ಕಾಬುಲ್

ಕವಿತೆ ಓದುವ ಮುನ್ನ: ಶಕೀಲಾ ಅಜೀಜ್ ಜಾದಾ (1964-) ಕಾಬುಲ್ ನಗರದಲ್ಲಿ ಹುಟ್ಟಿಬೆಳೆದರೂ ಅಫ್ಘಾನಿಸ್ತಾನದ ಸಂಘರ್ಷದ ಕಾರಣ ನೆದರ್ಲ್ಯಾಂಡ್ಸ್ ದೇಶಕ್ಕೆ ಹೋಗಿ ನೆಲೆಸಬೇಕಾಯಿತು. ಮೊದಲು ರಷ್ಯಾ, ಅನಂತರ ತಮ್ಮದೇ ದೇಶದ ಉಗ್ರರ ಕೈಗೆ ಸಿಕ್ಕಿ ಅಫ್ಘಾನಿಸ್ತಾನದ ಕ್ರಮಬದ್ಧ ವಿನಾಶವನ್ನು ಅನೇಕ ಕವಿಗಳು, ಕತೆಗಾರರು, ಕಾದಂಬರಿಕಾರರು ಚಿತ್ರಿಸಿದ್ದಾರೆ. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ಕಾಬುಲ್ ನಗರದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನೆದಾಗ ತಮಗೆ ಉಂಟಾಗುವ ಸಂಕಟವನ್ನು ತೋಡಿಕೊಳ್ಳುತ್ತಾರೆ. ಬಾಲಾ ಹಿಸ್ಸಾರ್ ಎಂಬುದು ಕಾಬುಲ್ ನಗರದಲ್ಲಿರುವ ಗುಡ್ಡದ ಮೇಲಿರುವ ಕೋಟೆ. ಇದರ  ಬುಡದಲ್ಲಿ ಸ್ಮಶಾನವಿದೆ. ಈ ಕವಿತೆಯಲ್ಲಿ "ಬಲತೋಳಿನ ದೇವತೆ" ಎಂಬುದಕ್ಕೆ ಎರಡು ಅರ್ಥಗಳಿರಬಹುದು. ಇಂಥ ದೇವತೆಗಳು ಭುಜಗಳ ಮೇಲೆ ಸದಾ ಕುಳಿತಿದ್ದು ನಮ್ಮ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ಗಮನಿಸುತ್ತಿರುತ್ತವೆ ಎಂದು ನಂಬುತ್ತಾರೆ. ಕಾರ್ಟೂನ್ ಚಿತ್ರಗಳಲ್ಲಿ ಇಂಥ ಚಿತ್ರಗಳನ್ನು ಬಳಸುವುದನ್ನು ಕೂಡಾ ನಾವು ನೋಡುತ್ತೇವೆ. ಬೇಸಗೆಯ ರಜೆಗಳಲ್ಲಿ ಮನೆಯಲ್ಲಿದ್ದಾಗ ಮಕ್ಕಳು ಇಂಥ ಕಾರ್ಟೂನ್ ಚಿತ್ರಗಳನ್ನು ನೋಡುವ ಬಗ್ಗೆ ಕೂಡಾ ಲೇಖಕಿ ಉಲ್ಲೇಖಿಸುತ್ತಿರಬಹುದು. 

ಮೂಲ : ಶಕೀಲಾ ಅಜೀಜ್ ಜಾದಾ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 


ಕಾಬುಲ್ ಗಾಗಿ ನನ್ನ ಎದೆ ಮಿಡಿಯುವುದು 
ಬಾಲಾ ಹಿಸ್ಸಾರ್ ಕೋಟೆಯ ಇಳಿಜಾರುಗಳಿಗಾಗಿ 
ಅದರ ಕಾಲಬುಡದಲ್ಲಿ ತಾನೇ 
ನನ್ನವರು ನಿದ್ರಿಸುತ್ತಿರುವುದು ಶಾಂತವಾಗಿ 

