ಬಿತ್ತರ


ಸಿ.ಪಿ. ರವಿಕುಮಾರ್

'ಫೇಸ್ ಬುಕ್ ಮೇಲೆ ಈ ಚರ್ಚೆಗಳು ಅತಿಯಾದವು!' ಎಂದು ಗೋಪಿ ಉದ್ಗರಿಸಿದ. ಅವನಿಗೆ ಸ್ವಲ್ಪ ಸಿಟ್ಟು ಬಂದಹಾಗಿತ್ತು. ಅವನ ನೆಚ್ಚಿನ ರಾಜಕಾರಣಿಯನ್ನು ಯಾರೋ ಹಂಗಿಸಿ ಮೀಮ್ ಮಾಡಿದ್ದರು. ಅವನ ಮಿತ್ರ ಶ್ರೀರಾಮ್ ಕೂಡಾ ಗೋಪಿಯ ಮಾತಿಗೆ ಸಹಮತಿ ಸೂಚಿಸಿದ. 'ಗಾಂಧಿಯಾಗಲಿ ರಾಧಾಕೃಷ್ಣನ್ ಆಗಲಿ ಇವರ ಹಲ್ಲಿಗೆ ಸಿಕ್ಕದವರೇ ಇಲ್ಲ. ಯಾರೋ ವಾಂತಿ ಮಾಡಿಕೊಂಡಿದ್ದನ್ನೆಲ್ಲಾ ನಮಗೆ ಇವರು ಹಂಚುವವರು' ಎಂದು ಸಿಡಿದ. ಅವತ್ತು ಇದೇ ಚರ್ಚೆಯ ವಿಷಯವಾಯಿತು. ಆಗ ಮೂರ್ತಿ ಒಂದು ಕಥೆ ಹೇಳಿದರು.

ಗುರು ನಾನಕ್ ಮತ್ತು ಅವರ ಶಿಷ್ಯoದಿರು ಆ ಹಳ್ಳಿಗೆ ಆಗಮಿಸಿದಾಗ ಹಳ್ಳಿಯ ಜನ ಅವರನ್ನು ಆದರದಿಂದ ಬರಮಾಡಿಕೊಂಡರು. ಆಯಾಸ ಪರಿಹಾರಕ್ಕಾಗಿ ಪಾನಕ ಮತ್ತು ಮಜ್ಜಿಗೆ ಕೊಟ್ಟರು. ಬೀಸಣಿಕೆಯಿಂದ ಗಾಳಿ ಹಾಕಿದರು. 'ನಮ್ಮ ಊರಿನಲ್ಲಿ ಸ್ವಲ್ಪ ದಿನಗಳ ಕಾಲ ಇದ್ದುಹೋಗಬೇಕು. ಪ್ರವಚನ ಮಾಡಬೇಕು. ನಿಮ್ಮ ಆತಿಥ್ಯದ ಹೊಣೆ ನಮ್ಮದು' ಎಂದು ಉಪಚರಿಸಿದರು. ಆದರೆ ಗುರುಗಳು ಸಂಜೆಯ ಪ್ರವಚನದ ನಂತರ ಹೊರಡುವ ನಿರ್ಧಾರ ಪ್ರಕಟಿಸಿದರು. ಊರಿನ ಜನ ಪ್ರವಚನವನ್ನು ಶಾಂತವಾಗಿ ಕುಳಿತು ಕಿವಿಗೊಟ್ಟು ಕೇಳಿದರು. ನಂತರ ಗುರುಶಿಷ್ಯರ ಭೋಜನದ ವ್ಯವಸ್ಥೆ ಮಾಡಿದರು. ಹೊರಡುವಾಗ ಗುರುಗಳ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಬೇಡಿದರು. ಗುರುಗಳು 'ನೀವು ಹರಡಿಹೋಗುವಂತಾಗಲಿ' ಎಂದು ಆಶೀರ್ವಚನ ನುಡಿದುಬಿಟ್ಟರು! ಊರಿನವರು ಸುಮ್ಮನಿದ್ದರು. ಶಿಷ್ಯರು ಬೆರಗಾಗಿಹೋದರು. ಇದೆಂಥ ಆಶೀರ್ವಾದ! ಆದರೂ ಏನೂ ಅನ್ನದೆ ಅವರು ಪ್ರಯಾಣ ಮುಂದುವರೆಸಿದರು.

