ಒಂದು ಬಿನ್ ಅಹ! ಹುಲಿಯೇ ಕೇಳು

 


"ನನ್ನ ಫ್ರೆಂಡ್ ಒಬ್ಬರು ಯೂರೋಪಿಗೆ ಹೋಗಿ ಅಲ್ಲಿರೋ ಡಸ್ಟ್  ಬಿನ್ ಪಿಕ್ಚರ್ ಕಳಿಸಿದ್ದಾರೆ. ಅಬ್ಬಬ್ಬ ಏನ್ರೀ ಅವರು ಬಹಳ ನೋವೇಶನ್ ಕಣ್ರೀ" ಎಂದು ಮರಿಗೌಡ ತಮ್ಮ ಸ್ಟ್ರಾಂಗ್ ಕಾಫಿ ಹೀರಿ ಆನಂದದಿಂದ ಕಣ್ಣು ಮುಚ್ಚಿದರು.


"ನೋವೇ ಅಲ್ರೀ. ಇನ್ನೋವೇಶನ್!" ಎಂದು ರಾಜಾರಾಂ ಗ್ರೀನ್ ಟೀ ಕುಡಿಯುವುದನ್ನು ನಿಲ್ಲಿಸಿ ಹೇಳಿದಾಗ 859838 ಧ್ವನಿಯಲ್ಲಿ ನೋವೇ ಹೆಚ್ಚು ಕೇಳಿಸಿತು.


"ಓಹೋ ಹೌದಾ! ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ನಾರ್ತ್ ಇಂಡಿಯನ್ ಇದಾನೆ. ರಜತ್ ಕುಮಾರ್ ಅಗ್ಗರ್ವಾಲ್. ಅವನು ಇಸ್ಕೂಲ್, ಇಸ್ತ್ರೀ, ಇಸ್ಟ್ರೀಟ್ ಅಂತ ಎಲ್ಲಾದಕ್ಕೂ ಈ ಹಾಕೋದು ಜಾಸ್ತಿ. ಅವನು ಮೊನ್ನೆ  ಇನ್ನೋವೇಶನ್ ಅಂತ ಏನೋ ಹೇಳಿದಾಗ ಅದು ನೋವೇಶನ್ ಇರಬಹುದು ಅಂತ ಡಿಸೈಡ್ ಮಾಡಿದೆ."


"ನೋ ವೇ!" ಎಂದು ರಾಜಾರಾಂ ಇಂಗ್ಲೀಷಿನಲ್ಲಿ ಹೇಳಿದರು. 


“ಏನ್ರೀ ಈಗ ತಾನೇ ನೀವು ಇನ್ನೋವೇಶನ್ ಅಂತ ಹೇಳಿದಿರಿ?” ಎಂದು ಮರಿಗೌಡ  ಗೊಂದಲಕ್ಕೆ ಒಳಗಾದರು.


“ನೀವು ಅವರನ್ನು ಬಿಡಿ. ಏನೋ ಡಸ್ಟ್ ಬಿನ್ ಅಂದಿರಿ? ಏನದು ವಿಶೇಷ?” ಎಂದು ನಾನು ಮಧ್ಯೆ ಪ್ರವೇಶಿಸಿದೆ.


“ಓಹ್, ಏನು ಅದ್ಭುತ ಕಣ್ರೀ! ಡಸ್ಟ್ ಬಿನ್ನಲ್ಲಿ ಏಐ ಹಾಕಿದ್ದಾರೆ!”


“ಅಯ್ಯೋ, ಏಐನ ಯಾಕ್ರೀ ಡಸ್ಟ್ ಬಿನ್ನಿಗೆ ಹಾಕಿದರು? ಎಲ್ಲರೂ ಏಐ ಹಾಗೆ ಏಐ ಹೀಗೆ ಅಂತ ತುಂಬಾ ಅಟ್ಟಕ್ಕೆ ಏರಿಸಿದರೆ ಇವರು ಅದನ್ನು ಡಸ್ಟ್ ಬಿನ್ನಿಗೆ ಹಾಕೋದೇ!” ಎಂದು ನಾನು ಪೇಚಾಡಿದೆ.