ನಿಜವೆಂದರೆ ಆ ಹಾಳಾದ ಹೃದಯಗಳು 
ಒಂದಾದರೂ ಮಿಡಿಯುತ್ತಿಲ್ಲ ನನಗಾಗಿ 

ಕಾಬುಲ್ ಗಾಗಿ ನನ್ನ ಹೃದಯ ಮರುಗುವುದೆಂದರೆ 
ಲೈಲಾಳ "ಅಯ್ಯೋ ದೇವರೇ!" ಎಂಬ ಕರೆಗೆ 
ಯಾವುದನ್ನು ಕೇಳಿ ಕುಟ್ಟತೊಡಗುತ್ತಿತ್ತೋ 
ನನ್ನ ಅಜ್ಜಿಯ ಹಣ್ಣೆದೆ 

ಗುಲ್ನಾರಳ ಕಣ್ಣುಗಳಿಗಾಗಿ ಮಿಡಿಯುವುದು ನನ್ನೆದೆ 
ನಸುಕಿನಿಂದ ಮುಸ್ಸಂಜೆಯವರೆಗೂ 
ವಸಂತದಿಂದ ಶಿಶಿರದವರೆಗೂ 
ಬೀದಿಗಳನ್ನು ಜರಡಿಯಾಡುತ್ತಲೇ ಕಣ್ಮಿಟುಕಿಸದೆ
ಕಳೆದವಳ ಚಿತ್ರ ಬಂದಾಗ ನನ್ನ ಹದಿಹರೆಯದ ಕನಸಿನಲ್ಲಿ 
ಕುಸಿಯತೊಡಗುತ್ತವೆ ಒಮ್ಮೆಲೇ ಒಂದೊಂದೇ ಹಾದಿ 
ನಡುಬೀದಿಗಳ ಚರ್ಮ ಸುಲಿದುಹೋದಂತೆ ಒಮ್ಮೆಲೇ  

ಕಾಬೂಲ್ ಗಾಗಿ ನನ್ನ ಹೃದಯ ಮಿಡಿಯುತ್ತದೆ 
ಬಹುಮೆಲ್ಲಗೆ ಹೆಜ್ಜೆಹಾಕುವ ಬೇಸಗೆಯನ್ನು ನೆನೆದು
ನನ್ನ ಮೂಳೆಗಳಲ್ಲಿ ಇನ್ನೂ ಆಕಳಿಸುತ್ತದೆ 
ಮಧ್ಯಾಹ್ನ ಅಪ್ಪನ ಮನೆಯಲ್ಲಿ ಗಾಢನಿದ್ದೆಯ ಮಂಪರು 

ಬಲಗಡೆಯಿಂದ ಮೂಡಿದ ದೇವತಾಮೂರ್ತಿ 
ತುಂಟಾಟದಲ್ಲಿ ಮರೆಯುತ್ತದಲ್ಲ 
ಗುಂಡೇಟುಗಳಿಂದ ತಪ್ಪಿಸಿಕೊಳ್ಳುವುದನ್ನು,
ಹೊರಗಡೆಗೆ ದೊಡ್ಡದನಿಯಲ್ಲಿ ಕೂಗಿದಾಗ 
ತರಕಾರಿ ಮಾರಲು ಬಂದವನು 
ಕನಸುಗಳಲ್ಲೇ ಬೆಚ್ಚುವರಲ್ಲ ನನ್ನ ನೆರೆಹೊರೆಯವರು,

