ಬಾ ಈ ದೀಪವು ಮಸುಕಾದಾಗ!

 ಮೂಲ ಹಿಂದಿ ಕವಿತೆ - ಮಹಾದೇವಿ ವರ್ಮಾ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 
Selective Focus Photography of Turned-on Black Metal Framed Light Sconce
ಈ ಚಂಚಲ ಕನಸುಗಳು ಅಮಾಯಕ,
ಬೆಳೆಸಿರುವೆನು ಕಣ್ಣೀರಿನಲಿ, 
ಮೃದು ಕಣ್ ರೆಪ್ಪೆಯ ತೊಟ್ಟಿಲೊಳಿಟ್ಟು
ತೂಗಿರುವೆನು ನಿದ್ರೆಯ ಬಿಟ್ಟು
ಸೌರಭವೆಂಬ ರೆಕ್ಕೆಯನಿತ್ತು 
ತಲುಪಿಸು ಎಲ್ಲಾ ಕಣ್ಗಳಿಗೆ!

ಸಂಜೆಯ ಕರುಣಾಮಯ ಅಂಕವು
ಶುರುವಾಗಿದೆ, ರಂಗೇರಿದೆ ಮುಸ್ಸಂಜೆ
ಸಂಧ್ಯೆಯ ನಭದೊಳು ಬಣ್ಣದ ಜೊತೆಗೇ
ಕವಿದಿಹ ವರ್ಷಾಕಾಲದ ಮೋಡಕ್ಕೆ
ವಿದ್ಯುತ್ ಸ್ಪರ್ಶದ ಚೇತನ ನೀಡಿ 
ತೋರು ದಾರಿ ಪ್ರತಿಯೊಂದೂ ಎದೆಗೆ!

ಪುಳಕ ತುಂಬಿರುವ ಪ್ರತಿ ಕ್ಷಣಕ್ಷಣವೂ
ಪಾವನ ಸ್ನೇಹಾಮೃತದೊಳು ಮಿಂದು
ಹೊಳೆಯುತ್ತಿವೆ ಜ್ವಾಲಾ ಚುಂಬನಕೆ!
ನೀಡಿ ತಾರೆಗಳ ಪ್ರಾಣದ ಭಿಕ್ಷೆ
ಮಾಡು ಶೂನ್ಯ ಶ್ವಾಸಗಳ ರಕ್ಷೆ, 
ಅಮೃತಗಳಿಗೆಗಳು ಇವುಗಳಿಂದಲೇ!

ಇದು ಚಿರ ಉಜ್ಜ್ವಲ ಅನಂತ ಜೀವನ-
ನಾಟಕದೊಳು ವ್ಯಥೆ-ಅಂಕದ ಸ್ಪಂದನ!
ಇದು ಚೆದುರಿದ, ವಿಸ್ಮೃತ ಬದುಕಿನ ಕಥೆ
ಮಾಸಿದ ಈ ಹಾಳೆಯಿಂದಲೇ ಚರಿತೆ
ಬರೆಯಲು ಆರಂಭಿಸು, 
ನೀಡು ಅಕ್ಷರದ ಘನತೆ!

ಬತ್ತಿಯನ್ನು ಗುರುತಿಸಿರುವುದು ಹಣತೆ
ಬತ್ತಿ ಸ್ನೇಹವನ್ನು ಗುರುತಿಸಿದೆ
ಸ್ನೇಹ ಗುರುತಿಸಿದೆ ಮಲಿನ ಸೆರಗನು
ಚಿರಬಂಧನದೊಳು ಬಂಧಿಸಿ ಇವನು
ವರವ ತಾ ನೀನು ತೊಳೆದು ಶುಭ್ರವಾಗುವಂತೆ!


