ಬೆಲೆ

ಕಥೆ - ಸಿ. ಪಿ. ರವಿಕುಮಾರ್ 

ಸಿಯರಾ ಲಿಯೋನಿ ಎಂಬುದು ಪಶ್ಚಿಮ ಆಫ್ರಿಕಾದಲ್ಲಿರುವ ಪುಟ್ಟ ದೇಶ. ಅಲ್ಲಿ ಒಬ್ಬ ಕ್ರಿಶ್ಚಿಯನ್ ಪಾದ್ರಿಯ ಮನೆ. ಉಬ್ಬುಸ ಪಡುತ್ತಾ ಇಬ್ಬರು ಕೆಲಸಗಾರರು ಓಡಿ ಬಂದು ಬಾಗಿಲು ತಟ್ಟಿದರು. ಅವರು ತಂದ ಸುದ್ದಿ ಕೇಳಿದರೆ ಯಾರಿಗಾದರೂ ಒಂದು ಕ್ಷಣ ಉಸಿರು ಸಿಕ್ಕಿಹಾಕಿಕೊಳ್ಳುತ್ತದೆ. ಪಾದ್ರಿ ಕೂಡಲೇ ಕೋಟ್ ಮತ್ತು ಹ್ಯಾಟ್ ಧರಿಸಿ ಬೂಟು ಹಾಕಿಕೊಂಡು ಅವರ ಜೊತೆಗೆ ಹೊರಟ. ಅವನಿಗೆ ಸೇರಿದ ಭೂಮಿಯಲ್ಲಿ ಅಗೆಯುವ ತಂಡಕ್ಕೆ ದೊಡ್ಡದೊಂದು ವಜ್ರ ಸಿಕ್ಕಿತ್ತು.
'ಏನಿಲ್ಲ ಅಂದರೂ ಐನೂರು ಕ್ಯಾರಟ್ ಇದ್ದೀತು ಒಡೆಯಾ' ಎಂದು ಒಬ್ಬ ಆಳು ಹೆಮ್ಮೆಯಿಂದ ಹೇಳಿದ. ಒಡೆಯ ಮಾತಾಡಲಿಲ್ಲ.
'ಇದರ ಬೆಲೆ ಎಷ್ಟಿದ್ದೀತು ಒಡೆಯಾ?' ಇನ್ನೊಬ್ಬ ಕೇಳಿದ. ಪಾದ್ರಿ ಇದಕ್ಕೂ ಉತ್ತರಿಸದೆ ಸುಮ್ಮನಿದ್ದ. ಅವನ ಮನಸ್ಸಿನಲ್ಲಿ ಅದೇನೋ ಹೊಯ್ದಾಟ ನಡೆದಿತ್ತು.
ಅವರು ಅಗೆತ ನಡೆಯುತ್ತಿದ್ದ ಸ್ಥಳಕ್ಕೆ ಬಂದಾಗ ಆಳುಗಳೆಲ್ಲಾ ಚಪ್ಪಾಳೆ ತಟ್ಟಿ ಹೋ ಎಂದು ಹರ್ಷೋದ್ಗಾರ ಮಾಡಿದರು. ಅವರೆಲ್ಲರೂ ಹಿಂದೆ ಸರಿದು ನಿಂತರು. ಆಳುಗಳ ಸರದಾರ ಮುಂದೆ ಬಂದು ಒಡೆಯನಿಗೆ ವಜ್ರವನ್ನು ಮುಷ್ಟಿಯಲ್ಲಿ ಇಟ್ಟುಕೊಂಡೇ ತೋರಿಸಿದ. ಪಾದ್ರಿ ಅದನ್ನು ಕೈಗೆತ್ತಿಕೊಂಡು ಒಮ್ಮೆ ನೋಡಿ ಅನಂತರ ಆಕಾಶದ ಕಡೆಗೆ ನೋಡಿದ. ತನ್ನ ಎದೆಯ ಮೇಲೆ ಕ್ರಾಸ್ ಮಾಡಿದ.
'ಓಬೂಟಾ, ಮಿ. ಕಾನೋಗೆ ಫೋನ್ ಮಾಡಿ ನಾಳೆ ಬೆಳಗ್ಗೆ ಭೇಟಿ ಮಾಡಲು ಅವಕಾಶ ಕೇಳು.'