ಇಂಥವುಗಳನ್ನು ನೆನೆದಾಗ ಗುಂಡಿಗೆ   
ವಿಲವಿಲನೆ ಒದ್ದಾಡಿ ಬಡಿದುಕೊಳ್ಳುತ್ತದೆ 

ಕವಿತೆ ಓದಿದ ನಂತರ: ಇವುಗಳನ್ನು ಕುರಿತು ಆಲೋಚಿಸಿ. 
  • ಬಾಲಾ ಹಿಸ್ಸಾರ್ ಕೆಳಗೆ ಮಲಗಿದವರು ಯಾರು ಮತ್ತು ಅವರ ಹೃದಯಗಳು ಯಾಕೆ ಮಿಡಿಯುತ್ತಿಲ್ಲ? ಲೇಖಕಿ ಈಗ ದೂರದ ದೇಶದಲ್ಲಿ ನೆಲೆಸಿರುವುದಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ?
  • ಲೈಲಾ ಕೂಗಿಕೊಂಡಿದ್ದೇಕಿರಬಹುದು ಮತ್ತು ಅಜ್ಜಿಯ ಹೃದಯ ಯಾಕೆ ಹೊಡೆದುಕೊಳ್ಳತೊಡಗಿರಬಹುದು?
  • ಗುಲ್ನಾರ್ ಯಾಕೆ ಸದಾ ಬೀದಿಯನ್ನೇ ನಿರುಕಿಸುತ್ತಾ ಕುಳಿತಿರುತ್ತಿದ್ದಳು? 
  • ಲೇಖಕಿಯ ದುಃಸ್ವಪ್ನದಲ್ಲಿ ದಾರಿಗಳು ಕುಸಿಯುವುದೇಕೆ? ಈ ದಾರಿಗಳು ಎಲ್ಲಿಂದ ಎಲ್ಲಿಗೆ ಹೋಗುತ್ತಿರಬಹುದು?
  • ತರಕಾರಿ ಮಾರುವವನು ಕೂಗಿದಾಗ ಜನ ಬೆಚ್ಚುವುದೇಕೆ?
  • ಬಾಲ್ಯದ ಸಂತೋಷದ ಕ್ಷಣಗಳಾದ ಬೇಸಗೆ ರಜೆಗಳೂ ಕವಯಿತ್ರಿಯ ಎದೆಯಲ್ಲಿ ತಲ್ಲಣ ಮೂಡಿಸಲು ಏನು ಕಾರಣವಿರಬಹುದು? ಯಾವುದೋ ಕೆಟ್ಟ ಘಟನೆ ನಡೆದಿರಬಹುದೇ? ಕವಿತೆಯನ್ನು ಮತ್ತೊಮ್ಮೆ ಓದಿ. 
 
(c) 2017 ಸಿ.ಪಿ. ರವಿಕುಮಾರ್ 


ಕಾಮೆಂಟ್‌ಗಳು

  1. ಮೂಲ ಕವಿತಯ ಇಂಗ್ಲಿಷ್ ಅನುವಾದದಿಂದ ನಾನು ಕನ್ನಡಕ್ಕೆ ಭಾಷಾಂತರ ಮಾಡಿದ್ದೇನೆ. ಇಂಗ್ಲಿಷ್ ಅನುವಾದ ಕೆಳಗೆ ಕೊಟ್ಟಿದೆ.

    Kabul

    If my heart beats
    for Kabul,
    it's for the slopes of Bala Hissar,
    holding my dead
    in its foothills.

    Though not one, not one
    of those wretched hearts
    ever beat for me.

    If my heart grieves
    for Kabul,
    it's for Leyla's sighs of
    ‘Oh, dear God!'
    and my grandmother's heart
    set pounding.

    It's for Golnar's eyes
    scanning the paths
    from dawn to dusk, spring to autumn,
    staring so long
    that all the roads fall apart
    and in my teenage nightmares
    side roads
    suddenly shed their skins.

    If my heart trembles
    for Kabul,
    it's for the slow step of summer noons,
    siestas in my father's house which,
    heavy with mid-day sleep,
    still weighs on my ribs.

    For the playful Angel of the Right Shoulder
    who keeps forgetting
    to ward away stray bullets.

    It's for the hawker's cry
    of the vegetable seller doing his rounds,
    lost in my neighbours' troubled dreams,
    that my heart's trembling.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)