇ ಅಪರಿಚಿತನ ಆತ್ಮವನ್ನು ಚುಂಬಿಸುವ ಪರಿ, ಎಂದೂ ಸಂಧಿಸದ ಹೃದಯಗಳ ಮೇಲೆ ಹೆಜ್ಜೆ ಗುರುತುಗಳನ್ನು ಮೂಡಿಸುವ ಕಲೆ, ಜಗತ್ತಿನ ಬಿರುಕುಗಳಲ್ಲಿ ಇಣುಕಿ  "ನೀನು ಒಬ್ಬಂಟಿಯಲ್ಲ" ಎಂದು ಪಿಸುಗುಟ್ಟು ಎಲ್ಲೋ ಯಾರೋ ಒಬ್ಬರು ಅದರ ಪ್ರತಿಧ್ವನಿ ಕೇಳಿಸಿಕೊಳ್ಳುವರೆಂಬ ವಿಶ್ವಾಸ.

ವ್ಯೋಮದಲ್ಲೊಂದು ಹಾಡು

ಇಮೇಜ್
 ವ್ಯೋಮದಲ್ಲೊಂದು ಹಾಡು ಮೂಲ:  ಏಡ್ರಿಯನ್ ಮಿಚೆಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಮಾನವನು ಹಾರಿ ಆಕಾಶದಾಚೆಗೆ ಹೋದ ಘಳಿಗೆ ಹಿಂತಿರುಗಿ ನೋಡಿದನು ಭೂಮಿಯ ನೀಲ ಕಣ್ಣೊಳಗೆ ನಿನ್ನ ಕಣ್ಣುಗಳೇಕೆ ಕಡುನೀಲಿ ಎಂದು ಕೇಳಲು ಉತ್ತರ ಬಂತು: ಕಣ್ಣೀರು ತುಂಬಿರುವ ಕಡಲು  ಕಡಲಿನಲ್ಲಿ ಏಕಿದೆ ಅಷ್ಟೊಂದು ಕಣ್ಣೀರು? ನಾನು ಅತ್ತಿದ್ದೇನೆ ಸಂವತ್ಸರ ಸಹಸ್ರಾರು. ವ್ಯೋಮದಲ್ಲಿ ಸಾಗುತ್ತಾ ಏಕೆ ಕಣ್ಣೀರು ಹಾಕುವೆ? ಏಕೆಂದರೆ ನಾನು ಮಾನವಕುಲಕ್ಕೆ ತಾಯಾಗಿರುವೆ.

ಬೇಕಾದಷ್ಟು

ಇಮೇಜ್
 ಬೇಕಾದಷ್ಟು ಮೂಲ: ಏಮಿ ಶ್ಮಿಟ್  ಅನುವಾದ: ಸಿ ಪಿ ರವಿಕುಮಾರ್ ಕೇಕ್ ತಯಾರಿಸಲು ಕಿತ್ತಳೆಯನ್ನು ಹೆರೆಯುವಾಗ ಒಂಟಿತನ ಬಾಧಿಸುವುದು ಸಾಧ್ಯವಿಲ್ಲ ಯಾರನ್ನೂ. ಮೆತ್ತನೆಯ ಸಿಪ್ಪೆಯನ್ನು ಉಜ್ಜಿದಾಗ ಮಣೆಗೆ  ಇಡೀ ಕೋಣೆಯನ್ನು ತುಂಬಿಕೊಳ್ಳುವುದು ಹಣ್ಣು. ಸುತ್ತಲೂ ಒಮ್ಮೆ ನೋಡಿಕೊಳ್ಳಿ: ಅಗತ್ಯಕ್ಕಿಂತಲೂ ಹೆಚ್ಚೇ ಇದೆ ನಿಮ್ಮಲ್ಲಿ ಎಲ್ಲಾ. ಅದು ಸದಾಕಾಲವೂ ಹಾಗೇ ಇತ್ತು, ಇದುವರೆಗೂ ಮನವರಿಕೆ ಆಗಿರಲಿಲ್ಲ.