“ಅಯ್ಯೋ ನೀವೊಬ್ಬರು! ಏಐ ಕಸದ ಬುಟ್ಟಿಗೆ ಅಳವಡಿಸಿದಾರೆ ಕಣ್ರೀ. ಅದು ಸ್ಮಾರ್ಟ್ ಬಿನ್ ಅಂತೆ.”


“ಓಹೋ! ಸ್ಮಾರ್ಟ್ ಟಿವಿ, ಸ್ಮಾರ್ಟ್ ಫ್ರಿಜ್ ಎಲ್ಲಾ ಆಯಿತು. ಈಗ ಕಸದ ಬುಟ್ಟಿ ಸರದಿ ಬಂತು ಅನ್ನಿ!”


“ಅವರು ಒಂದು ರೆಸ್ಟೋರೆಂಟಿಗೆ ಹೋಗಿದ್ದರಂತೆ ಕಣ್ರೀ. ಕಾಫಿ ಕುಡಿಯೋಕೆ ಲೋಟ ಕೊಡ್ತಾರೆ ನೋಡಿ, ಅದನ್ನ ಕಸದ ಬುಟ್ಟಿಗೆ ಹಾಕಿದರೆ ಹಣ ಕೊಡುತ್ತಂತೆ.”


“ಭಲೇ ಭಲೇ! ನಮ್ಮ ರಸ್ತೆ ಎಲ್ಲಾ ಗುಡಿಸಿ ಅಲ್ಲಿ ಬಿದ್ದಿರೋ ರಾಶಿ ರಾಶಿ ಪೇಪರ್ ಕಪ್ಪು, ಪೇಪರ್ ಪ್ಲೇಟ್ಸ್ ಇದೆಲ್ಲಾ ತೊಗೊಂಡು ಹೋಗಿ ಎಸೆಯೋಣ ಅಂದರೆ ಇಲ್ಲಿ ಯಾವ ಸ್ಮಾರ್ಟ್ ಬಿನ್ನೂ ಇಲ್ಲವೇ?!” ಎಂದು ರಾಜಾರಾಂ ಲೊಚಗುಟ್ಟಿದರು.


“ಅಯ್ಯೋ, ಇಲ್ಲೆಲ್ಲ ಅಂಥದ್ದು ಬರೋದಕ್ಕೆ ಇನ್ನೂ ಟೈಮ್ ಬೇಕು ಕಣ್ರೀ. ನಮ್ಮ ಜನ ಗಂಗೆಯಲ್ಲೇ ಕಸ ಹಾಕ್ತಾರೆ. ರಾಮ್ ತೇರಿ ಗಂಗಾ ಮೈಲೀ ಅಂತ ರಾಜ್ ಕುಮಾರ್ ಒಂದು ಸಿನಿಮಾ ಮಾಡಲಿಲ್ಲವಾ?”


“ಬಿಡ್ತು ಅನ್ನಿ. ಅದು ರಾಜ್ ಕಪೂರ್ ಕಣ್ರೀ. ನಮ್ಮ ರಾಜ್ ಕುಮಾರ್ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಸಿನಿಮಾ ಮಾಡಲಿಲ್ಲ.”


“ಸರೀನಪ್ಪ! ನೀವಂತೂ ಕಾದಿರುತ್ತೀರಾ ನಾನು ಮಿಸ್ಟೇಕ್ ಮಾಡಲಿ ಅಂತ! ಈಗ ನಾನು ಹೇಳ್ತಾ ಇರೋದು ನಮ್ಮ ಜನ ಎಷ್ಟು ಬೇಜವಾಬ್ದಾರಿ ಅಂತ. ನೀವು ರಾಜ್ ಕಪೂರ್ ರಾಜ್ ಕುಮಾರ್ ಅಂತ ಏನೋ ಕೂದಲು ಸೀಳೋ ಕೆಲಸ ಮಾಡ್ತಾ ಕೂತಿರಿ!”


“ಸಾರಿ, ಮುಂದುವರೆಸಿ. ನಾನು ಬಾಯ್ ಬಿಟ್ರೆ ಕೇಳಿ!”


