ಐಸ್ ಕ್ರೀಂ ಅಂಗಡಿಯಲ್ಲಿ
ಐಸ್ ಕ್ರೀಂ ಅಂಗಡಿಯಲ್ಲಿ
ಮೂಲ: ಬ್ರಯಾನ್ ಬಿಲ್ಸ್ಟನ್
ಅನುವಾದ: ಸಿಪಿ ರವಿಕುಮಾರ್
ಅವನೆಂದೂ ಸೇವಿಸದಿದ್ದರೂ ಅಜ್ಜನ ಬಳಿ ಇದ್ದೇ ಇರುತ್ತಿತ್ತು
ಜೋಬಿನಲ್ಲಿ ಭದ್ರವಾಗಿ ತಂಬಾಕಿನ ಡಬ್ಬಿಯೊಂದು ಸದಾ
ಅಲ್ಲಿ ಏನಿಟ್ಟುಕೊಂಡಿರುತ್ತೀಯಾ ಎಂದು ಅಣ್ಣ ಮತ್ತು ನಾನು
ಕೇಳಿದಾಗ ಒಂದಿಷ್ಟು ಮರಳಿದೆ ಎಂದು ಉತ್ತರಿಸಿದ.
ತಂಬಾಕಿನ ಡಬ್ಬಿಯಲ್ಲಿ ಯಾಕೆ ಮರಳು ಇಟ್ಟುಕೊಳ್ಳುತ್ತೀ
ಎಂದು ಕೇಳಿದರೆ ಇನ್ನೆಲ್ಲಿ ಇಟ್ಟುಕೊಳ್ಳಲಿ ಎಂದು ಪ್ರಶ್ನಿಸಿದ.
ಹಾಗಲ್ಲ, ಮರಳನ್ನು ಯಾಕೆ ಇಟ್ಟುಕೊಳ್ಳುತ್ತೀ ಎಂದಾಗ
ಅದು ವಿಶೇಷ, ತಂದಿದ್ದೇನೆ ದೂರದ ಫ್ರಾನ್ಸ್ ದೇಶದಿಂದ.
ನಾವು ಡಬ್ಬಿಯಲ್ಲಿ ಇಣುಕಿ ಎಷ್ಟು ದುರುಗುಟ್ಟಿ ನೋಡಿ
ಏನೂ ವಿಶೇಷ ಅನ್ನಿಸಲಿಲ್ಲ ಫ್ರಾನ್ಸ್ ದೇಶದ ಮರಳು.
ಅವನನ್ನೇ ಏನು ಇದರ ವಿಶೇಷವೆಂದು ಕೇಳಿದರೆ
ಒಂದೊಂದು ಕಣವೂ ಒಬ್ಬ ಸ್ನೇಹಿತನ ಕುರುಹು.
ಅಜ್ಜನಿಗೆ ಬಹಳ ಜನ ಇರಬಹುದು ಎಳೆತನದ ಸ್ನೇಹಿತರು,
ಬಾಲ್ಯದಲ್ಲಿ ಅವರ ಜೊತೆ ಸಮುದ್ರಕ್ಕೆ ಹೋಗಿದ್ದೆಯಾ?
ಹಾಗೇ ಅಂದುಕೊಳ್ಳಿ ಎಂದು ಅಜ್ಜ ಐಸ್ ಕ್ರೀಂ ಕೇಳಿದ
ಒಂದು ಸಾದಾ, ಇನ್ನೆರಡರ ಮೇಲೆ ಕೆಂಪು ಸಕ್ಕರೆ ಪಾಕ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