ಆಮ್ಹರ್ಸ್ಟ್ ೧೯೧೮

 ಆಮ್ಹರ್ಸ್ಟ್ ೧೯೧೮ ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ನನ್ನ ಮುಖದ ಮೇಲೆ ಇಂದು ಧೂಳಿನ ಸಿಂಚನ ಆಗುವ ಕ್ಷಣದಲ್ಲಿ ಕಂಡಿತು ನನಗೊಂದು ಸ್ವಪ್ನ. ಮರುಕಳಿಸಿದ ಕನಸಿನಲ್ಲಿ ನಾನು ಕಂಡದ್ದು ಏನು - ಬಾಲಕನಾಗಿದ್ದೆ, ಆಟದಲ್ಲಿ ತೊಡಗಿದ್ದೆ ನಾನು. ವಿಚಿತ್ರವೆಂದರೆ ಅಂದಿಗಿಂತ ಹೆಚ್ಚೇನೂ ದುಃಖಿಯಾಗಿರುವಂತೆ ತೋರಲಿಲ್ಲ ನಾನು - ಎಲ್ಲವೂ ಯಥಾಪ್ರಕಾರ - ನಾನು  ದಾರಿಯಲ್ಲಿ ಸಾಕಷ್ಟು ಮುಂದೆ ಬಂದಿದ್ದೇನೆ ಆದರೂ  ಅದೇ ಕನಸು ಪುನರಾವರ್ತನೆ.

ತುದಿಗಾಲಿನ ಮೇಲೆ ನಿಂತವನು

ಇಮೇಜ್
  ತುದಿಗಾಲಿನ ಮೇಲೆ ನಿಂತವನು ಭದ್ರವಾಗಿ ನಿಲ್ಲಲಾರ ರಭಸದಲ್ಲಿ ಮುನ್ನುಗ್ಗುವವನು  ಹೋಗಲಾರ ಹೆಚ್ಚು ದೂರ ಮಂದಗೊಳಿಸುವನು ತನ್ನದೇ ಪ್ರಭೆಯನ್ನು  ಹೊಳೆಯಲು ಪ್ರಯತ್ನಿಸಿದವನು ತನ್ನ ನೈಜ ಸ್ವರೂಪವನ್ನು ಅರಿಯಲಾರ  ತನ್ನನ್ನೇ ಬಣ್ಣಿಸುವವನು ಪರರ ಮೇಲೆ ಅಧಿಕಾರ ಹೊಂದಿದವನು ತನ್ನ ಮೇಲೆ ನಿಯಂತ್ರಣ ಸಾಧಿಸಲಾರ ತನ್ನ ಕೆಲಸಕ್ಕೆ ಸದಾ ಅಂಟಿಕೊಂಡವನು ಬಾಳಬಲ್ಲ ಏನನ್ನೂ ಸೃಷ್ಟಿಸಲಾರ ಡಾವೋದೊಂದಿಗೆ ಸಾಧಿಸಬೇಕೆಂದರೆ ಸಾಮರಸ್ಯ ಸುಮ್ಮನೆ ನಿನ್ನ ಕೆಲಸ ಮಾಡಿ ಬಿಟ್ಟುಬಿಡೋ ಮನುಷ್ಯ. ಮೂಲ: ಲಾವೋ ತ್ಸು  ಅನುವಾದ: ಸಿ ಪಿ ರವಿಕುಮಾರ್

ಚಿನ್ನ

ಇಮೇಜ್
 ಚಿನ್ನ ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ನಿಸರ್ಗದ ಮೊದಲ ಹಸಿರು ಹೊಂಬಣ್ಣದ್ದು, ಹಿಡಿದಿಡಲು ಅವಳಿಗೆ ಅತ್ಯಂತ ಕಷ್ಟದ ಬಣ್ಣ. ಅವಳ ಮೊದಲ ಚಿಗುರೆಲೆಯೊಂದು ಪುಷ್ಪ, ಆದರೆ ಒಂದು ಗಂಟೆಯ ಕಾಲ ಮಾತ್ರ. ಅನಂತರ ಎಲೆಯು ಎಲೆಯಾಗಿಬಿಡುವುದು ಹಾಗೇ ಈಡನ್ ದುಃಖದಲ್ಲಿ ಮುಳುಗುವುದು ಹಾಗೇ ನಸುಕು ದಿವಸದಲ್ಲಿ ಕರಗುವುದು ಚಿನ್ನದ ಯಾವುದೂ ಸದಾ ಚಿನ್ನವಾಗಿರದು.

