ಈ ರಾತ್ರಿ ಯಾರೋ ಕದ ತಟ್ಟುತ್ತಾರೆ
ಮೂಲ ಕವಿತೆ: ಬಾತ್ಷೆವಾ ಡೋರಿ-ಕಾರ್ಲಿಯೇ (ಇಸ್ರೇಲ್) ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕವಿತೆ ಓದುವ ಮುನ್ನ: ಬಾತ್ಷೆವಾ (1970-) ಇಸ್ರೇಲ್ ದೇಶದ ಪ್ರಮುಖ ಕವಯಿತ್ರಿ. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನ್ನ ಗತಿಸಿದ ತಂದೆಯನ್ನು ನೆನೆಸುತ್ತಾಳೆ. ಮಳೆಯಲ್ಲಿ ತಂದೆಯೊಂದಿಗೆ ಕುಳಿತು ಕಳೆದ ಆಪ್ಯಾಯವಾದ ಕ್ಷಣಗಳ ನೆನಪು ಕವಯಿತ್ರಿಯನ್ನು ಕಾಡುತ್ತವೆ. ಕವಿತೆಯಲ್ಲಿ ಉಲ್ಲೇಖಿತನಾದ ಮಫ್ಫೂಜ್ ಈಜಿಪ್ಟಿನ ಒಬ್ಬ ಪ್ರಸಿದ್ಧ ಕತೆಗಾರ. ಅಪ್ಪ ಹಿಂದಿರುಗುತ್ತಾನೆ, ಮಳೆಯ ಹಾಗೆ, ಇನ್ನೊಂದು ಬದಿಯಿಂದ. ಊಟದ ಮೇಜಿನ ಮುಂದೊಂದು ಖಾಲಿ ಕುರ್ಚಿ. ಅದರ ಮುಂದೆ ಮತ್ತೊಂದು ತಟ್ಟೆ-ಬಟ್ಟಲು ಜೋಡಿಸುತ್ತಾ ಅಂದುಕೊಳ್ಳುತ್ತೇನೆ - ಅವನು ಹೆಚ್ಚು ಹೊತ್ತು ಇರಲಾರನೇನೋ. ಸತ್ತವರು ಅನ್ನ ಮತ್ತು ತೊವ್ವೆಗಾಗಿ ಹಂಬಲಿಸುವುದಿಲ್ಲವಲ್ಲ. ಎಂದಿನಂತೆ ಮಳೆಯಲ್ಲಿ ಅವನು ಓದುತ್ತಾನೆ ನಗರದ ಪುರಾತನ ಭಾಗದಲ್ಲಿ ಬಹಳ ಹಿಂದೆ ಕೊಂಡ ಮಹ್ಫೂಜನ ಪ್ರೇಮಕಥೆ. ಮೇಜಿನ ಸುತ್ತಲೂ ಹರಡಿಕೊಳ್ಳುತ್ತವೆ ನೆನಪುಗಳು ಮನೆ ಅಡುಗೆಯ ಪರಿಮಳದಂತೆ. ಅಪ್ಪನ ವಿಶಾಲವಾದ ಕೈಗಳು ಬಾಚಿಕೊಳ್ಳುತ್ತವೆ ನನ್ನ ಮತ್ತು ತಂಗಿಯ ಕೈಗಳನ್ನು, ಜಪಮಣಿ ಸರವನ್ನು, ಪೈಪ್ ಮತ್ತು ಪುಸ್ತಕಗಳನ್ನು. ಬಾಚಿಕೊಳ್ಳುವುದರಲ್ಲಿದೆ ಒಂದು ನಯ...