ಸಸ್ಯಮಾನವ



ಮೂಲ ಚೈನೀಸ್ ಕವಿತೆ : ಯಾವೋ ಫೆಂಗ್ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 

ಒಂದು ಕಾಲದ ಜನ ಈ ಭೂಮಿಯ ಮೇಲೆ ನೇರವಾಗಿ ನಿಂತು 
ಛಪ್ಪನ್ನೈವತ್ತಾರು ದೇಶಗಳಿಗೂ ಸಸ್ಯಮೃಗಗಳಿಗೂ ಭಾಷೆಯ ಹೆಸರಿಟ್ಟರು
ಗುಲಾಬಿ ಅರಳುತ್ತದೆ ಮತ್ತು ಒಣಗಿಹೋಗುತ್ತದೆ 
ತನ್ನ ಹೆಸರು 'ಗುಲಾಬಿ' ಎಂದು ತಿಳಿದುಕೊಳ್ಳದೆ 
ಪಾಪ! ಕ್ಲೈವಿಯಾ ಹೂವಿಗೆ ಗೊತ್ತೇ ಇಲ್ಲ 
ಲೇಡಿ ಚಾರ್ಲಟ್ ಫೊರೆನ್ಷಿಯಾ ಕ್ಲೈವ್ ಜೊತೆಗಿನ ತನ್ನ  ಸಂಬಂಧ 
ಸದ್ಯಕ್ಕೆ ಸಸ್ಯ ಮತ್ತು ಪದಗಳ ಅಧ್ಯಯನಕ್ಕೂ ನನಗೂ ಮೈಲಿಗಳ ಅಂತರ 
ನಾನು ಕುಳಿತಿದ್ದೇನೆ ನನ್ನ ಹಳೆಯ ಸ್ನೇಹಿತನೊಬ್ಬನ ಮಂಚದ ಹತ್ತಿರ 
ಅವನ ದೇಹಕ್ಕೆ ಚುಚ್ಚಿದ್ದಾರೆ ಅದೆಷ್ಟೋ ಟ್ಯೂಬುಗಳು 
ಕಾಣುತ್ತಾನೆ ಗೆಣಸಿನ ಗಡ್ಡೆಯಂತೆ ನೋಡಲು 
ನಾನು ಕಣ್ತಪ್ಪಿಸಿ ದೃಷ್ಟಿ ಹೊರಳಿಸುತ್ತೇನೆ ಕಿಟಕಿಯ ಕಡೆಗೆ 
ಅಲ್ಲೊಂದು ಮರ ತನ್ನ ಛತ್ರಿಯನ್ನು ಹರಡಿದೆ 
ಗಾಜಿನ ಮೇಲೆ ಬಿಡಿಸುತ್ತಿದೆ 
ಅಸಂಖ್ಯ ಬಿಸಿಲು-ನೆರಳಿನ ಚಿತ್ರ 
ಕೊನೆಗೆ ನಾನು ಮತ್ತೊಮ್ಮೆ ಸ್ನೇಹಿತನ ಕಡೆಗೆ ನೋಡುತ್ತೇನೆ 
ಅವನು ದೊಡ್ಡದಾಗಿ ಕಣ್ಣುಬಿಡುತ್ತಾನೆ 
ಆದರೂ ಅವನ ಕಣ್ಣುಗಳಲ್ಲಿಲ್ಲ ಯಾವುದೇ ಗುರುತಿನ ಚಿಹ್ನೆ 


