ಟವರ್ ಆಫ್ ಪೀಟ್ಜಾ

"ಪೀಜಾ ಅಲ್ಲ ಕಣ್ರೀ ಪೀಟ್ಜಾ ಅನ್ನಬೇಕು" ಎಂದು ರಾಜಾರಾಂ ತಿದ್ದಿದರು. ಮರಿಗೌಡ ಅಂದು ಪೀಜಾ ತಿನ್ನಲು ಉತ್ಸುಕರಾಗಿದ್ದರು. 


"ಕೆಲವರು ಪಿಜ್ಜಾ ಅಂತಾರೆ. ಕೆಲವರು ಪೀಜಾ ಅಂತಾರೆ. ಅಲ್ಲಿ ಟೀ ಇಲ್ಲವೇ ಇಲ್ಲ. ಪೀಟ್ಜಾ ಹೇಗ್ರೀ ಆಗತ್ತೆ?" ಎಂದು ಮರಿಗೌಡ ವಾದಿಸಿದರು.


"ನೋಡಿ, ಪದದಲ್ಲಿ ಎರಡು ಜೆಡ್ ಪಕ್ಕಪಕ್ಕದಲ್ಲಿದ್ದಾಗ ಇಟಾಲಿಯನ್ ಜನ ಮೊದಲನೇ ಜೆಡ್ ಇದೆಯಲ್ಲ ಅದನ್ನ ಸ್ವಲ್ಪ ಟೀ ಥರಾ ಉಚ್ಚಾರಣೆ ಮಾಡ್ತಾರೆ. ಲವಾಟ್ಜಾ, ಪೀಟ್ಜಾ, ಮೋಟ್ಜರೆಲ್ಲಾ, ... ಗೊತ್ತಾಯ್ತಾ?"


"ಹೀಗೆ ಎರಡು ಜೆಡ್ ಇಡೋದು ಯಾಕೆ ... ಅದರಲ್ಲಿ ಒಂದನ್ನು ಟೀ ಥರಾ ಉಚ್ಚಾರಣೆ ಮಾಡೋದು ಯಾಕೆ ... ಮೂರು ಜೆಡ್ ಇದ್ದರೆ ಏನು ಮಾಡ್ತಿದ್ರು?"


*ಮೂರು ಜೆಡ್ ಇರೋ ಯಾವ ಪದವೂ ಇಲ್ಲ."


"ಇದೆ ಕಣ್ರೀ. ಜೆಡ್ ಜೆಡ್ ಜೆಡ್ ಅಂತ ಹಾಕಿರ್ತಾರೆ ಕೆಲವು ಕಡೆ. ಅದನ್ನು ಹೇಗೆ ಉಚ್ಚಾರಣೆ ಮಾಡ್ತಾರೋ ಪುಣ್ಯಾತ್ಮರು!"


"ರೀ! ಅದು ನಿದ್ದೆ ಹೋಗಿ ಗೊರಕೆ ಹೊಡೆಯೋ ಸದ್ದು ಕಣ್ರೀ. ಕಾಮಿಕ್ ಓದೋವಾಗ ಈ ಜೆಡ್ ಜೆಡ್ ಜೆಡ್ ಎಲ್ಲಾ ಓದಿರುತ್ತೀರಿ."


"ಹೂಂ. ನನಗೆ ಅದು ಗೊರಕೆ ಸದ್ದು ಅಂತ ಗೊತ್ತಾಗಲಿಲ್ಲ ನೋಡಿ. ನಾನು ಗೊರಕೆ ಹಾಕುವಾಗ ಗೊರ್ ಗೊರ್ ಅಂತ ಹಾಕ್ತೀನಿ ಅಂತ ನಮ್ಮ ಮಿಸೆಸ್ ಹೇಳ್ತಾರೆ."


"ಗೊರ್ ಇಂದಲೇ ಗೊರಕೆ ಬಂದಿರೋದು!" ಎಂದು ನಾನು ಮಧ್ಯ ಸೇರಿಸಿದೆ.


"ಕನ್ನಡದ ಜನ ಗೊರ್ ಅಂತಲೇ ಗೊರಕೆ ಹೊಡೀತಾರೆ. ಈಗೀಗ ಈ ಪೀಟ್ಜಾ ಎಲ್ಲಾ ತಿಂದು ಜೆಡ್ ಜೆಡ್ ಜೆಡ್ ಅಂತ ಗೊರಕೆ ಹೊಡೀತಾರೋ ಏನೋ ಗೊತ್ತಿಲ್ಲ."