ಅವರು ನಡೆದುಕೊಂಡು ಮುಂದಿನ ಹಳ್ಳಿಗೆ ಬಂದಾಗ ರಾತ್ರಿಯಾಗಿಹೋಗಿತ್ತು. ಹಳ್ಳಿಯ ಹೊರಗಿನ ಆಲದ ಮರದ ಬುಡದಲ್ಲಿ ಕೂತಿದ್ದ ಜನ ಹುಕ್ಕಾ ಸೇವಿಸುತ್ತಾ ಹರಟೆ ಹೊಡೆಯುತ್ತಿದ್ದರು. ಇವರನ್ನು ನೋಡಿಯೂ ನೋಡದಂತೆ ಸುಮ್ಮನಿದ್ದರು. ಇವರಾಗಿ ಅವರನ್ನು ಮಾತಾಡಿಸಿದಾಗಲೂ ಅವರು ಸರಿಯಾಗಿ ಉತ್ತರಿಸಲಿಲ್ಲ. ಇಳಿದುಕೊಳ್ಳಲು ಸ್ಥಳ ಸಿಕ್ಕುವುದೇ ಎಂದಾಗ 'ಇಲ್ಲೇ ಬಯಲಲ್ಲಿ ಮಲಗಿಕೊಳ್ಳಿ' ಎಂದರು. ಗುರುಗಳು ನಕ್ಕು ಬಯಲಿನ ಕಡೆ ನಡೆದರು. ರಾತ್ರಿ ಹೇಗೋ ಕಳೆಯಿತು. ಬೆಳಗ್ಗೆ ಎದ್ದಾಗ ಅವರ ಗಂಟುಗಳಲ್ಲಿ ಒಂದು ಕಾಣೆಯಾಗಿತ್ತು. ಶಿಷ್ಯರಿಗೆ ಆಘಾತ! ಅವರ ಅಲ್ಪ ಹಣ ಮತ್ತು ಬಟ್ಟೆಗಳಿದ್ದ ಗಂಟನ್ನು ಯಾರೋ ಊರಿನವರೇ ಲಪಟಾಯಿಸಿದ್ದರು. ಕೆರೆಯಲ್ಲಿ ಸ್ನಾನ ಮುಗಿಸಿ ಊರಿನವರನ್ನು ಕೇಳಿ ಒಂದಿಷ್ಟು ಆಹಾರ ಸಂಪಾದಿಸಿದ್ದಾಯಿತು. ಊರಿನ ಮುಖಂಡನ ಮನೆಯ ಮುಂದೆ ಕುಳಿತು ಉಪಾಹಾರ ಮಾಡುತ್ತಿದ್ದಾಗ ಪಕ್ಕದ ಹಳ್ಳಿಯವನೊಬ್ಬ ಅಲ್ಲಿಗೆ ಬಂದು ಇವರನ್ನು ಗುರುತಿಸಿ ಅಡ್ಡಬಿದ್ದ. ಅವರ ಗುಣಗಾನ ಮಾಡತೊಡಗಿದ. ಗುರುಗಳ ಪ್ರವಚನವನ್ನು ಕೇಳಿ ತಮ್ಮ ಜನ್ಮ ಸಾರ್ಥಕವಾಯಿತು ಎಂದ. ಮುಖಂಡನಿಗೆ ಇದನ್ನೆಲ್ಲಾ ಕೇಳಿ ಕುತೂಹಲ ಹುಟ್ಟಿತು. 'ನಮ್ಮ ಹಳ್ಳಿಯಲ್ಲೂ ಪ್ರವಚನ ಕೊಟ್ಟರೆ ಎಷ್ಟು ದುಡ್ಡು ಕೊಡಬೇಕು?' ಎಂದು ಕೇಳಿದ. ಶಿಷ್ಯರು ಅವನ ಕಡೆ ತೀಕ್ಷ್ಣವಾಗಿ ನೋಡಿದರು. ಗುರುಗಳು ನಕ್ಕು 'ಅದು ನಿಮ್ಮ ಇಷ್ಟ!' ಎಂದರು. ಪ್ರವಚನ ನಡೆಯಿತು. ಹಳ್ಳಿಯವರು ಮನಸ್ಸಿಲ್ಲದೆ ಬಂದು ಕೂತಿದ್ದರು. ಮಧ್ಯೆ ಮಾತಾಡುತ್ತಿದ್ದರು. ಪ್ರವಚನ ಮುಗಿದಾಗ ಪಕ್ಕದ ಊರಿನಿಂದ ಬಂದಿದ್ದ ಅತಿಥಿ ಗುರುಗಳ ಕಾಲಿಗೆ ನಮಸ್ಕಾರ ಮಾಡಿದ. ಅವರು ಅವನ ತಲೆಯ ಮೇಲೆ ಕೈಯಿಟ್ಟು 'ನನ್ನ ಆಶೀರ್ವಾದ ನಿನಗೆ ಆಗಲೇ ಹೇಳಿದ್ದೇನೆ' ಎಂದರು. ಈಗ ಹಳ್ಳಿಯ ಮುಖಂಡನಿಗೂ ಸ್ಫೂರ್ತಿ ಬಂತು. ಅವನೂ ಗುರುಗಳ ಕಾಲಿಗೆ ಎರಗಿದ. ಇದನ್ನು ನೋಡಿ ಉಳಿದವರೂ ನಮಸ್ಕರಿಸಿದರು. ಗುರುಗಳು ಅವರಿಗೆ 'ಈ ಹಳ್ಳಿ ಉದ್ಧಾರವಾಗಿ ನೀವೆಲ್ಲರೂ ಇಲ್ಲಿ ನೆಲೆಯಾಗಿ ನಿಲ್ಲಿ' ಎಂದು ಹರಸಿದರು.

