ಮೃತ್ಯುಶಯ್ಯೆಯಲ್ಲಿ

ಇದನ್ನು ಕ್ಸು ಲಿಷೀ ಬರೆದದ್ದು ಸೆಪ್ಟೆಂಬರ್ ೩೦, ೨೦೧೪.  ಅದೇ ಅವನ ಕೊನೆಯ ಕವಿತೆ. ಅದೇ ದಿವಸ ಅವನು ಫ್ಯಾಕ್ಟರಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ. 




ಮೃತ್ಯುಶಯ್ಯೆಯಲ್ಲಿ 
ಮತ್ತೊಮ್ಮೆ ಕಡಲನ್ನು ನೋಡಬೇಕೆನ್ನಿಸುತ್ತಿದೆ.  
ಅರ್ಧ ಜೀವಮಾನದ ಕಂಬನಿ ತುಂಬಿದ ಅಗಾಧತೆಯನ್ನು 
ತುಂಬಿಕೊಳ್ಳಲು ಕಣ್ಣೊಳಗೆ.

ಹತ್ತಬೇಕೆನ್ನಿಸುತ್ತಿದೆ ಬೇರಾವುದಾದರೂ  ಬೆಟ್ಟ, 
ಕೂಗಿ ಕರೆಯಬೇಕೆನ್ನಿಸುತ್ತಿದೆ ನಾನು ಕಳೆದುಕೊಂಡ ಆತ್ಮ. 

ಆಗಸವನ್ನು ಮುಟ್ಟಿ 
ಅನುಭವಿಸಬೇಕೆನ್ನಿಸುತ್ತಿದೆ  
ಅದರ ಹಗುರ ನೀಲಿಯನ್ನು. 

ಮಾಡಲಾರೆ ಇದಾವುದನ್ನೂ 
ಎಂಬ ಕಾರಣಕ್ಕೇ ಜಗತ್ತನ್ನು ಬಿಟ್ಟು ಹೊರಟಿರುವೆ. 

ನನ್ನನ್ನು ಬಲ್ಲವರಿಗೆ ನನ್ನ ನಿರ್ಗಮನ 
ಆಶ್ಚರ್ಯ ತರಕೂಡದು. 
ಯಾರ ಎದೆಗೂ ತರಕೂಡದು ದುಃಖ,
ಕಣ್ಣಿನಲ್ಲಿ ತರಬಾರದು ನೀರು.
ಬರುವಾಗ  ನಾನು ಭೇಷಾಗಿದ್ದೆ,
ಹೋಗುವಾಗಲೂ ಚೆನ್ನಾಗೇ ಹೋಗುತ್ತಿರುವೆ. 

ಸಂಘರ್ಷ 

ಇವನು ಹೆಚ್ಚು ಮಾತಾಡುವುದಿಲ್ಲ ಎನ್ನುತ್ತಾರೆ
ಎಲ್ಲರೂ ನನ್ನನ್ನು ಕುರಿತು.
ನಾನು ಅಲ್ಲಗಳೆಯುವುದಿಲ್ಲ.
ಮಾತನಾಡುವೆನೋ ಇಲ್ಲವೋ
ಸಮಾಜದೊಂದಿಗೆ
ಖಂಡಿತಾ ಹೂಡುತ್ತೇನೆ ಸಂಘರ್ಷ 
ಅದರೊಂದಿಗೆ.

ಇನ್ನೂ ಮುಗಿದಿಲ್ಲ ನನ್ನ ಬಾಳ ಪಯಣ 

ಎಲ್ಲರ ಅಪೇಕ್ಷೆಯನ್ನು ಮೀರಿ 
ಬಾಳ ಪಯಣದಲ್ಲಿ ಇನ್ನೂ ಉಳಿದುಕೊಂಡಿದೆ ಬಹಳ
ಆದರೆ ಪಯಣವು ಅರ್ಧದಲ್ಲೇ ನಿಂತುಹೋಗಿದೆ ಸದ್ಯಕ್ಕೆ. 
ಇಂಥ ಕಷ್ಟಗಳು ಹಿಂದೆ ಬಂದಿರಲಿಲ್ಲವೆಂದಲ್ಲ
ಹೀಗೆ ಒಮ್ಮೆಲೇ ಇಷ್ಟೊಂದು 
ಭಯಂಕರವಾಗಿ ಬಂದಿರಲಿಲ್ಲ ಅಷ್ಟೇ.  
ನಾನು ಹೋರಾಡಿದರೂ ಮತ್ತೆಮತ್ತೆ 
ಎಲ್ಲವೂ ನಿರರ್ಥಕವೆನ್ನಿಸುತ್ತಿದೆ. 