ನಮ್ಮ ಪೀಟ್ಜಾ ಬಂತು. ಲಾರ್ಜ್ ಪೀಟ್ಜಾ ತಂದಿಟ್ಟ.ವೇಟರ್ ಅದನ್ನು ಹನ್ನೆರಡು ಭಾಗಗಳಲ್ಲಿ ಕತ್ತರಿಸಿದ. ಹೊಗೆ ಆಡುತ್ತಿದ್ದ ಪೀಟ್ಜಾ ಸ್ಲೈಸನ್ನು ಮರಿಗೌಡ ಬಹಳ ಆಸೆಯಿಂದ ಕೈಗೆತ್ತಿಕೊಂಡು ಉಫ್ ಉಫ್ ಎಂದು ಊದಿ ತಿಂದರು.


"ಲೀನಿಂಗ್ ಟವರ್ ಆಫ್ ಪೀಟ್ಜಾ ಅಂತಾರಲ್ಲ, ಅದೇನು? ಪೀಟ್ಜಾ ಟವರ್ ಅಂತ ಇದೆಯಾ? " ಎಂದು ಅವರು ಕೇಳಿದಾಗ ರಾಜಾರಾಂ ಅವರನ್ನು ವಿಚಿತ್ರವಾಗಿ ನೋಡಿದರು. ನಾನು ಲೆಮನ್ ಸೋಡಾ ಕುಡಿದು ಸುಧಾರಿಸಿಕೊಂಡೆ.


"ರೀ! ಅದು ಲೀನಿಂಗ್ ಟವರ್ ಆಫ್ ಪೀಸಾ ಕಣ್ರೀ. ಪೀ ಐ ಎಸ್ ಏ, ಪೀಸಾ. ಇಟಲಿಯಲ್ಲಿ ಅಂಥದ್ದೊಂದು ಸ್ಥಳ ಇದೆ."


"ಓಹೋ. ನಾನೇನೋ ಒಂದರ ಮೇಲೊಂದು ಪೀಟ್ಜಾ ಪೇರಿಸಿ ಅದರ  ಟವರ್ ಮಾಡಿರಬಹುದು ಅಂದುಕೊಂಡಿದ್ದೆ!"


"ನಮ್ಮಮ್ಮ ದೋಸೆ ಮಾಡೋವಾಗ ಹಾಗೆ ಒಂದರ ಮೇಲೆ ಒಂದು ಹಾಕ್ತಾ ಟವರ್ ಮಾಡೋರು. ಅದಕ್ಕೆ ಲೀನಿಂಗ್ ಟವರ್ ಆಫ್ ದೋಸಾ ಅಂತ ಕರೆಯಬಹುದಾಗಿತ್ತು ಅಂತ ಈಗ ಹೊಳೀತಿದೆ" ಎಂದು ನಾನು ಪೇಚಾಡಿದೆ.


"ಲೀನಿಂಗ್ ಅಂದರೆ ಮೀನಿಂಗ್ ಏನು? ವಾಲಿಕೊಂಡಿರೋದು ಅಂತ ತಾನೇ?"


"ಹೂಂ. ಗೋಪುರ ಕಟ್ಟಿದಾಗ ಕಟ್ಟಡದ ಎಲ್ಲಾ ಭಾಗಗಳೂ ಒಂದೇ ಮಟ್ಟದಲ್ಲಿ ಮಣ್ಣಿನಲ್ಲಿ ಹೂತುಕೊಂಡರೆ ಏನೂ ತೊಂದರೆ ಇರ್ತಿರಲಿಲ್ಲ. ಒಂದೊಂದು ಭಾಗ ಹೆಚ್ಚು ಇನ್ನೊಂದು ಭಾಗ ಕಡಿಮೆ ಹೂತುಕೊಂಡಾಗ ಕಟ್ಟಡ ವಾಲಿಕೊಳ್ಳುತ್ತೆ. ತೀರಾ ವಾಲಿಕೊಂಡರೆ ಬಿದ್ದೇ ಹೋಗುತ್ತೆ ಅಂತ ಅದನ್ನು ರಿಪೇರಿ ಕೂಡಾ ಮಾಡಿದರಂತೆ."


"ಅಲ್ಲಿ ಒಂದು ಕಟ್ಟಡ ಲೀನ್ ಆದರೂ ಅದೊಂದು ಕೌತುಕ ಕಣ್ರೀ.  ನಮ್ಮಲ್ಲಿ ಇಲ್ಲವೇನ್ರೀ ಬಾಗಿರೋ ಕಟ್ಟಡಗಳು? ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಅನ್ನೋ ಹಾಡು ಕೇಳಿಲ್ಲವೇ? ಅದೂ ಕೂಡಾ ಬಾಗೇಶ್ರೀ ರಾಗದಲ್ಲೇ ಇದೆ. ಬಾಗಿಲನು ತೆರೆದು ಅಂದರೆ ಬಾಗಿರೋ ಬೆಂಡ್ ಸರಿ ಮಾಡು ಅಂತ ಕೂಡಾ ಅರ್ಥ ಇರಬಹುದು." ಎಂದು ಮರಿಗೌಡ ತಮ್ಮ  ಕಲ್ಪನೆಯ ಬಾಗಿಲು ತೆರೆದರು.


