ಒಬ್ಬಂಟಿ
ಒಬ್ಬಂಟಿ
ಮೂಲ: ಎಡ್ಗರ್ ಆಲನ್ ಪೋ
ಕನ್ನಡಕ್ಕೆ: ಸಿ ಪಿ ರವಿಕುಮಾರ್
ಬಾಲ್ಯದಿಂದಲೂ ನಾನು ಇತರಿರಿಗಿಂತ ಭಿನ್ನ
ನನ್ನ ಕಣ್ಣು ಕಾಣಲಿಲ್ಲ ಅವರು ಕಂಡದ್ದನ್ನ
ತರಲಿಲ್ಲ ನಾನು ನನ್ನ ಭಾವಬಂಧ
ಸಾರ್ವಜನಿಕ ಸರೋವರದಿಂದ
ನನ್ನ ದುಃಖಗಳ ಮೂಲ ಹುಡುಕಿದರೆ
ಅದು ಸಾಮಾನ್ಯ ಸ್ರೋತಕ್ಕಿಂತ ಬೇರೆ
ಎಲ್ಲರ ಮನಕ್ಕೂ ಮುದ ತರುವ ಇಂಚರ
ನನ್ನೆದೆಯಲ್ಲಿ ತರದು ಯಾವುದೇ ಸಂಚಾರ
ಮತ್ತು ಯಾವುದಕ್ಕೆ ಒಲಿಯಿತೋ ನನ್ನ ಮನ
ಅಲ್ಲಿ ನನ್ನನ್ನುಳಿದು ಇರಲಿಲ್ಲ ಬೇರೆ ಜನ.
ಎಂದೋ ಒಂದು ದಿನ ನನ್ನ ಬಾಲ್ಯದಲ್ಲಿ
ಗುಡುಗುಮಳೆ ಜೀವನದ ಮುಂಬೆಳಗಿನಲ್ಲಿ
ಒಳಿತು ಕೆಡಕುಗಳ ಆಳಗಳಿಂದೆದ್ದು ಬಂದ
ರಹಸ್ಯಮಯ ಬಳ್ಳಿಯದೇ ಇಂದಿಗೂ ಬಂಧ:
ಹಿಂಬಾಲಿಸುತ್ತದೆ ನನ್ನನ್ನು ಹೋದಲ್ಲೆಲ್ಲ
ಇಣುಕುತ್ತದೆ ಮಳೆಯಲ್ಲಿ, ಇಣುಕುತ್ತದೆ ಹೊಳೆಯಲ್ಲಿ,
ಕೆಂಪಾದ ಬೆಟ್ಟಗಳ ತುತ್ತತುದಿಯಲ್ಲಿ
ಶಿಶಿರದ ಹೊಂಬೆಳಕಿನಲ್ಲಿ ಮಿಂದೆದ್ದ ಸೂರ್ಯ
ಪೂರೈಸಿದಾಗ ನನ್ನನ್ನು ಸುತ್ತುವ ಕಾರ್ಯ
ಮಳೆಯ ರಾತ್ರಿ ನನ್ನ ಮೇಲೆ ಕಪ್ಪು ಆಗಸದಲ್ಲಿ
ಮಿಂಚಾಗಿ ಹೊಳೆಯುವುದು ಹಿನ್ನೆಲೆಯಲ್ಲಿ
ಅಲ್ಲೊಂದು ಕಾರ್ಮೋಡ ಉರುಳುತ್ತ ಬಂದು
ನಿಂತಲ್ಲಿ ಕೋರೆ ದಾಡೆಗಳ ಬಾಯ್ತೆರೆದು
ಸ್ವರ್ಗದಲ್ಲಿ ಬೇರೆಲ್ಲವೂ ನೀಲಿಯಾಗಿದ್ದರೂ ಕೂಡಾ
ರಾಕ್ಷಸನಂತೆ ನನಗೆ ತೋರುತ್ತದೆ ಮೋಡ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