ಟಿ.ವಿ. (ರೋಆಲ್ಡ್ ಡಾಲ್ ಅವರ ರಚನೆ)


ಮೂಲ: ರೋಆಲ್ಡ್ ಡಾಲ್ 
ಅನುವಾದ: ಸಿ ಪಿ ರವಿಕುಮಾರ್ 




ಏನಪ್ಪಾ ಅಂದ್ರೆ ನಾವು ತಿಳಕೊಂಡ ಅತಿಮುಖ್ಯ ಸಂಗ್ತಿ 
ಮಕ್ಕಳ ವಿಷಯದಲ್ಲಿ ನಾವು ಹಾಕಬೇಕಾದ ಮೇಲ್ಪಂಕ್ತಿ 
ಅವರನ್ನು ಬಿಡಬಾರ್ದು ಬಿಲ್ಕುಲ್ ಖಡಾಖಂಡಿತ
ಟೆಲಿವಿಷನ್ ಸೆಟ್ ಹತ್ತಿರವೂ ಗೊತ್ತಾಯ್ತ?
ಅದಕ್ಕಿಂತಲೂ ಕೊಡ್ಲಾ ಇನ್ನೊಂದು ಸಲಹೆ?
ತರಲೇ ಬೇಡಿ ಹಾಳಾದ್ದನ್ನು ಮನೆಗೆ.

ನಾವು ಹೋಗಿ ನೋಡಿದ ಪ್ರತಿಯೊಂದು ಮನೆಯಲ್ಲೂ 
ಕೂತಿದ್ದರು ಜನ ಸುರಿಸುತ್ತಾ ಜೊಲ್ಲು 
ಚಪ್ಪರಿಸುತ್ತಾ ಬಾಯಿ ಕಣ್ಣು ಮಿಟುಕಿಸದೇ 
ಹೊರಕ್ಕೆ ಬಂದು ಬಿಡುವಂತೆ ಕಣ್ಣುಗಳ ಗುಡ್ಡೆ -
(ನೋಡಿದೆವು ಹೋದವಾರ ಒಬ್ಬರ ಮನೆಯಲ್ಲಿ
 ನೆಲದ ಮೇಲೆ ಕಣ್ಗುಡ್ಡೆ ಹತ್ತಾರು ಚೆಲ್ಲಾಪಿಲ್ಲಿ)
ಕುಳಿತು ದುರುಗುಟ್ಟುತ್ತಾರೆ, ಕೂಡುತ್ತಾರೆ ದುರುಗುಡ್ತಾ  
ಹಾಗೇ ಅದರ ಮೋಡಿಗೆ ಒಳಗಾಗಿಬಿಡ್ತಾ 
ಟೈಟ್ ಆಗುತ್ತಾರೆ ಕುಡಿ ಕುಡಿದು ಕುಡಿದು
ಅದರಲ್ಲಿ ಬರುವ ಹೊಲಸು ಪ್ರತಿಯೊಂದೂ. 

ಅವರೇಕೆ ಸ್ತಬ್ಧರಾಗಿದ್ದಾರೆ ನಮಗೀಗ ಗೊತ್ತು 
ಹೊರಗೇ ಬರುವುದಿಲ್ಲ ಅವರು ಸಂಜೆ ಹೊತ್ತು 
ಕೂತಿದ್ದಾರೆ ಕಬಡ್ಡಿ ಗಿರಗಿಟ್ಲೆ ಮರೆತು 
ಅಡುಗೆ ಕೆಲಸವನ್ನೆಲ್ಲಾ ನಿಮಗೇ ಬಿಟ್ಬಿಟ್ಟು   
ತೊಳೆ-ಬಳೆವ ಕೆಲಸವೂ ನಿಮ್ಮದೇ ಸ್ವತ್ತು 
ಯೋಚಿಸಿದ್ದೀರಾ ಯಾವತ್ತಾದ್ರೂ ಸ್ವಲ್ಪ ಹೊತ್ತು 
ಇದರ ಪರಿಣಾಮ ಮಗುವಿನ ಮೇಲೆ ಏನಾದೀತು?
ತಲೆಯಲ್ಲಿ ವಿವೇಚನೆ ಕೊಳೆತುಹೋಗತ್ರೀ! 
ನೆಗೆದು ಬಿದ್ ಹೋಗತ್ತೆ ಕಲ್ಪನಾಶಕ್ತಿ!
ಓಡುವುದೇ ಇಲ್ಲ ತಲೆಯೊಳಗೆ ಬುದ್ಧಿ 
ಮಂಕಾಗುತ್ತಾರೆ ತುಂಬಿಕೊಂಡಂತೆ ಲದ್ದಿ!
ಅರ್ಥವೇ ಆಗೋದಿಲ್ಲ ಮಕ್ಕಳಿಗೆ ಆಮೇಲೆ 
ನೀವು ಹೇಳಿದ ಯಾವುದೇ ಕಾಲ್ಪನಿಕ ಕಥೆ!
ಬುದ್ಧಿ ಆಗಿಹೋಗಿ ಬೆಣ್ಣೆಮುದ್ದೆ  ಹಾಗೆ  ಮೆತ್ಗೆ 
ಆಲೋಚನಾಶಕ್ತಿಗೆ ತುಕ್ಕು ಹಿಡಿದು ಹೋಗತ್ತೆ 
ನೋಡೋದು ಬಿಟ್ಟು ಮಗು ಏನೂ ಮಾಡಲ್ಲ 
ಚಿತ್ರ ತೋರಿಸದೆ ತಲೆಯೇ ಓಡಲ್ಲ. 

