ರೆಸಿಪಿ ರಮಣಿ



"ಇವತ್ತು ಬರೀ ಒಂದು ಸಿಂಗಲ್ ಪ್ಲೈನ್ ಇಡ್ಲಿ ಕಣಪ್ಪ" ಎಂದು ಮರಿಗೌಡ ಉಪ್ಪಿಲ್ಲದ ಸಪ್ಪೆ ಇಡ್ಲಿಯ ಮಾದರಿಯಲ್ಲಿ ಹೇಳಿದಾಗ ನಾವು ಇದೇನು ಹಾರರ್  ಎಂದು ಹೆದರಿ "ಹೌ ಕಮ್ ?" ಎಂದು ಹೌಹಾರಿದೆವು. ನಾನು ವಡಾ ಸೂಪ್ ಆರ್ಡರ್ ಮಾಡೋಣ ಎಂದುಕೊಂಡಿದ್ದೆ. ರಾಜಾರಾಂ ಮೆನುವಿನಲ್ಲಿ ದೋಸೆಗಳ ಲಿಸ್ಟ್ ಕಡೆಗೆ ನೋಡುತ್ತಿದ್ದರು. ಒಮ್ಮೆಲೇ ಸಿಂಗಲ್ ಇಡ್ಲಿಗೆ ಇಳಿದ ಮರಿಗೌಡರ ಉತ್ಸಾಹದ ಅಧಃಪತನವನ್ನು ಕಂಡು ನಮಗೆ ದಿಗಿಲಾಯಿತು.


"ಗೌಡರೆ ಎಲ್ಲಾ ಆರೋಗ್ಯ ತಾನೇ?" ಎಂದು ನಾನು ಅವರ ಕಡೆಗೆ ನೋಡಿದೆ. 


"ನೀವು ದೊಡ್ಡ ಗೌಡರ ಕುಟುಂಬದ ಅಭಿಮಾನಿ ಅಂತ ಗೊತ್ತು. ಅವರಿಗೆ ಬಂದಿರುವ ಕಷ್ಟ ನೋಡಿ ನಿಮಗೆ ತುಂಬಾ ಶಾಕ್ ಆದಹಾಗಿದೆ" ಎಂದು ರಾಜಾರಾಂ ಒಂದು ಗ್ಲಾಸ್ ನೀರನ್ನು ಮರಿಗೌಡರಿಗೆ ಕೊಟ್ಟು *ಕುಡಿದು ಸುಧಾರಿಸಿಕೊಳ್ಳಿ* ಎಂದರು.


"ನ್ಯಾಯವಾಗಿ ನೋಡಿದರೆ ನಾನು ಇಡ್ಲಿ ಕೂಡಾ ತಿನ್ನಬಾರದು" ಎಂದು ಮರಿಗೌಡರು ನಮ್ಮನ್ನು ಇನ್ನಷ್ಟು ಸಸ್ಪೆನ್ಸಿಗೆ ನೂಕಿದರು.


*ಅಯ್ಯೋ, ಈ ಬಿಸಿಲಿಗೆ ಒಂದೊಂದು ಸಲ ಹೊಟ್ಟೆ ಅಪ್ಸೆಟ್ ಆಗಬಹುದು. ಅದಕ್ಕೆ ಯಾಕೆ ಯೋಚನೆ ಮಾಡ್ತೀರಿ?"


"ಅಯ್ಯೋ ನನಗೆ ಏನೂ ಆಗಿಲ್ಲ ಕಣ್ರೀ. ನಮ್ಮ ಮನೆಯವರು ಇವತ್ತು  ಅದೇನೋ ಹೊಸಾ ರೆಸಿಪಿ ಅಂತೆ ಅದನ್ನು ನನ್ನ ಮೇಲೆ ಪ್ರಯೋಗ ಮಾಡಿದರು."


