ಹನಿಗವನ!


ಡ್ರೈ ಹೋಳಿ 

ಡ್ರೈ ಹೋಳಿ-
ಗೆ
ಹೋಗುವಾಗ
ಮರೆಯದೇ ಜತೆಗಿರಲಪ್ಪ
ಹಾಲು ಪ್ಲಸ್ ತುಪ್ಪ

ಸಾವಯವ 

ಹೈಸ್ಕೂಲಿನಲ್ಲಿ
ಆರ್ಗಾನಿಕ್ ಕೆಮಿಸ್ಟ್ರಿ
ಈಥೇನು, ಬ್ಯೂಟೇನು, ಹೆಕ್ಸೇನು
ಬದಲಾಗಿ
ಆರ್ಗಾನಿಕ್ ಫಾರ್ಮಿಂಗ್
ಹೇಳಿಕೊಟ್ಟಿದ್ರೆ
ಏನಾದರೂ ಬೆಳಕೊಂಡು ತಿಂದೇನು

ಮೀಡಿಯಾ 

ಮೀಡಿಯಾ ಈನಡುವೆ ಹಾಗೇ ಎಲ್ಲೆಲ್ಲೂ
ಡುಹಿಡಿಯುತ್ತದೆ ಗುಣ ಚಿಕ್ಕ ಕ್ರಿಮಿ-ನಲ್ಲೂ
ಕಣ್ ಮುಚ್ಚಿಕೊಳ್ಳುತ್ತದೆ ಕಂಡಾಗ ದೊಡ್ಡ ಕ್ರಿಮಿನಲ್ಲು

ಅಚ್ಚಬಿಳಿ 

ಅಚ್ಚ ಬಿಳಿ ಬಟ್ಟೆ ಧರಿಸಿ ಬಂದರೇನು ಸಭೆಗೆ!
ಸ್ವಚ್ಛವಾಗಿಬಿಡುವುದೇ ನಿಮ್ಮ ಕೊಳಕು ನಡಿಗೆ?
ಕೊಚ್ಚೆ ಬಿದ್ದಿದೆ ಮನದ ಮೇಲೆ! ಒರೆಸಿಕೊಳ್ಳಿ ಬೇಗ
ತುಚ್ಛ ಯೋಚನೆ ಮನದಿಂದ ಮಾಡಿಬಿಡಿ ತ್ಯಾಗ

ಗ್ಯಾರಂಟಿ 

ಏನು ಬೇಕಾದರೂ ಬರೆದುಕೊಳ್ಳಿ ಇತಿಹಾಸ
ತುಂಬಿ ಬೆಳೆವ ಎಳೆಯ ಬುದ್ಧಿಯೊಳು ಬೂಸಾ
ಇಷ್ಟೆಲ್ಲ ಆದರೂ ಉಳಿಸಿಕೊಂಡಿದ್ದರೆ ಸ್ಯಾನಿಟಿ
ಮುಂದೆ ಕಳೆದುಕೊಳ್ಳುತ್ತೀಯ ಕೊಡುವೆ ಗ್ಯಾರಂಟಿ

ವಿಪರೀತಮತಿ  


ಬುದ್ಧಿಜೀವಿ ಎಂಬ ಪದವು ಸರಿಯಿಲ್ಲ, ನಾವೇನು
ಪೆದ್ದು ಜೀವಿಗಳೇ ಎಂದು ಮಿತ್ರರೊಬ್ಬರ ವಾದ |
ಇದ್ದ ಬುದ್ಧಿಯನೆಲ್ಲ ಡ್ಯಾಮೇಜಿಗೇ ಬಳಸುವನ ವಿಪರೀತ-
ಬುದ್ಧಿಜೀವಿ ಎನಬಹುದೇ ಮಂಕುತಮ್ಮ ||

ಆರಕ್ಷಣೆ 

ದಿನದಿನವೂ ತಿರುತಿರುಗಿ ಹಾಡಿ ದೇವರನಾಮ
ಅನುದಿನಕ್ಕೆ ಸಂಗ್ರಹಿಸಿ ಒಪ್ಪೊತ್ತಿನ ಭಿಕ್ಷಾನ್ನ |
ಹಣವೆಲ್ಲ ದಾನ ಮಾಡಿದ ದಾಸರು ನಂಬಿದ್ದರು ಶ್ರೀ
ಕೃಷ್ಣನ "ಆರಕ್ಷಣೆ"ಯಲ್ಲಿ ಮಂಕುತಮ್ಮ ||

ಬಿತ್ತಿದ್ದು 

ಬಿತ್ತಿದ್ದೇ ಅಲ್ಲವೇ ಬೆಳೆಯುವುದು ನೆಲದಲ್ಲಿ?
ನಿತ್ಯ ಟಿ.ವಿ.ಯಲ್ಲಿ ಮನೆಮುರುಕುತನವನ್ನೇ |
ಪಟ್ಟಾಗಿ ನೋಡುತ್ತ ಜನಮನಗಣದಲ್ಲಿ
ಹುಟ್ಟದೇ ವೈರತ್ವ ಮಂಕುತಮ್ಮ? ||