ಎಲ್ಲರಿಗಿಂತ ನಾನು ಮೇಲೆದ್ದು ನಿಲ್ಲುವ ಆಸೆ 
ಆದರೆ ಕಾಲುಗಳು ಸಹಕರಿಸುತ್ತಿಲ್ಲ. 
ನನ್ನ ಹೊಟ್ಟೆ ಸಹಕರಿಸುತ್ತಿಲ್ಲ. 
ನನ್ನ ದೇಹದ ಯಾವುದೇ ಮೂಳೆಯೂ ಸಹಕರಿಸುತ್ತಿಲ್ಲ. 
ಸಹಾಯಕ್ಕಾಗಿ ಕೂಗಿ ಕರೆಯುತ್ತಾ  
ಒಂದೆಡೆ ಬಿದ್ದುಕೊಂಡಿರಬಲ್ಲೆ ಕತ್ತಲಿನಲ್ಲಿ. 
ಆದರೆ ಪ್ರತಿಯೊಂದು ಸಲ ಕೂಗಿ ಕರೆದಾಗಲೂ 
ಕೇಳುತ್ತದೆ ಹತಾಶೆಯ ಮಾರ್ದನಿ.  

ನುಂಗಿರುವೆ ಒಂದು ಕಬ್ಬಿಣದ ಚಂದ್ರ

ನುಗಿಬಿಟ್ಟಿದ್ದೇನೆ ಒಂದು ಕಬ್ಬಿಣದ ಚಂದ್ರ
ಅದನ್ನು ಮೊಳೆ ಎನ್ನುತ್ತಾರೆ ಎಲ್ಲರೂ. 
ನುಂಗಿದ್ದೇನೆ ಕೈಗಾರಿಕಾ ಚರಂಡಿಯನ್ನು, 
ನುಂಗಿದ್ದೇನೆ ನಿರುದ್ಯೋಗ ಕಾಗದಪತ್ರಗಳು. 

ಯಂತ್ರಗಳ ಮುಂದೆ ಬಗ್ಗಿನಿಂತ ಯುವಕ ಯುವತಿಯರು 
ಸಾಯುತ್ತಾರೆ ತಮ್ಮ ಸಮಯ ಬರುವ ಮುನ್ನವೇ.  

ನುಂಗಿರುವೆ ಎಲ್ಲ ಗಡಿಬಿಡಿ ಮತ್ತು ನಿರಾಶೆ. 
ನುಂಗಿದ್ದೇನೆ ದಾರಿಹೋಕರ ಮೇಲ್ಸೇತುವೆ 
ಮತ್ತು ತುಕ್ಕು ಹಿಡಿದ ಜೀವನವನ್ನು ನುಂಗಿರುವೆ.
ಇನ್ನು ನಾನೇನೂ ನುಂಗಲಾರೆ. 
ನುಂಗಿದ್ದೆಲ್ಲವೂ ಹೊರಬರುತ್ತಿದೆ 
ಹರಡಿಕೊಳ್ಳುತ್ತಿದೆ 
ನನ್ನ ಪೂರ್ವಜರ ಪುಣ್ಯಭೂಮಿಯ ಮೇಲೆ 
ಒಂದು ನಾಚಿಕೆಗೇಡು ಪದ್ಯವಾಗಿ.  


