ದುಃಖ
ಮೂಲ: ರೇಮಂಡ್ ಕಾರ್ವರ್
ಅನುವಾದ: ಸಿ ಪಿ ರವಿಕುಮಾರ್
ಇಂದು ಬೆಳಗ್ಗೆ ಬೇಗ ಎಚ್ಚರವಾಗಿ
ಹಾಸಿಗೆಯ ಮೇಲೆ ಎದ್ದು ಕೂತಾಗ
ದೂರದಲ್ಲಿ ಕಂಡಿತು
ಸಮುದ್ರದ ಮೇಲೆ
ಒಂಟಿ ದೋಣಿಯೊಂದು
ಒಂದೇ ದೀಪದ ಬೆಳಕಿನಲ್ಲಿ
ಅಲೆಗಳ ಮೇಲೆ ತಡವರಿಸುತ್ತಾ ಸಾಗುತ್ತಿತ್ತು.
ನನಗೆ ಒಮ್ಮೆಲೇ ನೆನಪಾಯಿತು
ನನ್ನ ಸ್ನೇಹಿತನೊಬ್ಬ
ಪೆರುಜಿಯಾ ಪ್ರದೇಶದ ಬೆಟ್ಟಗಳ ಮೇಲಿಂದ
ತನ್ನ ಸ್ವರ್ಗಸ್ಥ ಹೆಂಡತಿಯ ಹೆಸರು ಕೂಗಿ ಕರೆಯುತ್ತಿದ್ದ.
ಅವಳು ಸತ್ತ ಎಷ್ಟೋ ವರ್ಷಗಳ ತನಕ
ಊಟ ಮಾಡುವಾಗ
ಟೇಬಲ್ ಮೇಲೆ
ಅವಳಿಗಾಗಿ ಬಡಿಸಿ ಕೂಡುತ್ತಿದ್ದ.
ಅವಳಿಗೆ ಶುದ್ಧಗಾಳಿ ಬೇಕೆಂದು
ಕಿಟಕಿ ತೆರೆಯುತ್ತಿದ್ದ.
ಈ ಬಗೆಯ ಪ್ರದರ್ಶನ ನನಗೆ ಮುಜುಗರ ಎನ್ನಿಸುತ್ತಿತ್ತು.
ಅವನ ಇನ್ನಿತರ ಸ್ನೇಹಿತರಿಗೂ ಕೂಡ.
ನನಗೆ ಅದೇನೆಂದು ಅರ್ಥವಾಗುತ್ತಿರಲಿಲ್ಲ.
ಇಂದು ಬೆಳಗಿನವರೆಗೂ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