ನಿಸರ್ಗ

ಕವಿತೆ ಓದುವ ಮುನ್ನ: ಎಚ್. ಡಬ್ಲ್ಯೂ. ಲಾಂಗ್ ಫೆಲೋ ಒಬ್ಬ ಪ್ರತಿಷ್ಠಿತ ಅಮೆರಿಕನ್ ಕವಿ (1809-1882).  ಪ್ರಸ್ತುತ ಸಾನೆಟ್ಟಿನಲ್ಲಿ ಅವನು ನಿಸರ್ಗಕ್ಕೂ ಮಾನವನಿಗೂ ಇರುವ ತಾಯಿ-ಮಗುವಿನ ಸಂಬಂಧವನ್ನು ಚಿತ್ರಿಸಿದ್ದಾನೆ.  ರಾತ್ರಿಯಾದಾಗ  ದಣಿದಿದ್ದರೂ ನಿದ್ರಿಸದೇ ರಚ್ಚೆ ಮಾಡುವ ಮಗುವನ್ನು ರಮಿಸಿ ನಿದ್ದೆ ಮಾಡಿಸುವ ಅನುಭವವುಳ್ಳವರಿಗೆ ಈ ಕವಿತೆಯ ಧ್ವನಿ ಆಪ್ಯಾಯವಾಗುತ್ತದೆ.  ಎಲ್ಲವನ್ನೂ ಇಂದೇ ಅನುಭವಿಸಬೇಕೆಂಬ ಮಗುವಿನ ಹಠಕ್ಕೆ ಪ್ರೀತಿಯಿಂದ ಸಾಂತ್ವನ ನೀಡುವುದರ ಜೊತೆಗೇ ಮಗುವಿನ ಕೈಯಲ್ಲಿರುವ ಆಟಿಕೆಗಳನ್ನು ಜಾಣ್ಮೆಯಿಂದ ಪಡೆದುಕೊಳ್ಳುವ ತಾಯಿಯ ತಾಳ್ಮೆಯನ್ನು ಕಂಡಾಗ ಕವಿಗೆ  ಮನುಷ್ಯನನ್ನು ಹೀಗೇ ಒಂದೊಂದೇ ಹೆಜ್ಜೆ ಮುನ್ನಡೆಸುವ ಪ್ರಕ್ರಿಯೆಯ ದರ್ಶನವಾಗುತ್ತದೆ. ಬಹಳ ಸುಂದರವಾದ ಸಾನೆಟ್ಟಿನ ಕನ್ನಡ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ.

Image result for mother and sleepy child


ಮೂಲ ಸಾನೆಟ್ : ಎಚ್. ಡಬ್ಲ್ಯೂ ಲಾಂಗ್ ಫೆಲೋ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 

ಮುಗಿದು ಹಗಲಿನ ಸಂಭ್ರಮ ಇಳಿದಾಗ ಇರುಳು
ತಾಯಿ ಮೆಲ್ಲನೆ ಹಿಡಿದು ಮಗುವಿನ ಕೈಬೆರಳು
ರಮಿಸಿ ಕರೆದೊಯ್ಯುವಳು ಹಾಸಿಗೆಯ ಕಡೆಗೆ.
ಅನುಮಾನದ ಛಾಪಿದೆ ಎಳೆಮಗುವಿನ ನಡೆಗೆ -
ಮುರುಕು ಆಟಿಗೆಗಳು ಹರಡಿಕೊಂಡಿವೆ ಸುತ್ತ
ಅವುಗಳ ಕಡೆ ಹಿಂದಕ್ಕೆ ತಿರುಗಿ ನೋಡುತ್ತ
ಅಳುವ ಮಗುವಿಗೆ "ಕೊಡಿಸುವೆನು ಇನ್ನಷ್ಟು ನಾಳೆ"
ಎಂಬ ಸಾಂತ್ವನದಲ್ಲೂ ಕಾಣುವುದು  ಅನುಮಾನದ ಎಳೆ!

ಹೀಗೇ ನಮ್ಮೊಂದಿಗೆ ನಿಸರ್ಗದ ನಡೆವಳಿಕೆ 
ಕಸಿಯುತ್ತ ಕೈಗಳಿಂದ ಒಂದೊಂದಾಗಿ ಆಟಿಕೆ
ನಿದ್ರಿಸಲು ಕರೆದೊಯ್ಯುವಳು ಬಹುಮೆಲ್ಲಗೆ ಮೆಲ್ಲಗೆ.
ಹೋಗುವುದೋ ಬೇಡವೋ ಎಂಬ ಅನುಮಾನದಲ್ಲೇ
ತೆರಳುವೆವು; ತಿಳಿಯದು ನಮ್ಮ ಅರೆತೆರೆದ ಮಂಪರುಗಣ್ಣಿಗೆ 
ಅರಿತದ್ದಕ್ಕಿಂತಲೂ ಅರಿಯದೇ ಉಳಿದ ನಿಗೂಢ ಅನಂತತೆ. 

(c) 2017 ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)