ವಾಚ್ 

ಹೊಟ್ಟೆಗಿರಲಿ ಸೊಪ್ಪಿನ ಸಾರು ರಾಗಿಮುದ್ದೆ
ಬಟ್ಟೆಗಿರಲಿ ಗಟ್ಟಿ ಖಾದಿ ಬಿಳಿಧೋ‍ತ್ರ |
ದಿಟ್ಟಿಗಿರಲಿ ತಂಪುಕನ್ನಡಕ ಯೂರೋಪಿನದು
ಕ‍ಟ್ಟು ಬ್ರಾಂಡೆಡ್ ವಾಚು ಮಂಕುತಮ್ಮ ||

ಅಕಬರ ಅಲಿ ಅವರಿಗೆ 

ಚುಟುಕಾಗಿ ಮಾತಾಡುವುದು ನಮ್ಮ ಗುಣವಲ್ಲ
ಗಂಟೆಗಟ್ಟಲೆ ಭಾಷಣ ಬಿಗಿವವರೆ ಎಲ್ಲ
ಚುಟುಕಿನ ಗುಟುಕಿನಲ್ಲಿದೆ ಕುಟುಕೆನ್ನುವವುದನ್ನ
ಬಿತ್ತರಿಸಿದ ಅಲಿ ಅವರಿಗಿದೋ ಚುಟುಕು ನಮನ

ಸಂಘರ್ಷ 

ಸೊಸೆಗೆ ಅತ್ತೆಯ ಜೊತೆಗೆ ನಿತ್ಯ ಸಂಘರ್ಷ
ನನಗಿಲ್ಲದ ಅಧಿಕಾರ ಇವಳಿಗೇಕೆಂಬ ರೋಷ
ಕಳ್ಳರಿಗೆ ಬಾಗಿಲು ತೆರೆದು ಕೋರಿದಳು ಸ್ವಾಗತ
ಹೀಗೇ ನಡೆಯುತ್ತಿದೆ ಬಹುಕಾಲದಿಂದಲೂ ಭಾರತ

ಸ್ವಚ್ಛನಗರಿ 

‍ಮೈಸೂರಿಗೆ ದೊರೆತಿಹುದಹಾ ಮಲ್ಲಿಗೆಯ ಗುಚ್ಛ!
ಎಲ್ಲಿ ನೋಡಿದರಲ್ಲಿ ಸ್ಚಚ್ಛವೋ ಸ್ವಚ್ಛ
ಬೆಂಗ್ಳೂರಿಗೆ ಅಯ್ಯೋ ಮೂವತ್ತೆಂಟನೇ ಸ್ಥಾನ
ಸುಟ್ಟ ಹೊಗೆ ನಮಗೆ ಸಮಾಧಾನಕರ ಬಹುಮಾನ

ಎಕ್ಸ್ಪೋಸ್ 

ಎಷ್ಟು ಎಕ್ಸ್ಪೋ‍ಸ್ ಮಾಡುತ್ತೀರಪ್ಪಾ
ಮೀಡಿ‍ಯಾ ಪ್ರಭುಗಳನ್ನ
ಸುದ್ದಿಯಲ್ಲೇ ಇರುವ
ಬುದ್ಧಿಜೀವಿಗಳನ್ನ?
ನೋಡಿ ಅವರ ಕಡೆ -
ಎಕ್ಸ್ಪೋಸ್ ಮಾಡಲು ಸಾಧ್ಯವೇ ಇಲ್ಲ
ಅವರು ಏನೂ ತೊಟ್ಟೇ ಇಲ್ಲ

ಈ-ಚೆನ್ನಸೋಮೇಶ್ವರಾ

ಕೆಲವಂ ಕನ್ನಡದಲ್ಲಿ ಕಲಿತು, ಕೆಲವಂ ಕನ್ನಡ ಫೇಸ್ಬುಕ್ಕಿನಿಂದೋದುತಂ
ಕೆಲವಂ ಕನ್ನಡ ಪತ್ರಿಕಾ-ಪುಸ್ತಕದಿಂದಲರಿದು, ಕೆಲವಂ ಕನ್ನಡ ಸಿನಿ-ನಾಟಕಂಗಳಂ ನೋಡುತಂ
ಕೆಲವಂ ಕನ್ನಡ ಟೈಪಿಂಗ್ ಮಾಡುತಂ, ಕೆಲವಂ ಕನ್ನಡದೋಳ್ ಮಾತಾಡುತಂ
ಕಲಿತು ಕನ್ನಡದ "ಕಲಿ"ಯಾಗು, ಹರಹರಾ ಈ-ಚೆನ್ನ ಸೋಮೇಶ್ವರಾ!!









Add caption
































ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)