ಶಿಷ್ಯರಿಗೆ ಈಗ ಕೋಪ ತಡೆಯಲಿಲ್ಲ. ಹಳ್ಳಿಯಿಂದ ಕಾಲ್ನಡಿಗೆಯಲ್ಲಿ ಹೊರಟ ನಂತರ ಒಬ್ಬ ಶಿಷ್ಯ ಧೈರ್ಯ ಮಾಡಿ ಕೇಳಿಯೇ ಬಿಟ್ಟ. 'ಗುರುಗಳೇ ಇದೇ ಏನು ನ್ಯಾಯ!'

'ಯಾಕೆ, ಏನಾಯಿತು ಮರ್ದಾನಾ?'

'ಅಷ್ಟು ಒಳ್ಳೆಯ ಸಂಸ್ಕಾರ ಹೊಂದಿದ ಸಜ್ಜನರು ಕಾಲಿಗೆ ಬಿದ್ದು ನಮಸ್ಕರಿಸಿದಾಗ ಅವರಿಗೆ ನೀವು ಹರಡಿಹೋಗಿ ಎಂದು ಆಶೀರ್ವಾದ! ಈ ಹಳ್ಳಿಯ ದುರ್ಜನರಿಗೆ ನೆಲೆಯಾಗಿ ನಿಲ್ಲಿ ಎಂಬ ಹರಕೆ! ಇದೇ ಏನು ನ್ಯಾಯ !'

'ಓ, ಇದೋ ನಿನ್ನ ಸಂಶಯ! ಮರ್ದಾನಾ, ಒಳ್ಳೆಯವರು ಎಂದು ನೀನು ಅಂದೆಯಲ್ಲ, ಅಂಥವರು ಎಲ್ಲಾ ಕಡೆ ಹರಡಿದರೆ ಅವರು ಬೇರೆ ಕಡೆಗೂ ತಮ್ಮ ಒಳ್ಳೆಯತನ ಹರಡುತ್ತಾರೆ. ಈ ಹಳ್ಳಿಯ ಜನ ಇಲ್ಲೇ ನೆಲೆಯಾಗಿದ್ದರೆ ಸಾಕು, ಅವರು ಜಗತ್ತಿನಲ್ಲಿ ಎಲ್ಲಾ ಕಡೆ ಹರಡುವುದು ಬೇಡ ಎಂದು ನನಗಂತೂ ಆನ್ನಿಸುತ್ತದೆ! ನಿನ್ನ ಅಭಿಪ್ರಾಯವೇನು?'

ಗುರುಗಳ ಆಶೀರ್ವಾದ ಸರಿಯಾಗಿಯೇ ಇದೆ ಎಂದು ಈಗ ಎಲ್ಲರಿಗೂ ಅನ್ನಿಸಿತು. ಅವರು ನಗುತ್ತಾ ಪ್ರಯಾಣ ಮುಂದುವರೆಸಿದರು.

ಮೂರ್ತಿಯವರು ಕಥೆ ಮುಗಿಸುವುದಕ್ಕೂ ಮದುವೆ ಆರತಕ್ಷತೆಗೆ ಹೋಗಿದ್ದ ವಾಣಿ ಮನೆಗೆ ಬರುವುದಕ್ಕೂ ತಾಳೆಯಾಯಿತು. 'ಮದುವೆ ರಿಸೆಪ್ಷನ್ ಹೇಗಿತ್ತು?' ಎಂದು ಮಗಳನ್ನು ಮೂರ್ತಿ ಕೇಳಿದರು.

'ಗೋಬಿ ಮಂಚೂರಿ ತೀರಾ ಕೆಟ್ಟದಾಗಿತ್ತು' ಎಂಬ ಉತ್ತರ ಬಂತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)