ಕವಿತೆಯ ಸೊಗಸು: ಕವಿಯ ಒಬ್ಬ ಮಿತ್ರ ಅಸ್ವಸ್ಥನಾಗಿ ಆಸ್ಪತ್ರೆಯ ಕೋಣೆಯಲ್ಲಿ ಮಲಗಿದ್ದಾನೆ. ಅವನ ದೇಹಕ್ಕೆ ಹಲವು ಟ್ಯೂಬುಗಳನ್ನು ಚುಚ್ಚಿದ್ದಾರೆ. ಹೇಗೆ ಸಸ್ಯಗಳು ತಮ್ಮ ಬೇರುಗಳಿಂದ ನೀರು-ಆಹಾರಗಳನ್ನು ಎಳೆದುಕೊಳ್ಳುತ್ತವೆಯೋ ಹಾಗೇ ಈ ಮಾನವನೂ ಟ್ಯೂಬುಗಳ ಮೂಲಕವೇ ಸೇವಿಸುತ್ತಿದ್ದಾನೆ. ಇದನ್ನು ನೋಡಿದಾಗ ಕವಿಗೆ ಮನುಷ್ಯ ಮತ್ತು ಸಸ್ಯಲೋಕದ ನಡುವಿನ ಸಂಬಂಧದ ಬಗ್ಗೆ ಕುತೂಹಲ ಹುಟ್ಟುತ್ತದೆ. ಮನುಷ್ಯ ಈ ಸಸ್ಯಗಳಿಗೆ ಹೆಸರುಗಳನ್ನಿಟ್ಟಿದ್ದಾನೆ. ಆದರೆ ಅವುಗಳೊಂದಿಗಿನ ಸಂಬಂಧವನ್ನು ಕಳೆದುಕೊಂಡಿದ್ದಾನೆ (ನಿದ್ದೆಯಿಂದ ಎದ್ದ ರೋಗಿಯ ಕಣ್ಣಿನಲ್ಲಿ ಯಾವುದೇ ಪರಿಚಯದ ಹೊಳಹಿಲ್ಲ - ಅವನು ಕೇವಲ ಬದುಕಲು ಮಾತ್ರ ಹೋರಾಡುತ್ತಿದ್ದಾನೆ.) ಇತ್ತ ಸಸ್ಯಲೋಕದ ಜೀವಿಗಳು ತಮ್ಮ ನಿಷ್ಕಾಮಕರ್ಮವನ್ನು ಮುಂದುವರೆಸಿವೆ. ಕ್ಲೈವ್ ಎಂಬ ರಾಜವಂಶದ ಮಹಿಳೆಯ ಗೌರವಾರ್ಥವಾಗಿ ಕ್ಲೈವಿಯಾ ಎಂಬ ಹೂವಿಗೆ ಹೆಸರು ನೀಡಲಾಗಿದೆ. ಆದರೆ ಹೂವಿಗೆ ಇದರ ಪರಿವೆಯೇ ಇಲ್ಲ. ಕೇವಲ ಅರಳುವುದು ಮತ್ತು ಬಾಡುವುದೇ ಅದರ ಕ್ರಿಯೆ. ಮನುಷ್ಯ ಇದಕ್ಕಿಂತ ಭಿನ್ನವೇ ಎಂಬ ಆಲೋಚನೆ ಕವಿಗೆ ಬಂದಿರಬಹುದು.  ಕಿಟಕಿಯ ಗಾಜಿನ ಮೇಲೆ ಅಸಂಖ್ಯ ನೆರಳುಗಳ ಚಿತ್ರ ಬಿಡಿಸುತ್ತಿರುವ ಮರವನ್ನು ನೋಡಿದಾಗ ಅವನ ಆಲೋಚನೆ ಬದಲಾಗಿರಬಹುದೇ?

ಕಾಮೆಂಟ್‌ಗಳು








  1. People, once they stood upright on this earth,
    began to name with language this great chiliocosm
    Roses flower and wither
    unaware that their name is ‘rose’
    Clivia has no notion
    of its relation to Lady Charlotte Forentia Clive
    Just now I’m miles from the study of words and of plants
    seated wordlessly by my old friend’s bed
    His body is plugged with tubes
    making him look like a lush tuber
    I avert my gaze, at the window a tree
    unfolds all its foliage
    on glass panes it casts delightful spot-shadows
    At last I glance at my friend again
    he opens his eyes wide
    but he registers nothing at all
    (Plantman - by Yao Feng)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)