ಗಾಯ

ಸಿ ಪಿ ರವಿಕುಮಾರ್

'ಗಾಯವು ಮಾಗಬೇಕೆಂದರೆ
ಅದನ್ನು ಮುಟ್ಟುವುದನ್ನು ನಿಲ್ಲಿಸು'
ನಮ್ಮ ಸಮಾಜದ ಗಾಯಗಳೂ ಹೀಗೇ.
ಸದಾ ಕಿತ್ತುತ್ತಾ ಇದ್ದರೆ ಮಾಗುವುದಿಲ್ಲ
ಗಾಯ ಮಾಗಲು ಬೇಕಾದದ್ದು
ಮದ್ದು, ಸಹಿಷ್ಣುತೆ, ತಾಳ್ಮೆ.
ನಿನಗೆ ಗಾಯವಾದಾಗ
ಔಷಧ ಹಚ್ಚದೆ
ಊರನ್ನೆಲ್ಲಾ ಬಯ್ಯುತ್ತಿದ್ದರೆ
ಗಾಯ ಮಾಗುವುದಿಲ್ಲ.
ಗಾಯ ಯಾಕಾಯಿತು ಎಂಬ
ದೀರ್ಘವಿಶ್ಲೇಷಣೆಯಿಂದಲೂ
ಗಾಯ ಮಾಗುವುದಿಲ್ಲ.
ನಿನಗಲ್ಲ, ನಿನ್ನ ಸ್ನೇಹಿತನಿಗೆ ಗಾಯವಾಗಿದ್ದರೆ
ಅವನಿಗೆ ಬೇಕಾದದ್ದು
ಔಷಧ, ಸಾಂತ್ವನ, ಗಾಯ ಮಾಗುವ ಭರವಸೆ.
ಊರನ್ನೆಲ್ಲಾ ಬೈದು
ಗಾಯದ ಕಾರಣಗಳನ್ನು
ಊಹಿಸುತ್ತಾ
ಗಾಯವನ್ನು ಕೆದಕುತ್ತಿದ್ದರೆ
ಗಾಯ ಮಾಗುವುದಿಲ್ಲ.

ಮಗು ಬಿದ್ದು ಅತ್ತಾಗ
ಯಾರು ಬೀಳಿಸಿದರು
ನೆಲ ಯಾಕೆ ಡೊಂಕಾಗಿದೆ
ಎಂಬ ಯಾವುದನ್ನೂ ಲೆಕ್ಕಿಸದೆ
ತಾಯಿಯೊಬ್ಬಳು ಮಾತ್ರ
ಗಾಯಕ್ಕೆ ಔಷಧ ಹಚ್ಚಿ ರಮಿಸುತ್ತಾಳೆ.
ಏಕೆಂದರೆ ಮಗುವಿನ ನೋವನ್ನು
ಆವಳು ಅನುಭವಿಸುತ್ತಾಳೆ.
ಸಮಾಜದ ಗಾಯ ನೋಡಿದಾಗ
ನೀನು ಸಾಧ್ಯವಾದರೆ ತಾಯಿಯಾಗು
ಇಲ್ಲವೇ
ಔಷಧ ಹಚ್ಚುವ ದಾಯಿಯಾಗು.
ಮಾತಾಡುವ ಬಾಯಿ ಮಾತ್ರ ಆದರೆ
ಕಳೆದುಕೊಳ್ಳುವೆ ಸ್ನೇಹಿತನ ವಿಶ್ವಾಸ.
ನಿನಗೆ ನೀನೇ ಟೊಳ್ಳಾದಂತೆ ಭಾಸ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)