ಒಂದು ಕ್ಷಣ ಎಲ್ಲರೂ ಸ್ತಬ್ಧರಾದರು. ಕಾನೋ ಫೋಹ್ ಸರಕಾರದ ಗಣಿಗಾರಿಕೆ ವಿಭಾಗದ ಸೆಕ್ರೆಟರಿ. ಅವನನ್ನು ಕಂಡರೆ ಎಲ್ಲರಿಗೂ ಹಗುರ. ಎಷ್ಟೊಂದು ಪ್ರೈವೇಟ್ ಮೈನಿಂಗ್ ಕಂಪನಿಗಳು ದೇಶದಲ್ಲಿರುವಾಗ ಸರಕಾರದ ಗಣಿಗಾರಿಕೆಯನ್ನು ಯಾರು ಮೂಸಿ ನೋಡುತ್ತಾರೆ! ತನ್ನ ಹಳೇ ಕೋಟ್ ಮತ್ತು ಹಳೇ ಬೂಟು ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಓಡಾಡುವ ಸೆಕ್ರೆಟರಿ ಎಲ್ಲಿ, ಜುಂ ಎಂದು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಓಡಾಡುವ ಕಂಪನಿ ಮಾಲೀಕರೆಲ್ಲಿ! ಗಣಿಯಲ್ಲಿ ಸಿಕ್ಕ ವಜ್ರಗಳು ಸರಕಾರಕ್ಕೆ ಸೇರುತ್ತಿದ್ದರೆ ಸಿಯೆರಾ ಲಿಯೋನಿ ಅತ್ಯಂತ ಶ್ರೀಮಂತ ದೇಶವಾಗಬೇಕಾಗಿತ್ತು ಎಂದು ಸೆಕ್ರೆಟರಿ ಹೇಳುವುದನ್ನು ಕೇಳಿ ಕೇಳಿ ಎಲ್ಲರಿಗೂ ಸಾಕಾಗಿತ್ತು. ಸೆಕ್ರೆಟರಿ, ನೀನು ಕನಸು ಕಾಣುವುದು ಬಿಡಲಿಲ್ಲ ಎಂದು ಹಾಸ್ಯ ಮಾಡುತ್ತಿದ್ದರು. ಹೋಗಲಿ, ಕಂಪನಿಗಳಿಗೆ ಮಾರಿದವರು ಶ್ರೀಮಂತರಾದರೆ? ಎಂದು ಸೆಕ್ರೆಟರಿ ಸವಾಲು ಹಾಕುತ್ತಿದ್ದ. ಅವರ ಹತ್ತಿರ ಉತ್ತರ ಇರಲಿಲ್ಲ. ಇಷ್ಟಾಗಿ ಅವರಿಗೆ ಬಡತನ ರೂಢಿಯಾಗಿ ಹೋಗಿತ್ತು.
ಈಗ ಒಡೆಯ ಸೆಕ್ರೆಟರಿಯ ಹೆಸರು ಹೇಳುತ್ತಿದ್ದಾನೆ! ಒಡೆಯನಿಗೆ ಬಿಸಿಲಿನಲ್ಲಿ ನಡೆದು ಬಂದು ತಲೆ ಸುತ್ತುತ್ತಿರಬಹುದಾ ಎಂಬಂತೆ ಓಬುಟಾ ನೋಡಿದ. ಪಾದ್ರಿ ಕೈಯಲ್ಲಿ ವಜ್ರ ಹಿಡಿದು ಒಬ್ಬ ಆಳನ್ನು ಜೊತೆ ಮಾಡಿಕೊಂಡು ಹೊರಟ. ದಾರಿಯಲ್ಲಿ ಗುಟ್ಟಾಗಿ ಆಳಿಗೆ ಹೇಳಿದ. 'ಕ್ವಾಮೇ, ಈ ವಜ್ರ ಇವತ್ತು ನಿನ್ನ ಮನೆಯಲ್ಲಿರಲಿ. ನನ್ನ ಬಳಿ ಇದ್ದರೆ ಅಪಾಯ.'
ನಡುಗುವ ಕೈಯಿಂದ ಕ್ವಾಮೆ ರತ್ನವನ್ನು ಪಡೆದುಕೊಂಡ. ಅವನ ಕಣ್ಣುಗಳು ಮಂಜಾದವು. ಪಾದ್ರಿ ಅವನ ಬೆನ್ನು ತಟ್ಟಿ ನೇರವಾಗಿ ಮನೆಗೆ ಹೋದ. ತನ್ನ ಮನೆಯ ಟೆಲಿಫೋನ್ ಕನೆಕ್ಷನ್ ಕಡಿದುಹಾಕಿದ. ಅನಂತರ ಹೆಂಡತಿ ಮಕ್ಕಳನ್ನು ಕರೆದುಕೊಂಡು ಸಿಟಿಯಲ್ಲಿ ಅಷ್ಟೇನೂ ಪ್ರಸಿದ್ಧವಲ್ಲದ ಹೊಟೆಲಿಗೆ ಹೋಗಿ ತಂಗಿದ.
ಮರುದಿನ ಸೆಕ್ರೆಟರಿಯ ಆಫೀಸಿಗೆ ಹತ್ತಕ್ಕೆ ಸರಿಯಾಗಿ ಹಾಜರಾದ. ಕಾನೋಗೆ ಈಗಾಗಲೇ ಸುದ್ದಿಯ ಸುಳಿವು ಸಿಕ್ಕಿತ್ತು.
ಅವನು ಪಾದ್ರಿಯ ಕಡೆಗೆ ನಂಬಿಕೆ ಬಾರದವರಂತೆ ನೋಡಿದ.
