ಹೇಸರಗತ್ತೆ ಪ್ರಶ್ನೆ

ಹೇಸರಗತ್ತೆ ಪ್ರಶ್ನೆ

ಮೂಲ: ಶೆಲ್ ಸಿಲ್ವರ್ಸ್ಟೀನ್

ಕನ್ನಡಕ್ಕೆ: ಸಿ ಪಿ ರವಿಕುಮಾರ್




ಮೃಗಾಲಯದಲ್ಲಿ ಕಂಡಾಗ  ಹೇಸರಗತ್ತೆ 
ಕೇಳಿದೆ ಯಾವ ಬಣ್ಣದ್ದು ನಿನ್ನ ಪಟ್ಟೆ 
ಬಿಳಿಮೈ ಮೇಲೆ ಕರಿಬಣ್ಣದ ಪಟ್ಟೆಯೋ 
ಕರಿಮೈ ಮೇಲೆ ಬಿಳಿಬಣ್ಣದ್ದು ತೊಟ್ಟೆಯೋ
ಹೇಸದೆ ಕೇಳಿತು ಹೇಸರಗತ್ತೆ ನನಗೆ ಮರುಪ್ರಶ್ನೆ
ಹೇಳು ನೀನು ದುರಭ್ಯಾಸವುಳ್ಳ ಒಳ್ಳೆ ಹುಡುಗನೆ
ಅಥವಾ ಒಳ್ಳೆ ಅಭ್ಯಾಸವಿರುವ ದುಷ್ಟನೋ ಏನು!
ಗಲಾಟೆ ಎಬ್ಬಿಸುವ ಹುಡುಗನೋ ಮೂಲತಃ ನೀನು
ಶಾಂತವಾಗಿರುವೆಯೋ ಒಮ್ಮೊಮ್ಮೆ
ಅಥವಾ ಆಗಾಗ ಗಲಾಟೆ ಮಾಡಿದರೂ
ಹೊಂದಿರುವೆಯಾ ಶಾಂತಮೂರ್ತಿ ಎಂಬ ಹೆಮ್ಮೆ
ಆಗಾಗ ನಗುವ ಅಳುಬುರುಕನೋ 
ಒಮ್ಮೊಮ್ಮೆ ಅಳುವ ನಗೆಬುರುಕನೋ
ಒಪ್ಪವಾಗಿಟ್ಟುಕೊಳ್ಳುವೆಯಾ ನಿನ್ನ ವಸ್ತುಗಳನ್ನು
ಹರಡಿರುತ್ತೀಯ ಒಮ್ಮೊಮ್ಮೆ ಮಾತ್ರ?
ಅಥವಾ ಹರಡಿಕೊಂಡೇ ಇರುವುದೋ ನಿನ್ನ ವಸ್ತುಗಳು
ಓರಣಗೊಳಿಸುತ್ತೀಯೋ ಒಮ್ಮೊಮ್ಮೆ ಮಾತ್ರ?
ಹೀಗೆ ಕೇಳುತ್ತಲೇ ಇತ್ತು ಹೇಸರಗತ್ತೆ ಒಂದಾದ ಮೇಲೊಂದು
ಪ್ರಶ್ನೆ ಕೇಳುವುದಿಲ್ಲ ಇನ್ನುಮುಂದೆ ಹೇಸರಗತ್ತೆಯನ್ನು ಎಂದೂ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)