ಕವಿತೆಯ ಸ್ವಾರಸ್ಯ: ಇದು ಬದುಕಿನ ಸಂಜೆಯಲ್ಲಿರುವ ಒಂದು ಜೀವದ ಸ್ಪಂದನ.   ತಾನು ಕಂಡ ಎಷ್ಟೋ ಕನಸುಗಳು ಈ ಜೀವಕ್ಕೆ ಆಪ್ಯಾಯವಾದವು. ಅವುಗಳನ್ನು ಎಲ್ಲಾ ಕಣ್ಣುಗಳಿಗೆ ತಲುಪಿಸುವುದು ಅದರ ಆಸೆ.  ಬದುಕಿನ ಸಂಜೆಯ ಅಂಕ ಪ್ರಾರಂಭವಾಗಿದೆ. ಸಂಜೆಯ ಆಕಾಶವು ಅನೇಕ ಬಣ್ಣಗಳಿಂದ ಕೂಡಿರುತ್ತದೆ. ಆದರೆ ಕ್ರಮೇಣ ಕತ್ತಲು ಕವಿಯುತ್ತದೆ.  ಆಗ ವಿದ್ಯುತ್ ಹೇಗೆ ಕತ್ತಲೆಯನ್ನು ದೂರ ಮಾಡುತ್ತದೋ ಅಂಥದೇ ಚೈತನ್ಯವನ್ನು ಜೀವ ಬೇಡುತ್ತಿದೆ. ತನ್ನ ಕನಸುಗಳು, ತನ್ನ ಆಶಯಗಳನ್ನು  ಎಲ್ಲರ ಎದೆಗೆ ತಲುಪಿಸುವ ಅದಮ್ಯ ಆಸೆಯನ್ನು ಜೀವ ಹೊತ್ತಿದೆ.  ಬದುಕಿನಲ್ಲಿ ತಾನು ಕಂಡ ಸ್ನೇಹದ ಕ್ಷಣಗಳನ್ನು ನೆನೆದ ಜೀವವು ಈ ಅಮೃತಗಳಿಗೆಗಳ ನಿಜವಾದ ಬೆಲೆ ಏನೆಂದು ಅರಿತುಕೊಳ್ಳುತ್ತಿದೆ. ಎಷ್ಟೋ ಜೀವಗಳು ಸ್ನೇಹವನ್ನು ಕಾಣದೆ, ವೃಥಾ ವೈರವನ್ನು ಸಾಧಿಸುತ್ತಾ ಬದುಕನ್ನು ಕಳೆದುಬಿಡುತ್ತವೆ! ಅವುಗಳಿಗೆ ಈ ಸ್ನೇಹಾಮೃತವನ್ನು ನೀಡಿ ಅವರ ಬಾಳನ್ನು ಸಚೇತನಗೊಳಿಸುವ ಪ್ರಾರ್ಥನೆಯನ್ನು ಜೀವ ಸಲ್ಲಿಸುತ್ತದೆ.  ಜೀವನವು ಅನಂತ; ಅದರಲ್ಲಿ ತನ್ನ ಬದುಕು ಒಂದು ಮಾಸಿದ ಪುಟವಷ್ಟೇ. ಅದರಲ್ಲಿ ಬರೆದ ತನ್ನ ಕಥೆಯೂ ಚೆದುರಿದ ವಿಸ್ಮೃತಿಯಷ್ಟೇ! ಅಲ್ಲಿಂದಲೇ ಪ್ರಾರಂಭಿಸಿ ಜೀವನದ ಘನತೆಯನ್ನು ಎತ್ತಿಹಿಡಿಯಬೇಕೆಂಬ ಆಸೆಯನ್ನು ಜೀವವು ಹೊಂದಿದೆ.  ಕೊನೆಯ ಸಾಲುಗಳಲ್ಲಿ ಬರುವ ಹಣತೆ-ಬತ್ತಿ ದೇಹ ಮತ್ತು ಆತ್ಮಗಳ ಸಂಕೇತ.   ಅದು ಹೇಗೋ ನಮ್ಮ ಆತ್ಮ ಈ ದೇಹವನ್ನು ಗುರುತಿಸಿ ನೆಲೆ ನಿಂತಿತು. ಅದೆಷ್ಟೋ ಸ್ನೇಹಗಳನ್ನು, ಬಂಧನಗಳನ್ನು ಸ್ಥಾಪಿಸಿತು. ಹೇಗೆ ಬತ್ತಿಯಿಂದ ಸೆರಗಿಗೆ ಕಲೆ ಹತ್ತುವುದೋ ಹಾಗೆ ಈ ಜೀವದಿಂದಲೂ ಸುತ್ತಲ ಜಗತ್ತಿಗೆ ಕಲೆ ಹತ್ತಿರಬಹುದು. ಆತ್ಮಕ್ಕೆ ಕಲೆ ಇಲ್ಲವೆನ್ನುತ್ತಾರೆ.  ಬತ್ತಿಗೆ ಕಲೆ ಇಲ್ಲದಿದ್ದರೂ ಬಟ್ಟೆಗಂತೂ ಇದೆಯಲ್ಲ! ಅದನ್ನು ಶುಭ್ರಗೊಳಿಸುವಂತೆ ಜೀವವು ಪ್ರಾರ್ಥಿಸುತ್ತಿದೆ. ತನ್ನ ನಂತರ ತನ್ನ ಪಾಪಗಳ ಕೊಳೆ ನಾಶವಾಗಲಿ ಎಂಬುದು ಅದರ ಆಶಯ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)