ಒಬ್ಬಿಬ್ಬರಾದರೆ ತಿಳಿಸಿ ಹೇಳಬಹುದಾಗಿತ್ತು

ಮೂಲ ರಚನೆ : ಮಹಾತ್ಮಾ ಕಬೀರ್ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 

ಓದುವ ಮುನ್ನ: ಕಬೀರನ ಈ ರಚನೆಯನ್ನು "ಭಜನೆ" ಅಥವಾ "ಕೀರ್ತನೆ" ಎಂದು ಕರೆಯುವುದು ಅಷ್ಟು ಒಪ್ಪುವುದಿಲ್ಲ. ಏಕೆಂದರೆ ಕಬೀರ ಇಲ್ಲಿ ಯಾವುದೇ ದೇವರನ್ನು ಭಜಿಸುತ್ತಿಲ್ಲ, ಯಾರ ಕೀರ್ತಿಯನ್ನೂ ಹೊಗಳುತ್ತಿಲ್ಲ.  ಅವನು ಇಲ್ಲಿ ಹೇಳುತ್ತಿರುವುದು ಜೀವನದ ಕಹಿ ಸತ್ಯಗಳನ್ನು.  ಎಲ್ಲರೂ ಹೊಟ್ಟೆಪಾಡಿನ ಧಂಧೆಯಲ್ಲಿ ತೊಡಗಿಕೊಂಡು ಜೀವನದ ಸತ್ಯಗಳನ್ನು ಮರೆತಿರುವುದು ಅವನಿಗೆ ಸೋಜಿಗ ತರುತ್ತಿದೆ. "ಎಷ್ಟು ಜನರಿಗೆ ತಿಳಿಸಿ ಹೇಳುವುದು, ಒಬ್ಬಿಬ್ಬರಾದರೆ ಎಬ್ಬಿಸಿ  ಹೇಳಬಹುದಾಗಿತ್ತು!" ಎಂದು ಅವನು ಮರುಗುತ್ತಾನೆ. ಅವನು ತಿಳಿಸಿ ಹೇಳಬೇಕಾಗಿರುವುದು ನಮ್ಮ ಬದುಕು ನಶ್ವರ ಎಂಬ ಸತ್ಯ. ನಮ್ಮ ಶರೀರದಲ್ಲಿರುವುದು ನೀರು. ಅದರಲ್ಲಿ ಹರಿಯುತ್ತಿರುವುದು ವಾಯು. ಹೇಗೆ ಮಂಜಿನ ಹನಿಯನ್ನು ಗಾಳಿ ಆರಿಸಿ ಕೊಂಡೊಯ್ಯುವುದೋ ಹಾಗೆ ಒಂದು ದಿನ ನಮ್ಮ ಶರೀರವೂ ನಾಶವಾಗುವುದು ಖಂಡಿತ ಎಂಬುದು ಕಬೀರನ ವಾಣಿ.  ಜೀವನವು ಒಂದು ಅನಾದಿ ಅನಂತ ನದಿ. ಹೊಳೆಯ ಆಳ-ಹರಿವು ಇವುಗಳ ಅರಿವೇ ಇಲ್ಲದೆ ಹೊರಟ ಅಂಬಿಗನಿಗೆ ಮೃತ್ಯು ಕೊರಳಿಗೆ ಕಟ್ಟಿದೆ. ದೋಣಿಗೆ ಹಗ್ಗ ಕಟ್ಟಿದ ಹಾಗೆ ಅಂಬಿಗನ ಕೊರಳಿಗೆ ಹಗ್ಗ ಕಟ್ಟಿದೆ ಎಂಬ ರೂಪಕ ಕೂಡಾ ಸುಂದರವಾಗಿದೆ.  

Image result for dew drop wiki

ಒಬ್ಬಿಬ್ಬರಾದರೆ ತಿಳಿಸಿ ಹೇಳಬಹುದಾಗಿತ್ತು 
ಎಲ್ಲ ಮರೆಸಿದೆ ಹೊಟ್ಟೆಪಾಡು ಎಲ್ಲರಿಗೂ 

ನೀರಿನ ಶರೀರದಲ್ಲಿ ಹರಿಯುತ್ತಿದೆ ವಾಯು 
ಒಣಗುವುದು ಒಂದು ದಿನ ಹೊಳೆವ ಹನಿಮಂಜು 

ಅಂಬಿಗನಿಗೆ ತಿಳಿದಿಲ್ಲ ಹೊಳೆಯ ಆಳ ವಿಸ್ತಾರ 
ಕಟ್ಟಿಕೊಂಡಿದೆ ಅವನ ಕೊರಳಿಗೊಂದು ಹಗ್ಗ  

ಮನೆಯೊಳಗಿರುವ ವಸ್ತು ಕಾಣದೇ ಕುರುಡನ ಕಣ್ಣಿಗೆ 
ಹುಡುಕುತ್ತಾನೆ ಹೊರಗೆ ಹೊತ್ತುಕೊಂಡು ಹಣತೆ 

ಹರಡುತ್ತಿದೆ ಸುಡುಬೆಂಕಿ ಬಿದ್ದಿದೆ ಇಡೀ ಕಾಡಿಗೆ 
ಕಳೆದುಹೋಗಿದ್ದಾನೆ ದಾರಿ ತೋರುವ ಗುರುವಿಲ್ಲದೆ 

ಹೇಳುತ್ತಾನೆ ಕಬೀರ ಕೇಳಿಸಿಕೊಳ್ಳಿ ಎಲ್ಲರೂ
ಬಿಟ್ಟು ಹೋಗುವಿರಿ ತೊಟ್ಟ ಲಂಗೋಟಿಯನ್ನೂ 



ಕಾಮೆಂಟ್‌ಗಳು

  1. इक दु होयँ उन्हैं समुझावौं
    सबहि भुलाने पेटके धन्धा।
    पानी घोड पवन असवरवा
    ढरकि परै जस ओसक बुन्दा॥ १॥
    गहिरी नदी अगम बहै धरवा
    खेवन-हार के पडिगा फन्दा।
    घर की वस्तु नजर नहि आवत
    दियना बारिके ढूँढत अन्धा॥ २॥
    लागी आगि सबै बन जरिगा
    बिन गुरुज्ञान भटकिगा बन्दा।
    कहै कबीर सुनो भाई साधो
    जाय लंगोटी झारि के बन्दा॥ ३॥

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)