ನಾಂಜಿಂಗ್
ಕವಿತೆ ಓದುವ ಮುನ್ನ: ಯಾವೋ ಫೆಂಗ್ ಚೈನಾ ದೇಶದ ಸುಪ್ರಸಿದ್ಧ ಕವಿ. ವಿವಾದಾತ್ಮಕ ಕವಿ ಕೂಡಾ. ಈತನ ಕವಿತೆಗಳ ಭಾಷೆ ಒರಟು ಎನ್ನಿಸಬಹುದು. ಪ್ರಸ್ತುತ ಕವಿತೆಯಲ್ಲಿ ಅವನು ನಾಂಜಿಂಗ್ ಪ್ರಾಂತದ ಬಗ್ಗೆ ಬರೆಯುತ್ತಾನೆ. ಮೊದಲು ಕವಿತೆಯನ್ನು ಒಮ್ಮೆ ಓದಿ. ನಂತರ ಕೆಳಗಿನ ಟಿಪ್ಪಣಿಯನ್ನು ಓದಿ ಚೈನಾ ಮತ್ತು ಜಪಾನ್ ನಡುವಣ ಯುದ್ಧದಲ್ಲಿ ನಾಂಜಿಂಗ್ ದೇಶದ ಮೇಲೆ ಬಹುದೊಡ್ಡ ಅತ್ಯಾಚಾರವಾಯಿತು. ಜಪಾನ್ ದೇಶದ ಯೋಧರು ಬಹಳ ದೊಡ್ಡ ಪ್ರಮಾಣದಲ್ಲಿ ನಾಂಜಿಂಗ್ ಪ್ರಾಂತದಲ್ಲಿ ಕೊಲೆ, ಅತ್ಯಾಚಾರಗಳಲ್ಲಿ ತೊಡಗಿದ್ದು ಇತಿಹಾಸ. ಆದರೆ ಕವಿಗೆ ನಾಂಜಿಂಗ್ ಪ್ರಾಂತದ ಮೇಲೆ ನಡೆಯುತ್ತಿರುವ ಇನ್ನೊಂದು ಅತ್ಯಾಚಾರದ ಬಗ್ಗೆ ಮಾತಾಡಬೇಕಾಗಿದೆ. ಹೇಗೆ ಗ್ಲೋಬಲೀಕರಣದ ಕಾಲಮಾನದಲ್ಲಿ ಬೆಂಗಳೂರು ತನ್ನ ರೂಪವನ್ನು ಕಳೆದುಕೊಂಡಿತೋ ನಾಂಜಿಂಗ್ ಪ್ರಾಂತವೂ ಅದೇ ಬಗೆಯ "ಮಾನಭಂಗ"ವನ್ನು ಅನುಭವಿಸಿತು. ನೂರಾರು ಉದ್ಯಮಗಳಿಗೆ ತವರಾದ ನಾಂಜಿಂಗ್ ಪ್ರಾಂತದಲ್ಲಿ ವಾಯುಮಾಲಿನ್ಯ, ಟ್ರಾಫಿಕ್ ಸಮಸ್ಯೆ ಇವೆಲ್ಲವೂ ಉಲ್ಬಣಿಸಿದವು. ಅದೆಷ್ಟೋ ಮರಗಳು ಕಡಿಯಲ್ಪಟ್ಟವು. ಗಗನಚುಂಬಿಗಳು, ಫ್ಲೈ-ಓವರ್ ಗಳು ಎದ್ದುನಿಂತವು. ಭ್ರಷ್ಟಾಚಾರ ಹೊಗೆಯಾಡಿತು. ಈ ಹಿನ್ನೆಲೆಯನ್ನು ಇಟ್ಟುಕೊಂಡು ಕವಿತೆಯನ್ನು ಮತ್ತೊಮ್ಮೆ ಓದಿ.

ಮೂಲ : ಯಾವೋ ಫೆಂಗ್
ಕನ್ನಡಕ್ಕೆ : ಸಿ. ಪಿ. ರವಿಕುಮಾರ್
ಸಣ್ಣಗೆ ಮಳೆ ಹೊಯ್ಯುತ್ತಿದೆ
ನಾನು ಮತ್ತೆ ನಾಂಜಿಂಗ್ ಗೆ ಬಂದಿದ್ದೇನೆ
ವುಟಾಂಗ್ ಮರಗಳು ಚೈನಾ ಭಾಷೆಯಲ್ಲೇ ಪರಸ್ಪರ ಮಾತಾಡಿಕೊಳ್ಳುತ್ತವೆ
ರಸ್ತೆ ಬದಿಯಲ್ಲಿ ನೀರಿನ ಬೋಗುಣಿಗಳಲ್ಲಿ
ಬಣ್ಣದ ನುಣುಪುಗಲ್ಲುಗಳು
ರಕ್ತಹೀನವಾಗಿ ಕುಳಿತು
ಪ್ರವಾಸಿಗರತ್ತ ತಮ್ಮ ಕಾಮನಬಿಲ್ಲು ಕಣ್ಣರಳಿಸಿ
ಪಿಳಿಪಿಳಿ ನೋಡುತ್ತವೆ.
ನನಗೆ ನಾಂಜಿಂಗ್ ಇಷ್ಟ
ಪಿತೃಭೂಮಿಯ ಬಗ್ಗೆ ಕಾವ್ಯದ ಬಗ್ಗೆ ಹೆಂಗಸರ ಬಗ್ಗೆ ಮಾತಾಡುತ್ತಾ
ಮಿತ್ರರೊಂದಿಗೆ ವೈನ್ ಬಾರುಗಳಲ್ಲಿ ಕಾಲ ಕಳೆಯುವುದು ನನಗಿಷ್ಟ
ಆದರೆ ನಾಂಜಿಂಗ್ ಅತ್ಯಾಚಾರದ ನಂತರ
ಬದುಕುಳಿದ ಇವರು ಯಾರೂ
ನನ್ನೊಂದಿಗೆ ಮಾತಾಡುವುದಿಲ್ಲ ಇತಿಹಾಸವನ್ನು ಕುರಿತು

(ರೇನ್ ಫ್ಲವರ್ ಪೆಬಲ್ಸ್ - ಬಣ್ಣದ ನುಣುಪುಕಲ್ಲುಗಳು)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