ಆರ್ಕಿಮಿಡೀಸನ ಸಾವು

ಸಿ. ಪಿ. ರವಿಕುಮಾರ್ 


Archimedes Thoughtful by Fetti (1620)
("ವಿಚಾರದಲ್ಲಿ ಮುಳುಗಿದ ಆರ್ಕಿಮಿಡೀಸ್" -  ಚಿತ್ರ - ಡಾಮಿನಿಕೋ ಫೆಟ್ಟಿ (೧೬೨೦), ಕೃಪೆ - ವಿಕಿಪೀಡಿಯಾ)


ಯುರೇಕಾ ಎಂದು ಸ್ನಾನದಿಂದ  ಮೇಲೆದ್ದು ಬಂದಾಗ 
ಅವನಿಗೆ ಮೈಮೇಲೆ  ಇರಲಿಲ್ಲ ಪರಿವೆ
ತಲೆಯಲ್ಲಿ ಕೊರೆಯುತ್ತಿತ್ತು ಒಂದೇ ಹುಳು 
 ಹೇಗೆ ಬೇರ್ಪಡಿಸುವುದು ಸತ್ಯದಿಂದ ಸುಳ್ಳಿನ ಎಳೆ?

ರಾಜನಿಗೆ ಅವನ ಮೇಲೆ ಎಷ್ಟೊಂದು ನಂಬಿಕೆ!
ಎತ್ತಿಕೊಟ್ಟಿದ್ದಾನೆ ತಲೆಯ ಮೇಲಿನ ಮುಕುಟ -
ಆರ್ಕಿಮಿಡೀಸ್! ನೀನು ಕಂಡುಹಿಡಿಯಬಲ್ಲೆಯಾ 
ಅಕ್ಕಸಾಲಿಯು ಬಂಗಾರದಲ್ಲಿ ಮಾಡಿರುವನೇ  ಬೆರಕೆ ?

ಎಷ್ಟು ನೀರು ಹೊರಚೆಲ್ಲುವುದು  ತೊಟ್ಟಿಯಿಂದ
ನೀರಿನಲ್ಲಿ ಮುಳುಗಿಸಿದಾಗ ಬಂಗಾರದ  ಮುಕುಟ?
ಮತ್ತು ಎಷ್ಟು ನೀರು ಹೊರಚೆಲ್ಲುವುದೋ  
ಹಂಸಕ್ಷೀರ ನ್ಯಾಯಕ್ಕೊಡ್ಡಿದ ರಾಜನ ಕಿರೀಟ?

ಯುರೇಕಾ ಎಂದು ಮೇಲೆದ್ದು ಬಂದಾಗ 
ಅವನಿಗೆ ಮೈಮೇಲೆ ಇರಲಿಲ್ಲ ಒಂದಾದರೂ ಅರಿವೆ
ಚಕಿತರಾಗಿ ನೋಡಿದರು ಮಹಿಳೆಯರು, ಮಹನೀಯರು 
ಹುಚ್ಚನಂತೆ ಓಡುವುದು ಮೈಮೇಲೆ ಇಲ್ಲದೆ  ಅರಿವೇ 

ಇಂಥ ಆರ್ಕಿಮಿಡೀಸ್ ಮುಳುಗಿದ್ದಾನೆ ಲೆಕ್ಕದಲ್ಲಿ 
ಹೊತ್ತಿಕೊಂಡು ಉರಿಯುತ್ತಿದೆ ಸಿರಕ್ಯೂಸ್ ಅತ್ತ 
ಒಳನುಗ್ಗಿ ಬಂದಿದ್ದಾನೆ ಕತ್ತಿ ಹಿರಿದು ಪಕ್ಕದಲ್ಲಿ  
ರೋಮನ್ ಸೈನಿಕನೊಬ್ಬ ಏದುಸಿರು ಬಿಡುತ್ತಾ 

ತಿರಸ್ಕಾರದಿಂದ ನೋಡಿ ಅವನತ್ತ "ತಾಳು!
ನನ್ನ ಲೆಕ್ಕಗಳು ಮುಗಿದಿಲ್ಲ ಇನ್ನೂ!"
ಎಂದು ಅಡ್ಡ ಹಿಡಿದು ಕೈಯನ್ನು 
ಮುಂದುವರೆಸಿದನಂತೆ ಹುರಿಯಾಳು 

ಸೈನಿಕನು ಅವಾಕ್ಕಾಗಿ ನಿಂತ ಒಂದೆರಡು ಕ್ಷಣ 
ಅಬ್ಬಾ ಹಣ್ಣುಮುದುಕನ  ಸೊಕ್ಕೇ!
ಖಡ್ಗವನ್ನೆತ್ತಿ ಒಂದೇ ಏಟಿಗೆ ಕಡಿದ 
ಜ್ಞಾನವಿಹಾರದಲ್ಲಿದ್ದ ಹಕ್ಕಿಯ ರೆಕ್ಕೆ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)