“ಯಾಕೆ ಹೇಳ್ತೀರಿ ಬಾಯ್ ಬಿಡೋ ವಿಷಯ! ಸ್ವಾರಸ್ಯ ಕೇಳಿ. ಈ ಡಸ್ಟ್ ಬಿನ್ ಮೇಲೆ ಮುಚ್ಚಳ ಹಾಕಿ ಮುಚ್ಚಿ ಬಿಟ್ಟಿರುತ್ತಾರೆ ಕಣ್ರೀ. ಅದು ಬಾಯಿ ಬಿಡೋದು ಯಾವಾಗ ಗೊತ್ತಾ?”


“...” ನಾನು ನನ್ನ ಬಾಯಿ ತೆಗೆಯಲಾರೆ ಎಂದು ಕೈಸನ್ನೆಯಿಂದ ಸೂಚಿಸಿದೆ.


“ಪೇಪರ್ ಕಪ್ ಮೇಲೆ   ಕ್ಯೂ ಆರ್ ಕೋಡ್ ಇರುತ್ತಂತೆ. ಅದು ತೋರಿಸಿದರೆ ಮಾತ್ರ ಬಾಯಿ ತೆಗೆಯುತ್ತಂತೆ. ಆಗ ಲಪಕ್ ಅಂತ ಕಪ್ ಒಳಗೆ ಹಾಕಿಬಿಡಬೇಕು. ತಕ್ಷಣ ಠಣ್ ಅಂತ ಒಂದು ಚಿಲ್ಲರೆ ಕಾಯಿನ್ ಬಂದು ಬಿಡುತ್ತಂತೆ.”


“...”  ನಾನು ಕೈ ಮತ್ತು ಕಣ್ ಸನ್ನೆಯಲ್ಲೇ ವಾವ್ ಕಾಮೆಂಟ್ ಮಾಡಿ  ಲೈಕ್ ಕೂಡಾ ಹಾಕಿದೆ.


“ನೀವು ಬಾಯಿ ಬಿಡಬಹುದು” ಎಂದು ರಾಜಾರಾಂ ಆಜ್ಞೆ ಮಾಡಿದರು.


“ನಾನು ಬಾಯಿ ಬಿಟ್ಟರೆ ಅವರು ಲಪಕ್ ಅಂತ ಏನಾದರೂ ಒಳಗೆ ಹಾಕಿಬಿಟ್ಟರೆ ಏನು ಗತಿ!” ಎಂದು ನಾನು ತಟ್ಟೆಯಲ್ಲಿ ಉಳಿದಿದ್ದ ಕೊನೆಯ ಪೀಸ್ ಮೈಸೂರು ಪಾಕನ್ನು ಲಪಕ್ ಎಂದು ಬಾಯಿಗೆ ಎಸೆದುಕೊಂಡೆ.


“ನೋಡ್ರಿ ಇದು ಕಣ್ರೀ ಇನೋವೇಶನ್ ಅಂದರೆ! ಕಪ್ ಎಸೆದಿದ್ದಕ್ಕೆ ದುಡ್ಡು ಕೊಟ್ಟರೆ ಯಾರ್ರೀ ಅದನ್ನು ಬೀದಿಗೆ ಎಸೆದು ಹೋಗ್ತಾರೆ?”


“ಮೋದಿ ಇನ್ನೊಂದು ಸಲ ಸ್ವಚ್ಛತಾ ಅಭಿಯಾನ್ ಮಾಡಿದರೆ ಅದನ್ನ .ಬೇರೆ ರೀತಿ ಮಾಡಬೇಕು. ಎಲ್ಲಾ ಕಡೆ ಒಂದೊಂದು ಹಣ ಕೊಡುವ ಸ್ಮಾರ್ಟ್ ಬಿನ್ ಹಾಕಿಸಬೇಕು. ಆಗ ನೋಡಿ ಎಲ್ಲಾ ಬೀದಿಗಳೂ ಹೇಗೆ ಲಕಲಕ ಅಂತ ಹೊಳೆಯುತ್ತವೆ!” 


“ಅಲ್ರೀ, ನನಗೊಂದು ಡೌಟು …” ಎಂದು ರಾಜಾರಾಂ ಬಾಯಿ ಬಿಟ್ಟರು.


“ಹೂಂ ಹೇಳಿ. ನಿಮಗೆ ಯಾವಾಗಲೂ ಡೌಟೇ …” ಎಂದು ಮರಿಗೌಡ Dove Tail ಮಾಡಿದರು.