"ಯಾವುದು? ರೆಸಿಪಿ ರಮಣಿ ಅವರ ರವಾ ದೋಸಾ ತಾನೇ? ನಮ್ಮ ಮಿಸೆಸ್ ಕೂಡಾ ನೆನ್ನೆ ಮಾಡಿದ್ದರು. ಇಟ್ ವಾಸ್ ನಾಟ್ ಬ್ಯಾಡ್. ಇಟ್ ವಾಸ್ ಕ್ವೈಟ್ ಗುಡ್ ಆಸ್ ಏ ಮ್ಯಾಟರ್ ಆಫ್ ಫ್ಯಾಕ್ಟ್" ಎಂದು ರಾಜಾರಾಂ ಮೇಜಿನ ಮೇಲಿದ್ದ ಸ್ಪೂನಿನಿಂದ ನೀರಿನ ಲೋಟಕ್ಕೆ ಬಡಿದು ಜಲ್ ತರಂಗ್ ಸೃಷ್ಟಿಸಿದರು.


"ರವೆ ದೋಸೆ ಅಲ್ಲ.  ಪದ್ಮಾಸ್ ಪರಾಟಾ ಚಾನೆಲ್ ಮೇಲೆ ಕಾಣಿಸಿದ ಪೀಸ್ ಅಂಡ್ ಪೊಟೆಟೋ ಪರಾಟಾ ಮಾಡಿದ್ದರು."


"ವಾವ್!" ಎಂದು ನಾನು ಮತ್ತು ರಾಜಾರಾಂ ಬಾಯ್ತೆರೆದು ಕುಳಿತೆವು.


"ಚೆನ್ನಾಗೇ ಇತ್ತು. ನಾನು ಹಾಗೆ ಹೇಳಿದೆ ಅಂತ ಇನ್ನೊಂದು ಬಡಿಸಿರರು. ಮೇಲೆ ಬೆಣ್ಣೆ ಬೇರೆ ಹಾಕಿದರು."


ತಮ್ಮ ತೆರೆದ ಬಾಯಿಂದ ಜೊಲ್ಲು ಸುರಿಯುವ ಮುನ್ನ ರಾಜಾರಾಂ ತಮ್ಮ ಜಲ್ ತರಂಗ್ ನಿಲ್ಲಿಸಿ ನೀರನ್ನು ಗಟಗಟ ಕುಡಿದು ಸುಧಾರಿಸಿಕೊಂಡರು.


"ಅಷ್ಟೆಲ್ಲಾ ತಿಂದಮೇಲೆ ಹೊಟ್ಟೆಯಲ್ಲಿ ಜಾಗ ಇಲ್ಲ. ನಿಮಗೆ ಕಂಪನಿ ಕೊಡಬೇಕಲ್ಲ ಅಂತ ಒಂದು ಸಿಂಗಲ್ ಇಡ್ಲಿ.ಹೇಳಿದೆ."


"ವಾಟ್ ಎ ಫ್ರೆಂಡ್ ಮರಿಗೌಡ!" ಎಂದು ನಾನು ಅವರ ಬೆನ್ನು ತಟ್ಟಿದೆ. ಅಷ್ಟರಲ್ಲಿ ಸರ್ವರ್ ತಟ್ಟೆಗಳನ್ನು ನಮ್ಮ ಟೇಬಲ್ ಮೇಲೆ ತಂದಿಟ್ಟು "ಇನ್ನೇನಾದರೂ ಬೇಕಾ ಸಾರ್?" ಎಂದು ಕೇಳಿದ.


"ಸದ್ಯಕ್ಕೆ ಏನೂ ಬೇಡ" ಎಂದು ನಾನು ಅವನನ್ನು ಕಳಿಸಿದೆ.