'ಪಾಡ್ರೆ, ನಾನು ನಿಮಗೆ ಫೋನ್ ಮಾಡಿ ಸಾಕಾಯಿತು. ಮನೆಗೂ ಹೋಗಿದ್ದೆ. ನೀವು ಸಿಕ್ಕಲಿಲ್ಲ. ಈಗಾಗಲೇ ನಿಮ್ಮ ವ್ಯಾಪಾರ ಕುದುರಿರಬಹುದು.' ಎಂದ.
ಪಾದ್ರಿ ಮಾತಾಡದೆ ಹೊರಗಿನ ದ್ವಾರದ ಕಡೆಗೇ ನೋಡುತ್ತಿದ್ದ.
'ನೀವು ಯಾರನ್ನೋ ನಿರೀಕ್ಷಿಸುತ್ತಿದ್ದ ಹಾಗಿದೆ.'
'ಕ್ವಾಮೆ ಎಂಬ ಹೆಸರಿನ ನಮ್ಮ ಆಳುಮಗ' ಎನ್ನುವಾಗ ಪಾದ್ರಿಯ ಧ್ವನಿ ಸ್ವಲ್ಪ ನಡುಗಿತು. ಕ್ವಾಮೆಯನ್ನು ನಾನು ನಂಬಿದ್ದು ಎಷ್ಟು ಸರಿ?
'ಓ. ಕ್ವಾಮೆ ಆಗಲೇ ಬಂದು ಬಹಳ ಹೊತ್ತಾಯಿತು. ಅವನು ಕಾದು ಈಗ ಸ್ವಲ್ಪ ಹೊತ್ತಿನ ಹಿಂದೆ ಕಾಫಿ ಕುಡಿಯಲು ಹೋದ.'
ಪಾದ್ರಿಗೆ ಮತ್ತೆ ಯೋಚನೆಯಾಯಿತು. ಅಷ್ಟರಲ್ಲಿ ಕ್ವಾಮೆ ಕುಂಟುತ್ತಾ ಬರುವುದು ಕಾಣಿಸಿತು.
'ಏನಾಯ್ತು ಕ್ವಾಮೆ?' ಎಂದು ಪಾದ್ರಿ ಅವನ ಕಾಲಿಗೆ ಕಟ್ಟಿದ ಬ್ಯಾoಡೇಜ್ ಪಟ್ಟಿ ನೋಡಿದ.
ಕ್ವಾಮೆ ಮಾತಾಡದೆ ಸೆಕ್ರೆಟರಿಯ ಮುಖ ನೋಡಿ 'ನಿಮ್ಮ ಆಫೀಸ್ ಒಳಗೆ ಹೋಗಬಹುದಾ' ಎಂದ.
ಮೂವರೂ ಒಳಗೆ ಹೋಗಿ ಕುಳಿತಾಗ ಪಾದ್ರಿ ಕ್ವಾಮೆಯ ಕಡೆ ಪ್ರಶ್ನಾರ್ಥಕವಾಗಿ ನೋಡಿದ. ಅವನು ಮೆಲ್ಲನೆ ತನ್ನ ಕಾಲಿನ ಪಟ್ಟಿ ಬಿಚ್ಚತೊಡಗಿದ. ಒಳಗೆ ಅಡಗಿಸಿದ್ದ ವಜ್ರವನ್ನು ಕೈಯಲ್ಲಿ ತೆಗೆದು ಮೇಜಿನ ಮೇಲಿಟ್ಟ. ಸೆಕ್ರೆಟರಿಯ ಮುಖದಲ್ಲಿ ಬೆರಗು ಕಾಣಿಸಿತು.
ಪಾದ್ರಿ 'ಇದರ ಬೆಲೆ ಎಷ್ಟಿರಬಹುದು?' ಎಂದ.
ಸೆಕ್ರೆಟರಿ ನಂಬಲು ಸಾಧ್ಯವಾಗದೆ 'ಇದನ್ನು ಸರಕಾರದ ಮೂಲಕ ಮಾರಲು ಬಂದಿದ್ದೀರಾ?' ಎಂದ.
'ಹೌದು. ಇದರ ಬೆಲೆ ಎಷ್ಟು ಆದೀತು?'
ಸೆಕ್ರೆಟರಿಯ ಬಾಯಲ್ಲಿ 'ನಿಮ್ಮ ಪ್ರಾಮಾಣಿಕತೆಗಿಂತ ದೊಡ್ಡದಲ್ಲ' ಎಂಬ ಮಾತು ಬರುತ್ತಾ ನಿಂತಿತು. ಅವನು ಅವಾಕ್ಕಾಗಿ ವಜ್ರವನ್ನು ಕೈಯಲ್ಲೆತ್ತಿ ಪರೀಕ್ಷಿಸತೊಡಗಿದ.
. . . . .
ಮುಂದೆ 704 ಕ್ಯಾರಟ್ ತೂಕದ ವಜ್ರಕ್ಕೆ 5 ಕೋಟಿ ಡಾಲರ್ ಬೆಲೆ ಕಟ್ಟಲಾಯಿತು.
(ನೈಜ ಘಟನೆ ಆಧರಿಸಿದ್ದು.)
ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)