“ಅಲ್ಲ, ಯಾರಾದರೂ ಆ ಕ್ಯೂಆರ್ ಕೋಡ್ ಜೆರಾಕ್ಸ್ ಮಾಡಿಕೊಂಡು ಅದನ್ನು ತೋರಿಸಿ ಹಣ ಮಾಡಿಕೊಳ್ಳಬಹುದಾ?”


“ನಿಮ್ಮದು ಇಂಥಾ ಚಿಲ್ಲರೆ ಬುದ್ಧಿನೇ, ಬಿಡಿ! ಚಿಲ್ಲರೆ ಹಣ ತೊಗೋಳೋಕೆ ಯಾಕ್ರೀ ಯಾರಾದರೂ ಇಂಥಾ ಚಿಲ್ರೆ ಬುದ್ಧಿ ಮಾಡ್ತಾರೆ!?”


“ಅಲ್ರೀ, ಅವರು ಹೇಳೋದ್ರಲ್ಲಿ ಪಾಯಿಂಟ್ ಇದೆ ಕಣ್ರೀ” ಎಂದು ನಾನು ನಡುವೆ ಮಾತಾಡಿದೆ. “ಒಂದು ರೂಪಾಯಿ ಕೊಟ್ಟು ಜೆರಾಕ್ಸ್ ಮಾಡಿಸಿ ಇಟ್ಟುಕೊಂಡು ಅದನ್ನ ತೋರಿಸಿ ನೂರಾರು ರೂಪಾಯಿ ಮಾಡಿಕೊಂಡರೆ?  ನನಗೆ ಇನ್ನೊಂದು ಡೌಟ್ ಬಂದಿದೆ. ನೋಡಿ ಇಂಥಾ ಸ್ಮಾರ್ಟ್ ಬಿನ್ ಎಲ್ ಎನ್ ಅಯ್ಯಂಗಾರ್ ಬೇಕರಿ ಮುಂದೆ ಹಾಕ್ತಾರೆ ಅಂದುಕೊಳ್ಳಿ. ಬೇರೆ ಎಲ್ಲೋ ಕಾಫಿ ತೊಗೊಂಡು ಇವರ ಅಂಗಡಿ ಮುಂದೆ ಇರೋ ಸ್ಮಾರ್ಟ್ ಬಿನ್ ಒಳಗೆ ಹಾಕಿದರೆ ಇವರಿಗೆ ಲಾಸ್ ಆಗಲ್ವಾ?”


“ಪ್ರತಿಯೊಂದು ಅಂಗಡಿಗೂ ಬೇರೆ ಸ್ಮಾರ್ಟ್ ಬಿನ್ನು, ಬೇರೆ ಕ್ಯೂ ಆರ್ ಕೋಡ್ ಬೇಕು ಕಣ್ರೀ! ಅವರು ಕಾಫಿ ಕೊಡೋ ಲೋಟದ ಮೇಲೆ ಕ್ಯೂ ಆರ್ ಕೋಡ್ ಪ್ರಿಂಟ್ ಮಾಡಿರ್ತಾರೆ!”


“ಇದೆಲ್ಲಾ ಯಾಕ್ರೀ ಮಾಡಬೇಕು ಬೇಕರಿಯವರು? ಇಟ್ ಈಸ್ ಟೂ ಮಚ್.” ಎಂದು ರಾಜಾರಾಂ ಮಂಗಳ ಹಾಡಿದರು.


“ನೋಡಿ, ಅರ್ಧಂಬರ್ಧ ತಿಳಕೊಂಡು ಮಾತಾಡ್ತೀರಿ. ನೋಡ್ರಿ, ಎಂದು ಟೀಗೆ ಐದು ರೂಪಾಯಿ ಅಂತ ಇಟ್ಟುಕೊಳ್ಳಿ. ಬೇಕರಿಯವರು ಆರು ರೂಪಾಯಿ ತೊಗೊಂಡು ಕಪ್ ಕೊಡ್ತಾರೆ. ಕಪ್ ತೊಗೊಂಡು ಹೋಗಿ ಸ್ಮಾರ್ಟ್ ಬಿನ್ನಿಗೆ ಹಾಕಿದರೆ ಒಂದು ರೂಪಾಯಿ ವಾಪಸ್. ಇಲ್ಲದೇ ಇದ್ರೆ ಬೇಕರಿ ಅವರಿಗೆ ಲಾಭ!”