"ನಮ್ಮ ಮಿಸೆಸ್ ನನಗೂ ಈ ರೆಸಿಪಿಗಳನ್ನೆಲ್ಲ ಕಳಿಸಿ ಈಗ ನನ್ನ ಫೇಸ್ಬುಕ್ ಗೋಡೆ ಮೇಲೂ ಈ ರೆಸಿಪಿಗಳದ್ದೇ ರಾಜ್ಯ ಆಗಿಹೋಗಿದೆ ಕಣ್ರೀ" ಎಂದು ಮರಿಗೌಡ ಸಿಂಗಲ್ ಇಡ್ಲಿಯ ಮುನ್ನೂರು ಅರವತ್ತು ಡಿಗ್ರಿಗಳಲ್ಲಿ ಹತ್ತು ಡಿಗ್ರಿಗಳಷ್ಟನ್ನು ಚಮಚದಿಂದ ನಾಜೂಕಾಗಿ ಕತ್ತರಿಸಿ ಸಾಂಬಾರಿನಲ್ಲಿ ಅದ್ದಿ ಬಾಯಿಗೆ ಹಾಕಿಕೊಂಡರು.


"ಈಗಂತೂ ರೆಸಿಪಿ ಮಾಡದೇ ಇರೋರೇ ಇಲ್ಲ." ಎಂದು ನಾನು ವಡಾ ಸೂಪ್ ಆಸ್ವಾದಿಸಿದೆ.


"ಎಲ್ರೂ ಒಬ್ಬರನ್ನೊಬ್ಬರು ಕಾಪಿ ಮಾಡಿಕೊಂಡು ತಮ್ಮದೇ ರೆಸಿಪಿ ಅಂತ ಹಾಕಿಕೊಳ್ತಾರೆ.  ಒಬ್ಬರು ನೀರಲ್ಲಿ ವಡೆ ಕರಿಯೋದು ಹೇಗೆ ಅಂತ ತೋರಿಸಿದರೆ ಇನ್ನೊಬ್ಬರು ನೀರಲ್ಲಿ ಪಕೋಡಾ ಮಾಡೋದು ಹೇಗೆ ಅಂತ ತೋರಿಸುತ್ತಾರೆ. ಸದ್ಯ ಅದನ್ನೆಲ್ಲ ನಮ್ಮ ಮಿಸೆಸ್ ನೋಡಿಲ್ಲ ಅಂತ ಕಾಣುತ್ತೆ, ಹೀಗಾಗಿ ನನಗೆ ಅದನ್ನೆಲ್ಲ ಟೇಸ್ಟ್ ಮಾಡುವ ಭಾಗ್ಯ ಬಂದಿಲ್ಲ." ಎಂದು ರಾಜಾರಾಂ ತಮ್ಮ ನೀರುದೋಸೆಯನ್ನು ಕೊಬ್ಬರಿ ಮಿಠಾಯಿ ಜೊತೆಗೆ ಬಾಯಿಗೆ ಹಾಕಿಕೊಂಡರು. 


"ಕನ್ನಡದಲ್ಲಿ ಲಕ್ಷಣವಾಗಿ ಮಾತಾಡುತ್ತಿದ್ದ ಒಬ್ಬರು ಈಗ ರೆಸಿಪಿಯಲ್ಲಿ ಇಂಗ್ಲಿಷ್ ಹಾಕಿದನ್ನು ಶುರು ಮಾಡಿಕೊಂಡು ಅವರ ಅವಸ್ಥೆ ಬೇಡ ಕಣ್ರೀ. ನೋಡಿ ಅವರು ಹಾಕಿದ್ದು ಸಿಂಪಲ್ ಉಪ್ಪಿಟ್ ರೆಸಿಪಿ. ಅದಕ್ಕೆ ಅದೇನು ಪೀಠಿಕೆ, ಅದೆಷ್ಟು ವಿವರಣೆ! ಈರುಳ್ಳಿ ಹೇಗೆ ಕತ್ತರಿಸಬೇಕು, ಕರಿಬೇವು ಹೇಗೆ ಶೇಖರಿಸಿ ಇಡಬೇಕು, ಇಂಥದ್ದೆಲ್ಲಾ ಹಾಕಿ ಉದ್ದ ಮಾಡಿದ್ದಾರೆ." ಎಂದು ರಾಜಾರಾಂ ಮುಂದುವರೆಸಿದರು.


