ಭಾರತಮಾತೆ ಗ್ರಾಮವಾಸಿಣಿ!

ಮೂಲ ಹಿಂದಿ ಕವಿತೆ - ಸುಮಿತ್ರಾನಂದನ್ ಪಂತ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್


ಭಾರತಮಾತೆ ಗ್ರಾಮವಾಸಿಣಿ

ಹೊಲಗಳಲ್ಲಿ ಬಹುದೂರದವರೆಗೂ 
ಹರಡಿದೆ ಈಕೆಯ ಮಾಸಿದ ಸೆರಗು 
ಕಣ್ಣೊಳು ಗಂಗಾಜಮುನೆಯ ನೀರು 
ಮಣ್ಣಿನ ಪ್ರತಿಮೆ! ಏಕೋ ಉದಾಸಿನಿ!

ಭಾರತಮಾತೆ, ಗ್ರಾಮವಾಸಿಣಿ!

ದೀನ ನೋಟ, ಕೆಳಬಾಗಿದ ವದನ,
ತುಟಿಗಳಲ್ಲಿ ಚಿರನೀರವ ರೋದನ, 
ಯುಗಗಳ ಕತ್ತಲು, ಬಹುವಿಷಣ್ಣ ಮನ,
ತನ್ನ ಮನೆಯೊಳಗೇ ಇವಳು ಪ್ರವಾಸಿನಿ!

ಭಾರತಮಾತೆ, ಗ್ರಾಮವಾಸಿಣಿ!

ಹಡೆದ ಮೂವತ್ತುಕೋಟಿ ಮಕ್ಕಳೂ 
ಅರೆನಗ್ನರು, ಹಸಿದವರು, ಶೋಷಿತರು,
ಮೂಢ-ಅಸಭ್ಯ-ಅಶಿಕ್ಷಿತ-ನಿರ್ಗತಿಕರು,
ನತಮಸ್ತಕ ಮರ-ಬುಡ ನಿವಾಸಿಣಿ! 

ಭಾರತಮಾತೆ, ಗ್ರಾಮವಾಸಿಣಿ!

ದರೋಡೆಯಾಗಿದೆ ಚಿನ್ನದ ಗೂಡು,
ವಿಶಾಲ ಮನೆ-ಮನ ಎರಡೂ ಬರಡು,
ನಡುಗುವ ತುಟಿಗಳು, ನಿಶಬ್ದ ಹಾಡು,
ರಾಹುಗ್ರಸ್ತ ಶರದಿಂದುಹಾಸಿಣಿ!

ಭಾರತಮಾತೆ, ಗ್ರಾಮವಾಸಿಣಿ!

ಚಿಂತೆಯಲ್ಲಿ ಗಂಟಾಗಿವೆ ಹುಬ್ಬು,
ಮಂಜಾಗಿವೆ ಹನಿಗೂಡಿದ ಕಣ್ಣು,
ಉಪಮಿಸಲೇ ಮುಖಚಂದ್ರಮನನ್ನು?
ಜ್ಞಾನ-ಮೂಢ ಗೀತಾಪ್ರಕಾಶಿಣಿ!

ಭಾರತಮಾತೆ, ಗ್ರಾಮವಾಸಿಣಿ!

ತಪ-ಸಂಯಮ ಫಲ ನೀಡಿತು ಕೊನೆಗೂ 
ಊಡಿಸಿ ಅಹಿಂಸೆ ಎಂಬ ಎದೆಹಾಲು 
ಜನಮನಭಯ  ಭವತನುಭ್ರಮೆ ಕಳೆದಳು 
ಜಗಜನನೀ ಜೀವನ ವಿಕಾಸಿನಿ!

ಭಾರತಮಾತೆ, ಗ್ರಾಮವಾಸಿಣಿ!





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)