ಗಡಿಯಾರದವನು

ಇಮೇಜ್
 ಗಡಿಯಾರದವನು ಮೂಲ: ಶೆಲ್ ಸಿಲ್ವರ್ಸ್ಟೀನ್ ಅನುವಾದ: ಸಿ ಪಿ ರವಿಕುಮಾರ್ ಕೇಳಿದನು ಮಗುವನ್ನು ಗಡಿಯಾರದವನು, ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ? "ಕೊಡುವುದಿಲ್ಲ ಒಂದೂ ಕಾಸು!" ಉತ್ತರಿಸಿತು ಮಗು "ಮುಗುಳ್ನಗುಗಳಿದ್ದಷ್ಟು ನನ್ನಲ್ಲಿ ದಿನಗಳಿವೆ!" ಮಗು ಯುವಕನಾದಾಗ ಗಡಿಯಾರದವ ಕೇಳಿದನು, ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ? "ಒಂದು ರೂಪಾಯಿ ಕೊಡಬಲ್ಲೆ, ಹೆಚ್ಚೆಂದರೆ ಎರಡು! ಏಕೆಂದರೆ ನನ್ನವೇ ಬೇಕಾದಷ್ಟು ದಿನಗಳಿವೆ!" ಸಾಯುವ ಘಳಿಗೆಯಲ್ಲಿ ಗಡಿಯಾರದವ ಕೇಳಿದನು, ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ? "ಸಪ್ತಸಾಗರದ ಎಲ್ಲಾ ಮುತ್ತುಗಳನ್ನೂ ಕೊಟ್ಟು ಕೊಡುವೆ ಆಗಸದಲ್ಲಿರುವ ಸಕಲ ತಾರೆ."

ಹೆಚ್ಚು ಪ್ರೀತಿಸುವ ವ್ಯಕ್ತಿ

ಇಮೇಜ್
ಮೂಲ: ಡಬ್ಲ್ಯು ಎಚ್ ಆಡೆನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಕತ್ತೆತ್ತಿ ನೋಡುವಾಗ ನಕ್ಷತ್ರಗಳತ್ತ ನನಗೆ ಒಳಗೊಳಗೇ ಗೊತ್ತು ಅವಕ್ಕೇನೂ ದರದಿಲ್ಲ ನಾನು ನರಕಕ್ಕೆ ಹೋದರೂ ಸತ್ತು  ಭೂಮಿಯ ಮೇಲೆ ಹಾಗಲ್ಲ, ಉಪೇಕ್ಷೆಯು ಅಲ್ಲವೇ ಅಲ್ಲ ಮನುಷ್ಯ ಅಥವಾ ಮೃಗಗಳಿಂದ ನಮಗೆ ಸಿಕ್ಕಬಲ್ಲ ಅತ್ಯಂತ ಕೆಟ್ಟ ವಸ್ತು ಹೇಗಿರುತ್ತಿತ್ತು ನಮ್ಮಲ್ಲಿ ಅನುರಕ್ತಗೊಂಡು ಸುಡುತ್ತಿದ್ದರೆ ನಕ್ಷತ್ರ? ಅವುಗಳ ಭಾವತೀವ್ರತೆಗೆ ಸಮವಾಗಿ ಸ್ಪಂದಿಸಲು ನಮಗೆ ಆಗತ್ತಾ? ಪ್ರೀತಿಯ ತಕ್ಕಡಿಯು ಸಮವಾಗಿಲ್ಲದೇ ಇದ್ದ ಪಕ್ಷ  ನಾನೇ ವಾಲುವುದು ಮೇಲು ಹೆಚ್ಚು ಪ್ರೀತಿಸುವತ್ತ ತಾರೆಗಳ ಅಭಿಮಾನಿ ನಾನೆಂಬುದು ನಿಜವೇ ಆದರೂ ನನಗಾಗಿ ಕ್ಯಾರೇ ಅನ್ನುವುದಿಲ್ಲ ಅವುಗಳಲ್ಲಿ ಯಾರೂ ಈಗ ಅವುಗಳ ಕಡೆಗೆ ನೋಡುತ್ತಾ  ಮನದಟ್ಟಾಗುತ್ತಿದೆ ನನಗೂ  ಬೆಳಗಿಂದ ಅಷ್ಟೇನೂ ಕಾಡಿಲ್ಲ ಅವುಗಳ ಅನುಪಸ್ಥಿತಿ ನನ್ನನ್ನು. ತಾರೆಗಳೆಲ್ಲಾ ಒಣಗಿ ಉದುರಿಹೋದರೆ ಒಂದು ಪಕ್ಷ ಕಲಿಯಬಲ್ಲೆ ನೋಡುತ್ತಾ ನಿಲ್ಲುವುದು ಶೂನ್ಯ ಅಂತರಿಕ್ಷ ಅನುಭವಿಸಲು ಕಲಿಯಬಲ್ಲೆ ಅದರ ಭವ್ಯ ಅಂಧಕಾರ ಸ್ವಲ್ಪ ಕಷ್ಟವಾದೀತು, ಆದರೂ ಕಲಿಯಬಲ್ಲೆ, ಖಚಿತ.