"ಅವರು ಫಸ್ಟ್ ಲ್ಯಾಂಗ್ವೇಜ್ ಕನ್ನಡ ಇರಬಹುದು. ಮೂರು ನಾಲ್ಕು ವಾಕ್ಯದಲ್ಲಿ ಬರೆಯಿರಿ ಅಂದರೆ ಮೂವತ್ತಾದರೂ ಬರೆಯೋದು ರೂಢಿ ಆಗಿಬಿಟ್ಟಿದೆ." ಮರಿಗೌಡ ಮಧ್ಯದಲ್ಲಿ ಸೇರಿಸಿದರು.


"ಅಷ್ಟೇ ಆಗಿದ್ದರೆ ಚೆನ್ನಾಗಿತ್ತು. ಅವರ ಬಟ್ಲರ್ ಇಂಗ್ಲಿಷ್ ಯಾರು ಕೇಳೋರು?"


"ಬಟ್ಲಲ್ ಇಂಗ್ಲಿಷ್ ಅಂದರೆ ಏನ್ರೀ? ಬಟ್ಲಲ್ ಸಕ್ಕರೆ ತುಪ್ಪ ಅಳೆಯೋದು ಕೇಳಿದ್ದೀನಿ."


"ಬಟ್ಲರ್ ಕಣ್ರೀ. ಹಿಂದೆ ಇಲ್ಲಿ ವಾಸವಾಗಿದ್ದ ಇಂಗ್ಲೆಂಡ್ ದೇಶದ ಪ್ರಭುಗಳಿಗೆ ಬಟ್ಲರ್ ಆಗಿ ಸೇರಿಕೊಂಡಿದ್ದವರು ಅಷ್ಟೋ ಇಷ್ಟೋ ಹರಕಲು ಮುರುಕಲು ಇಂಗ್ಲಿಷ್ ಕಲಿತು ಅದನ್ನೇ ಧೈರ್ಯವಾಗಿ ಮಾತಾಡುತ್ತಿದ್ದರಲ್ಲ, ಅದಕ್ಕೆ ಬಟ್ಲರ್ ಇಂಗ್ಲಿಷ್ ಅಂತಾರೆ."


"ಓಹೋ!"


"ನೋಡಿ ಒಬ್ಬ ರೆಸಿಪಿ ರಮಣಿ ಉಪ್ಪಿಟ್ ಹೇಗೆ ಮಾಡೋದು ಅಂತ ಹೇಳೋವಾಗ ಒಂದು ಲೋಟ ರವೆ ತೊಗೊಂಡರೆ ಇಬ್ಬರಿಗೆ ಸಾಕಾಗುತ್ತೆ ಅಂತ ಹೇಳೋದಕ್ಕೆ ಇಫ್ ಯು ಆರ್ ಟೇಕಿಂಗ್ ಒನ್ ಕಪ್ ಯು ಕ್ಯಾನ್ ಈಟ್ ಟು ಪೀಪಲ್ ಅಂದರು!"


ಆ ನರಭಕ್ಷಕಿಯನ್ನು ನೆನೆದು ನಾನು ನಡುಗಿದೆ.


"ಭಯ್ಯಾ, ಇಲ್ಲಿ ಬಾರಪ್ಪ. ಇನ್ನೊಂದು ಸಿಂಗಲ್ ಇಡ್ಲಿ ತೊಗೊಂಬಾ" ಎಂದು ಮರಿಗೌಡ ನಮ್ಮ ಕಡೆಗೆ ತಿರುಗಿ "ಐ ಕ್ಯಾನ್ ಅಲ್ಸೋ ಈಟ್ ಟೂ" ಎಂದು ನಕ್ಕರು.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)