ಸರಿಯಪ್ಪಾ ಒಪ್ತೀವಿ ನೀನು ಹೇಳೋದೆಲ್ಲಾ ತಕ್ಕೋ 
ಟಿ.ವಿ. ಏನಾದ್ರೂ  ಬಂದ್ ಮಾಡೇ ಬಿಟ್ವಿ ಅನ್ಕೋ 
ಹ್ಯಾಗಪ್ಪಾ ಮಕ್ಕಳಿಗೆ ಕೊಡೋದು ಮನರಂಜನೆ 
ಅನ್ನೋದು ತಾನೇ ನಿಮ್ಮ ಮುಂದಿನ್ ಪ್ರಶ್ನೆ?
ಸರಿ ಅದಕ್ಕೂ ಇದೆ ಉತ್ತರ ನಮ್ ಹತ್ರ ...
ನೆನಪಿಲ್ವಾ? ಏನು ಮರೆತೇ ಬಿಟ್ರಾ? 
ಹೇಗೆ  ಕಳೀತಿದ್ರು ಕಾಲ  ಪುಟಾಣಿಗಳೆಲ್ಲಾ 
ಈ ರಾಕ್ಷಸನ ಅನ್ವೇಷಣೆ ಆಗೋದಕ್ಕೂ ಮುನ್ನ?

ಹೇಳ್ತೀವಿ ಕೇಳಿ ಗಟ್ಟಿಯಾಗಿ ಉತ್ತರ:
ಓದುತ್ತಾ ಇದ್ರು ಕಣ್ರೀ ಪುಸ್ತಕ ಒಂದಾದ್ಮೇಲೆ ಒಂದು 
ಅದಾದ ಮೇಲೆ ಕೈಗೆ ತೊಗೋತೀದ್ರು ಇನ್ನೊಂದು 
ಹೇಳ್ತೀನಿ ಕೇಳಿ ಎಲ್ಲೋ ಓದಿದ್ ಒಂದು ವಿಷ್ಯ 
ಆಗ ಓದೋದ್ರಲ್ಲೇ ಹೋಗ್ತಿತ್ತು ಅರ್ಧ ಆಯುಷ್ಯ 

ತುಳುಕಿ ಸ್ಕೂಲ್ ಕಪಾಟುಗಳು ಪುಸ್ತಕಗಳಿಂದ
ನೆಲದ ಮೇಲೂ ಹರೀತಿದ್ವು, ನೋಡುವುದೇ ಚಂದ!
ಇಷ್ಟು ಸಾಲದು ಅಂತ ಮನೆಮಠಗಳಲ್ಲೂ
ಎಲ್ಲಿ ನೋಡಿದರೂ ಪುಸ್ತಕಗಳದ್ದೆ ಗುಲ್ಲು!
ಅಬ್ಬಾ ಕತೆಗಳು ಎಷ್ಟು ರೋಮಾಂಚಕಾರಿ!
ಮಂತ್ರವಾದಿನಿ, ಮಾಯಾದೀಪ, ರಾಜಕುವರಿ!
ದೂರ ಸಮುದ್ರದ ನಡುವೆ ಅಗೋಚರ ದ್ವೀಪ!
ಅಲ್ಲಿ ಹುದುಗಿರುವ ಒಂದು ಗುಪ್ತ ನಿಕ್ಷೇಪ!
ಕಾಡುಗತ್ತಲ ನಡುವೆ ಮಿಣುಕುದೀಪದ ಬೆಳಕು
ಗುಹೆಯ ಬಾಗಿಲು ತೆರೆಯೆ ಗುಪ್ತಪದ ಬೇಕು!
ಹಿರಿದ ಕತ್ತಿಯ ಹಿಡಿದ ಕಳ್ಳ-ಕಾಕರ ಹಿಂಡು!
ಒಬ್ಬನೇ ಹೋರಾಡುವ ಎಂಟೆದೆಯ ಗಂಡು!
ಕೊತಕೊತನೆ ಕುದಿವ ಮಡಕೆಗಳ ಮುಂದೆ
ಕುಣಿಯುತ್ತಿದೆ ಕ್ರೂರ ನರಭಕ್ಷಕರ ಹಿಂಡೇ!
ಏನು ಕುಡಿಯುತ್ತಿರಬಹುದು ಮಡಕೆಯೊಳಗೆಂದು
ಕೇಳದಿರಿ! ಕಾಣುತ್ತಿದೆ ಅಸ್ಥಿಪಂಜರವೊಂದು!
ಮೊಲ-ಸಿಂಹಗಳ ಕತೆ ತೀರಾ ಎಳೆಯರಿಗೆ
ಮಾತಾಡುವ ಗುಬ್ಬಿ ಮಾತಾಡುವ ಕಾಗೆ
ಮೊಲವೊಂದು ಸಿಂಹವನು ಕೊಲ್ಲಬಹುದಿಲ್ಲಿ!
ನರಿಗೆ ಸಿಕ್ಕದ ಹುಳಿದ್ರಾಕ್ಷಿಗಳ ಬಳ್ಳಿ!
ಮೊಟ್ಟೆಗಳ ಕದ್ದ ಸರ್ಪವನ್ನು ಕಾಗೆ
ಕದ್ದು ಸರ ಹಗೆಯನ್ನು ಸಾಧಿಸಿತು ಹೇಗೆ! 
ಚಪ್ಪರದ ಮೇಲೆ ಮಲ್ಲಿಗೆಯ ಬಳ್ಳಿ
ಸಂಜೆ ಹೂ ಬಿಟ್ಟು ಘಮಘಮಿಸುವಲ್ಲಿ
ತೋರುತ್ತಾ ಚಂದ್ರನನ್ನು ಮುಗಿಲಲ್ಲಿ
ಅಮ್ಮ ಇಟ್ಟಂತೆ ತಿಳಿಸಾರನ್ನ ಬಾಯಲ್ಲಿ!