"ಇರಬಹುದು ಇರಬಹುದು! ಬಾಗಿಲು ಅನ್ನೋ ಪದ ಬಂದಿರೋದೆ ಬಾಗು ಎಂಬ ಕ್ರಿಯಾಪದದಿಂದ ಅಂತ ನನ್ನ ಅನುಮಾನ. ಎಲ್ಲಿ ಬಾಗುತ್ತೇವೋ ಅದೇ ಬಾಗಿಲು." ಎಂದು ನಾನು ಅವರ ಉತ್ಸಾಹದಲ್ಲಿ ಶಾಮೀಲಾದೆ.


"ನೋಡಿ, ನಮ್ಮಲ್ಲಿ ಜನ ಬಾಗುತ್ತಿದ್ದರು ಕಣ್ರೀ. ಅಲ್ಲಿಯ ಜನ ಟವರನ್ನೇ ಬಾಗಿಸುತ್ತಿದ್ದರು." ಎಂದು ಮರಿಗೌಡ ತಾತ್ವಿಕರಂತೆ ನುಡಿದರು.


"ಯಾಕ್ರೀ, ನಮ್ಮ ಜನ ಕೂಡಾ ಗಿಡಗಳನ್ನು ಮರಗಳನ್ನು ಬಗ್ಗಿಸಿಯೇ ಕಾಯಿ ಕೀಳ್ತಿದ್ದರು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಅಂತ ಗಾದೆ ಕೇಳಿಲ್ಲವಾ? ಗಿಡ ಯಾಕೆ ಬಾಗಬೇಕು ಹೇಳಿ? ಜನರಿಗೆ ಕಾಯಿ ಕೀಳೋದಕ್ಕೆ ಅನುಕೂಲ ಆಗಬೇಕು, ಅಷ್ಟೇ ಉದ್ದೇಶ. ಕೆಲವರು ಮರವಾದ ಮೇಲೆ ಬಗ್ಗಲಿ ಅಂತ ಗಿಡವನ್ನು ಬಗ್ಗಿಸಿ ಬಗ್ಗಿಸಿ ಮರ ಪಾಪ ಅಡ್ಡಡ್ಡ ಬೆಳೆದಿರುವುದು ಕೂಡಾ ಉಂಟು!" ನಾನು ಅವರ ತಟ್ಟೆಗೆ ಮತ್ತೊಂದು ಸ್ಲೈಸ್ ಪೀಟ್ಜಾ ಬಡಿಸುತ್ತಾ ಹೇಳಿದೆ.


ಇದುವರೆಗೂ ಸುಮ್ಮನಿದ್ದ ರಾಜಾರಾಂ "ರೀ! ಸಾಕು! ಸಾಕು! ಲೀನಿಂಗ್ ಟವರ್ ಆಫ್ ಪೀಸಾ ಮಾತಾಡ್ತಾ ಲೀನಿಂಗ್ ಟವರ್ ಹಾಪ್ ಪೀಟ್ಸಾ ಖಾಲಿ ಮಾಡಿದ್ದೇವೆ. ಉಳಿದದ್ದನ್ನು ಪ್ಯಾಕ್ ಮಾಡಿಸಿ. ಏನಾದರೂ ಡೆಸರ್ಟ್ ಇದೆಯಾ ನೋಡೋಣ!" ಎಂದರು.


"ಐ ಆಮ್ ಲೀನಿಂಗ್ ಟುವರ್ಡ್ಸ್ ಟಿರಾಮಿಸೂ" ಎಂದು ನಾನು ಮೆನುವಿನ ಕಡೆ ಲೀನಿದೆ.  


ಕಾಮೆಂಟ್‌ಗಳು

  1. ಹರಟೆಯ ಪ್ರಾಕಾರದಲ್ಲಿ ಪಿಜ್ಜಾ ಲೇಖನ ಓದಿಸಿಕೊಂಡು ಹೋಗುತ್ತದೆ. ತ್ರಿಬಲ್ ಜೆಡ್ ಹಾಗೂ ಲೀನಿಂಗ್ ವ್ಯಾಖ್ಯಾನ ಚೆನ್ನಾಗಿದೆ. ಕಟ್ಟಿದ ಭಾಗಗಳು ಮಣ್ಣಿನಲ್ಲಿ. ಒಂದೊಂದು ಕಡೆ ಹೆಚ್ಚು ಇನ್ನೊಂದು ಕಡೆ ಕಡಿಮೆ ಹೂತುಕೊಂಡಾಗ ಕಟ್ಟಡ ವಾಲಿಕೊಳ್ಳುತ್ತದೆ ಎಂಬ ವಾಕ್ಯ ಸೊಗಸಾಗಿದೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)