“ಅಯ್ಯಯ್ಯೋ! ಫಜೀತಿ.”


“ಯಾಕ್ರೀ!”


“ಬೇಕರಿಯವರು ಸ್ಮಾರ್ಟ್ ಬಿನ್ ಬಾಯೇ ಬಿಡದ ಹಾಗೆ ಮಾಡಿಬಿಡುತ್ತಾರೆ. ಸಾರಿ ಸಾರ್, ಬಿನ್ ಕೆಟ್ಟು ಹೋಗಿದೆ ಅಂತಾರೆ. ಆಗ ಜನ ಏನು ಮಾಡ್ತಾರೆ? ರಸ್ತೆ ಮೇಲೆ ಎಸೆದು ಹೋಗ್ತಾರೆ.”


ಮರಿಗೌಡ ಸುಸ್ತಾದರು. “ನಿಮ್ಮಿಬ್ಬರ ಜೊತೆ ಮಾತಾಡಿ ಪ್ರಯೋಜನ ಇಲ್ಲ ಕಣ್ರೀ. ಏನೋ ಟೀ ಕುಡಿಯೋವಾಗ ಚಾಯ್ ಪೇ ಚರ್ಚಾ ಮಾಡೋಣ ಅಂತ ಹೇಳಿದೆನಪ್ಪ. ನೀವು ಏನೇ ಹೇಳಿದರೂ ಐಡಿಯಾ ಕಸದ ಬುಟ್ಟಿಗೆ ಹಾಕಿಬಿಡ್ತೀರಿ!”


“ನೋಡಿ, ಹಿಂದೆ ಸಂಪಾದಕರು ಲೇಖಕರು ಕಳಿಸೋ ಕಥೆ ಕವನ ಇವನ್ನೆಲ್ಲ ಡಸ್ಟ್ ಬಿನ್ನಿಗೆ ಹಾಕೋರಂತೆ. ಸಂಪಾದಕರ ಮೇಜಿನ ಕೆಳಗೆ ಒಂದು ಡಸ್ಟ್ ಬಿನ್ ತೋರಿಸಿ ಅದರ ಮೇಲೆ ಕ.ಬು. ಅಂತ ಬರೆದಿರೋ ಕಾರ್ಟೂನ್ ಬರ್ತಿದ್ದವು.”


“ನೋಡಿ, ಬೇಕಾದರೆ ಸಂಪಾದಕರು ಈಗ ಸ್ಮಾರ್ಟ್ ಕಸದ ಬುಟ್ಟಿ ಉಪಯೋಗಿಸಬಹುದು.  ಲೇಖಕರು ಯಾರು ಅಂತ ನೋಡಿಕೊಂಡು  ಕಸದ ಬುಟ್ಟಿ ತಾನಾಗಿ ಕಚಡಾ ಕಥೆ ಕವನಗಳನ್ನು ನುಂಗಿಬಿಡುತ್ತೆ. ಹೇಗಿದೆ ಐಡಿಯಾ?”


“ನಿಮ್ಮ ತಲೆಯಲ್ಲಿ ಏಐ ಜೋಡಿಸಿದ ಮೇಲೆ ನಿಮಗೆ ಐಡಿಯಾಗಳು ಬೇಕಾದಷ್ಟು ಬರುತ್ತಿವೆ ಕಣ್ರೀ!”.


ಅಷ್ಟರಲ್ಲಿ ಭಯ್ಯಾ ಬಂದು ನಮ್ಮ ಬಿಲ್ ತಂದುಕೊಟ್ಟ.


“ಇವತ್ತಿನ ಚಾಯ್ ಪೇ ಖರ್ಚಾ ಯಾರದು?” ಎಂದು ಮರಿಗೌಡ ಕೇಳಿದರು.


“ನಿಮ್ಮದು!” ಎಂದು ನಾನು ಮತ್ತು ರಾಜಾರಾಂ ಒಟ್ಟಿಗೆ ಹೇಳಿದೆವು.









ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)