ಕುಂಭದ ಹಲವು ಮುಖಗಳು

ಕುಂಭದ ಹಲವು ಮುಖಗಳು




ಸಿ ಪಿ ರವಿಕುಮಾರ್

ಪ್ರತಿದಿನವೂ ಓದುತ್ತಾರೆ 
ಪ್ರತಿದಿನವೂ ನೋಡುತ್ತಾರೆ 
ಕೋಟ್ಯಂತರ ಜನ.
ಮುದುಡಿದೆ ಮನ
ತಾವು ಹೋಗಲಾರದ ಮಹಾಕುಂಭಕ್ಕೆ ತುಡಿದು.
ಕಟ್ಟಿ ಹಾಕಿದ್ದಾರೆ ಯಾರೋ ಕಂಭಕ್ಕೆ ಹಿಡಿದು
ಎಂದು ನಿಡುಸುಯ್ಯುತ್ತಾರೆ

ಹೇಗೆ ಹೋಗುವುದು ಅಲ್ಲಿಗೆ
ದೂರದ ದಿಲ್ಲಿಗೆ
ಇರಲು ಎಲ್ಲಿ ಸ್ಥಳ
ಯೋಚಿಸಿ ವ್ಯಾಕುಲ
ಹೋಗಲಾರದು ಮಹಾಕುಂಭಕ್ಕೆಂದು ಮಿಡಿದು.
ಕಟ್ಟಿ ಹಾಕಿದ್ದಾರೆ ಯಾರೋ ಕಂಭಕ್ಕೆ ಹಿಡಿದು
ಎಂದು ನಿಡುಸುಯ್ಯುತ್ತಾರೆ.

ಪುಣ್ಯವಂತರು ಹೋಗಿ ಬಂದರು
ಅಲ್ಲಿಂದ ಗಂಗೆ ತಂದರು
ಪಾಪಿಗೆ ಇಷ್ಟೇ ಪ್ರಾಪ್ತಿ
ಇಷ್ಟೇ ನಮ್ಮ ವ್ಯಾಪ್ತಿ
ಶಿವರಾತ್ರಿ ಜಾಗರಣೆ ಉಪವಾಸ ಪಾರಣೆ
ಡೊಂಕು ಮಣ್ಣು ನೆಲಕ್ಕೆ ಸಗಣಿ ಸಾರಣೆ
ಎಂದು ಹತಾಶರಾಗುತ್ತಾರೆ.

ಮೇಳಕ್ಕೆ ಬಂದಿಳಿದ ಜನ
ಭದ್ರಮಾಡುತ್ತಾರೆ ಜೋಬಿನ ಧನ
ಕಳೆದುಹೋಗುವ ಭಯ
ಭದ್ರವಾಗಿ ಹಿಡಿದು ಕೈಯ
ಮುಳುಗಿ ಏಳುತ್ತಾರೆ ಮೂಗು ಮುಚ್ಚಿಕೊಂಡು
ಹಣೆಗೆ ವಿಭೂತಿ ಹಚ್ಚಿಕೊಂಡು
ಗೆದ್ದೆವು ಎಂದು ಬೀಗುತ್ತಾರೆ

ಇಲ್ಲಿ ನಿಲ್ಲಿ ಬಂದು ಹತ್ತಿರ
ಸರಿಯಾಗಿ ಉಟ್ಟುಕೊಳ್ಳಿ ಧೋತರ
ತೆಗೆಯುತ್ತೇನೆ ಚಿತ್ರ, ನಗಬೇಕು,
ಹಾಗೇಕೆ ಗಂಭೀರವಾಗಿರಬೇಕು
ಎಲ್ಲರಿಗೂ ಸಿಕ್ಕುವುದೇ ಇಂಥ ಮಹಾಪ್ರವಾಸ
ವಿಮಾನದಲ್ಲಿ ಕೂತು ಹೀಗೆ ನಿರಾಯಾಸ
ಎಂದು ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ

ಅಷ್ಟೆಲ್ಲಾ ಕೋಟಿ ಹಣ 
ಗಳಿಸಿ ಏನು ಪ್ರಯೋಜನ
ಅಮೇರಿಕಾದಲ್ಲಿ ಸಿಕ್ಕುವುದೇ ಮಹಾಕುಂಭ
ಡಿಸ್ನಿ ಲ್ಯಾಂಡ್, ಲೇಕ್ ಟಾಹೋ ಅಂತೆಲ್ಲಾ ಜಂಭ
ಕಳಿಸೋಣ ನಾವೂ ವಿಡಿಯೋ 
ನನ್ನ ಸರ ಕಾಣುತ್ತಿದೆಯೋ 
ಎಂದು ತಂತ್ರ-ಜ್ಞಾನಕ್ಕೆ ಮೊರೆ ಹೋಗುತ್ತಾರೆ.

ವಾತಾನುಕೂಲಿತ ಆಫೀಸಿನಲ್ಲಿ
ಅಂಕಿಸಂಖ್ಯೆಗಳು ಮಿಲಿಯನ್ ಆಸುಪಾಸಿನಲ್ಲಿ
ಎಷ್ಟು ಮೇಲಾ ಬಜೆಟ್ಟು
ಇದಾದ ನಂತರ ಏನು ನೆಕ್ಸ್ಟು
ಹೇಗೆ ಚಲಿಸುತ್ತದೆ ಎಕಾನಮಿಯ ನೀಡಲು
ಮುಂದಾಗದಿದ್ದರೆ ಜನ ವೆಚ್ಚ ಮಾಡಲು
ಎಂದು ಗೋಡೆಯ ಮೇಲೆ ಬೆಳಕು ಬೀರುತ್ತಾರೆ

ಹರಿದು ಬರುತ್ತದೆ ಟೀಕೆ 
ಇಂಥ ಮೇಳ ನಮಗೆ ಬೇಕೇ 
ರಾಮ್ ತೇರೀ ಗಂಗಾ ಮೈಲೀ 
ಅದೆಷ್ಟು ಪ್ಲಾಸ್ಟಿಕ್ ಬಾಟಲ್ ಥೈಲಿ
ಹೀಗೆ ಮಾತು ಹರಿಯುತ್ತದೆ ಹಾಗಂತೆ ಹೀಗಂತೆ
ಗಂಗೆಯಲ್ಲಿ ಏನೇನೋ ಹರಿದು ಬಂದಂತೆ
ಮುಂದಿನ ಚರ್ಚೆ ಮ್ಯಾಚ್ ಯಾರು ಗೆಲ್ಲುತ್ತಾರೆ


ಹನ್ನೆರಡು ವರ್ಷಕ್ಕೊಮ್ಮೆ ಮಾತ್ರ ಕುಂಭ
ಕನ್ನಡ ತರಗತಿಯಲ್ಲಿ ಪ್ರತಿವರ್ಷ "ಎನ್ನ ಕಾಲೇ ಕಂಭ"
ಮಾಡಿದ ಪಾಪ ಅಷ್ಟೇ ಅಲ್ಲವಂತೆ
ಮುಂದೆ ಮಾಡುವುದೂ ಕಳೆಯುವುದಂತೆ
ಮಾಡಿದವರ ಪಾಪ ಆಡಿದವರ ಬಾಯಲ್ಲಿ
ಸಪ್ರಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಶ್ಯತಿ 
ಅದೇಕೋ ಕಣ್ಮಿಟುಕಿಸಿ ನಕ್ಕಂತೆ ಕಾಣುತ್ತಿದೆ ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)