ಬೊಂಬೆಯ ಸ್ನಾನ


ತಮ್ಮಾ ತಾರೋ ನೀರು, ಒಂದು ಕೊಡಪಾನ,

ಸುಮ್ಮನೆ ನಿಲ್ಲಬೇಡ ನೋಡುತ್ತಾ!

ಈವತ್ತು ವಿಶೇಷ ಏನೆಂದು ಗೊತ್ತಾ?

ನನ್ನ ಗೊಂಬೆಗೆ ನಾನು ಮಾಡಿಸುವೆ ಸ್ನಾನ!


ತೊಗೊಂಡು ಬಾ ಹಾಗೇ ಸ್ಯಾಂಡಲ್ ಸೋಪು,

ಹಾಗೂ ಬಿಳಿಯ ಟರ್ಕಿ ಟವಲ್ಲು!

ಓಡಿಬಿಡವೋ, ಕೇಳಿಸಿಕೋ, ನಿಲ್ಲು!

ಹಾಗೇ ತೊಗೊಂಡು ಬಾ ಕೂದಲಿಗೆ ಶಾಂಪೂ!


ಹಾಗೆಲ್ಲ ಸ್ನಾನಕ್ಕೆ ಅಳಬಾರದು ಕಣೇ 

ಕಣ್ಣಲ್ಲಿ ಹೋಗಿಬಿಡುತ್ತೆ ಸೋಪು 

ನೀನಲ್ಲವೇ ನನ್ನ ಮುದ್ದು ಪಾಪು

ಅಳುವುದೇ ಇಲ್ಲ, ತುಂಬಾ ಜಾಣೆ 


ತಲೆ ಒರೆಸುತ್ತೇನೆ ತಾಳು 

ಶೀತಗೀತ ಆದೀತು ಎಲ್ಲಾದರೂ

ಹಾಕುತ್ತೇನೆ ಹಿಡಿ ಘಮಘಮ ಪೌಡರು

ಬಾಚುವುದೇ ಕಷ್ಟ, ಗುಂಗುರು ಕೂದಲು!


ತಮ್ಮಾ ನೋಡೋ ಹೇಗೆ ಕಾಣುತ್ತಿದೆ ಮಗು!

ಇಡುತ್ತೇನೆ ಗಲ್ಲಕ್ಕೆ ದೃಷ್ಟಿ ಬೊಟ್ಟು, ತಾಳು!

ಓಡಿ ಹೋಗಬೇಡವೋ, ನಿಲ್ಲು ನಿಲ್ಲು!

ಸ್ನಾನ ಮಾಡಿಸುತ್ತೇನೆ ಬಾ ಇಲ್ಲಿ ನಿನಗೂ!




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)