ಅಬ್ಬಾ  ಹಿಂದಿನ ಕಾಲದ ಮಕ್ಕಳ ಬಳಿ ಎಷ್ಟು
ಪುಸ್ತಕಗಳಿದ್ದವು ಅಲ್ಲವಾ, ಇಷ್ಟಿಷ್ಟು!
 ಕೈಮುಗಿದು ನಿಮ್ಮನ್ನು ಕೇಳಿಕೊಳ್ಳುತ್ತೇನೆ,
ನಿಮ್ಮ ಟೀವೀ ಸೆಟ್ ಎಸೆದು ಬಿಡಿ ಆಚೆ!
ಟೀವೀ ಇರುವ ಕಡೆ   ಸ್ಥಾಪಿಸಿದರಾಯ್ತು
ಒಂದು ಚೆಂದದ ಪುಸ್ತಕ-ಕಪಾಟು.
ಅದರ ತುಂಬಾ ಜೋಡಿಸಿ ಪುಸ್ತಕರಾಶಿ
ಯಾರು ಏನೆಂದರೂ ಮಾಡದೆ ಚೌಕಾಶಿ,
ಕೂಗಾಡಬಹುದು ನಿಮ್ಮ ಅಪ್ಪ-ಅಮ್ಮ,
ಕಚ್ಚೇ ಬಿಡಬಹುದು ನಿಮ್ಮ ತಂಗಿ-ತಮ್ಮ,
ಹೆದರದಿರಿ! ಎಷ್ಟು ದಿನ ನಡೆದೀತು ಪ್ರತಿಭಟನೆ?
ಏನೂ ಆಗದಂತೆ ಮಾಡಿದರಾಯ್ತು ನಟನೆ!
ವಾರ ಕಳೆಯಲು ಮಾಡಲೇನೂ ತೋರದೇ ಕೊನೆಗೆ
ಅವರೂ ಸುಳಿಯುವರು ಪುಸ್ತಕ ಕಪಾಟಿನ ಬಳಿಗೆ!
ಒಮ್ಮೆ ಹಿಡಿದರೆ ಅವರಿಗೆ ಪುಸ್ತಕದ ಗೀಳು
ಅಬ್ಬಬ್ಬಾ, ಪುಸ್ತಕ ಕೆಳಗಿಟ್ಟರೆ ಹೇಳು
ಒಳಗಿಳಿಯುತ್ತಾ ಓದಿನ ಸಂತೋಷ ಅವರಲ್ಲಿ
ಕೇಳತೊಡಗುತ್ತಾರೆ ಇಷ್ಟು ದಿನ ಇಲ್ಲಿ
ಆ ಹಾಸ್ಯಾಸ್ಪದ ಯಂತ್ರವನ್ನೇಕೆ ಇಟ್ಟಿತ್ತು?
ಹೊಲಸು, ಅಸಹ್ಯಕರ, ನಮಗೇಕೆ ತಲೆ ಕೆಟ್ಟಿತ್ತು!
ಮುಂದಿನ ತಲೆಮಾರಿನ ಪ್ರತಿಯೊಂದು ಮಗು ನಿನಗೆ
ಧನ್ಯವಾದ ತಿಳಿಸುವುದು ನಿನ್ನ ಸಾಧನೆಗೆ!



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