ಬಾಡಿಗೆ ಕೋಣೆ 


ಹತ್ತು ಚದರ ಮೀಟರ್ ಸ್ಥಳದಲ್ಲಿ  
ಸಾಮಾನು ತುಂಬಿಕೊಂಡಿದೆ.  
ತೇವವಿರುತ್ತದೆ ಇಲ್ಲಿ ವರ್ಷವಿಡೀ 
ಸೂರ್ಯನ ದರ್ಶನವೇ ಇಲ್ಲದೆ. 
ಇಲ್ಲೇ  ನನ್ನ ಉ.ಮ.ಹೇ., ಇಲ್ಲೇ ನನ್ನ ಆಲೋಚನೆ,
ಕೆಮ್ಮುವುದು, ತಲೆನೋವಿನಲ್ಲಿ ನರಳುವುದು, ವಯಸ್ಸಾಗುವುದು,
ಜಡ್ಡು ಬೀಳುವುದು, ಇಷ್ಟಾದರೂ ಸಾಯದೇ ಇರುವುದು ಇಲ್ಲೇ. 
ಪೇಲವ ಹಳದಿ ಬೆಳಕಿನಲ್ಲಿ ಕಣ್ಣರಳಿಸಿ ದಿಟ್ಟಿಸುತ್ತೇನೆ, 
ಕೆಲವೊಮ್ಮೆ ಪೆದ್ದನ ಹಾಗೆ ನಗುತ್ತೇನೆ. 
ಅತ್ತಿಂದಿತ್ತ ಓಡಾಡುತ್ತೇನೆ, ಮೆಲ್ಲಗೆ ಹಾಡಿಕೊಳ್ಳುತ್ತೇನೆ, 
ಪದ್ಯಗಳನ್ನು ಓದುತ್ತೇನೆ, ಬರೆಯುತ್ತೇನೆ. 
ಕಿಟಕಿಯನ್ನು ಅಥವಾ ಹೊರಗಡೆಯ ಬಾಗಿಲು ತೆರೆಯುವಾಗ 
ಗೋರಿಯ ಮುಚ್ಚಳವನ್ನು ಮೆಲ್ಲನೆ ಮೇಲೆತ್ತುವ 
ಸತ್ತ ನರಮನುಷ್ಯನಂತೆ ತೋರುತ್ತೇನೆ. 



ಕ್ಸು ಲಿಷೀ ಸಾವಿನ ಸುದ್ದಿ ಕೇಳಿ

ಮೂಲ : ಕ್ಷೌ ಕಿಜಾವೊ  


ಯಾವುದೇ ಜೀವ ನಷ್ಟವಾದಾಗಲೂ
ಅದು ನನ್ನದೇ ಸಾವು.
ಮತ್ತೊಂದು ಸ್ಕ್ರೂ ಸಡಿಲವಾಗಿ ಕೆಳಗೆ ಬಿತ್ತು.
ಮತ್ತೊಬ್ಬ ವಲಸಿಗ ಕಾರ್ಮಿಕ ನೆಗೆದ.

ನನ್ನ ಬದಲು ನೀನು ಸತ್ತೆ.
ನಿನ್ನ ಬರಹವನ್ನು ನಾನು ಮುಂದುವರೆಸುತ್ತೇನೆ
ಸ್ಕ್ರೂ ಮೊಳೆಗಳನ್ನು ಮತ್ತೆ ಬಿಗಿ ಮಾಡುತ್ತಾ.

ಇವತ್ತು ನಮ್ಮ ದೇಶದ ಅರವತ್ತೈದನೇ ಜಯಂತಿ.
ಇಡೀ ದೇಶಕ್ಕೆ ಶುಭಾಶಯ ಕೋರುತ್ತೇನೆ.

ಕಪ್ಪು-ಬಿಳುಪು ಚಿತ್ರದಲ್ಲಿ
ಇಪ್ಪತ್ತನಾಲ್ಕು ವರ್ಷದ ನೀನು
ನಸುನಗುತ್ತ ನಿಂತಿದ್ದೀ.
ಸಣ್ಣಗೆ ಬೀಳುತ್ತಿದೆ ಶರತ್ಕಾಲದ ಮಳೆ,
ಬೀಸುತ್ತಿದೆ ಶರತ್ಕಾಲದ ಗಾಳಿ.

ತಲೆ ಬೆಳ್ಳಗಾದ ಅಪ್ಪನೊಬ್ಬ
ಕಪ್ಪು ಮಡಕೆಯಲ್ಲಿ ನಿನ್ನ ಬೂದಿ ಹೊತ್ತು
ತೂರಾಡುತ್ತಾ ಹೊರಟಿದ್ದಾನೆ ಮನೆಯ ಕಡೆಗೆ.











ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)