ಗ್ರಂಥಾಲಯ

 ಗ್ರಂಥಾಲಯ

ಮೂಲ ಕವಿತೆ: ಆಲ್ವಿ ಗ್ಯಾಲಘರ್
ಅನುವಾದ: ಸಿ ಪಿ ರವಿಕುಮಾರ್

ಅವಳು ನಮ್ಮನ್ನು ಇಲ್ಲೇಕೆ ಕರೆತರುತ್ತಿದ್ದಳೋ ಪ್ರತಿದಿನ ಅಷ್ಟೊಂದು ಆಸ್ಥೆಯಿಂದ.
ಅವಳಾಗ ಯುವತಿ, ಸಮಾಜದಲ್ಲಿ ಹಿಂದೆ ಬಿದ್ದವಳು,
ಆದರೆ ನಾವು ಬದುಕುತ್ತಿದ್ದ ಬದುಕಿಗಿಂತಲೂ
ಭಿನ್ನವಾದ ಬದುಕಿನ ವಿವರಗಳು ಈ ಪುಸ್ತಕಗಳಲ್ಲಿ ಇದ್ದವೆಂದು
ಅವಳಿಗೆ ತಿಳಿದಿತ್ತು. 
ತಪ್ಪಿಸಿಕೊಳ್ಳುವ ಮಾರ್ಗ ತೋರುವುದು ಮಾತ್ರ ಕೆಲವರಿಂದ ಸಾಧ್ಯವೇನೋ.
ಹಾಗೂ ಅಷ್ಟು ಸಾಕೆಂಬ ತಿಳಿವಳಿಕೆಯೇ ಕ್ಷಮೆಯೇನೋ.

ನೋಡಿ, ನಾನು ಮೂವತ್ತು ವರ್ಷ ಓದಿ ಇಲ್ಲಿಗೆ ತಲುಪಿರುವೆ.
ಪುಸ್ತಕಗಳಿಂದ ಕಟ್ಟಿಕೊಂಡ ಬದುಕು. ನನ್ನನ್ನು ನಾನು
ಒಳಗಿನಿಂದ ತಳಕಂಪಳಕ ಮಾಡಿಕೊಂಡೆ. ಹಾಗಂತ 
ಯಾರೂ ಸಾಯಲಿಲ್ಲ. ಯಾರ ಬೆರಳಿಗೂ ಚುಚ್ಚಿದ ಗಾಯ ಆಗಲಿಲ್ಲ.
ಇದನ್ನು ಕಲ್ಪಿಸಿಕೊಳ್ಳಿ. ಹಿಂದೊಮ್ಮೆ ನನಗೆ ಮಾತಾಡಲು ಆಗುವುದೋ ಇಲ್ಲವೋ
ಎಂಬ ಆತಂಕದಲ್ಲಿ ನಾನು ಇರುತ್ತಿದ್ದೆ. ನಾನು ಹೇಳಿದ್ದಕ್ಕೂ 
ಬೇರೆಯವರು ಕೇಳಿದ್ದಕ್ಕೂ ನಡುವೆ ಇರುತ್ತಿತ್ತು ಒಂದು ಗೋಡೆ.
ಕಾಗದಕ್ಕೆ ಲೇಖನಿ ಹಚ್ಚುವ ತನಕ
ಆಗುತ್ತಲೇ ಇರಲಿಲ್ಲ ನನ್ನ ಕೈಯಲ್ಲಿ ಅನುವಾದ ಕಾರ್ಯ.

ಆಗ ಎದುರಾಗಿದ್ದು ನನ್ನ ತಾಯಿನುಡಿ. ನಾನು ನನ್ನ ಜೀವವನ್ನು ಕೆಳಗಿಟ್ಟು
ಹೊದ್ದಿಕೆಗಳ ಕೆಳಗೆ ನಡೆದು ಸಾಗಿದೆ ಇನ್ನೊಂದರ ಕಡೆಗೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)