ತೃಪ್ತಿ



ಮೂಲ: ಕ್ಯಾಥರೀನ್ ಹೆಪ್ ಬರ್ನ್

ಅನುವಾದ: ಸಿ. ಪಿ. ರವಿಕುಮಾರ್


ನಾನು ಹದಿಹರೆಯದ ಹುಡುಗಿಯಾಗಿದ್ದಾಗ ಒಮ್ಮೆ.ನನ್ನ ತಂದೆಯ ಜೊತೆಗೆ ಸರ್ಕಸ್ ನೋಡಲು ಹೋಗಿದ್ದೆ. ಟಿಕೆಟ್ ಖರೀದಿಸಲು ನಾವು ಸಾಲಿನಲ್ಲಿ ನಿಂತಿದ್ದೆವು. ಉದ್ದದ.ಸಾಲು ಕ್ರಮೇಣ ಚಿಕ್ಕದಾಗುತ್ತಾ ಕೊನೆಗೂ ನಾವು ಟಿಕೆಟ್ ಪೆಟ್ಟಿಗೆಯ ಮುಂದೆ ಬಂದೆವು. ನಮಗೂ ಮತ್ತು  ಟಿಕೆಟ್ ಪೆಟ್ಟಿಗೆಗೂ ನಡುವೆ  ಈಗ ಒಂದು ಸಂಸಾರದವರು ಮಾತ್ರ ಉಳಿದಿದ್ದರು. 


ನಮ್ಮ ಮುಂದೆ ನಿಂತಿದ್ದವರನ್ನು ನಾನು ಬಹಳ ಹೊತ್ತಿನಿಂದ ಗಮನಿಸುತ್ತಿದ್ದೆ. ಹನ್ನೆರಡು ವರ್ಷದ ಒಳಗಿನ ಎಂಟು ಮಕ್ಕಳು. ಅವರು ಧರಿಸಿದ್ದ ಬಟ್ಟೆಗಳು ಅವರು ಅಷ್ಟೇನೂ ಸ್ಥಿತಿವಂತ ಮನೆಯವರಲ್ಲ ಎಂದು ಸಾರುತ್ತಿದ್ದವು. ಸಾಧಾರಣವಾಗಿದ್ದರೂ  ಅವರ ಬಟ್ಟೆಗಳು ಶುಭ್ರವಾಗಿದ್ದವು.  ಅವರ ನಡೆನುಡಿಗಳು ಉತ್ತಮವಾಗಿದ್ದವು. ಅವರ ಉತ್ಸಾಹ ಹೇಳತೀರದು. ಸರ್ಕಸ್ಸಿನಲ್ಲಿ ಬರುವ ಪ್ರಾಣಿಗಳು, ಬಫೂನ್ ಇತ್ಯಾದಿಗಳ ಬಗ್ಗೆ ಅವರು ಹರಟೆ ಕೊಚ್ಚುತ್ತಿದ್ದರು. ಅವರು ಎಂದೂ ಸರ್ಕಸ್ ನೋಡಿರಲಿಲ್ಲ ಮತ್ತು ಬಹುಶಃ ಅವರು ಮೊಟ್ಟಮೊದಲ ಸಲ ಪಟ್ಟಣಕ್ಕೆ ಬಂದಿರಬಹುದು ಎಂದು ಊಹಿಸಬಹುದಾಗಿತ್ತು.  ಸರತಿಯ ಸಾಲಿನಲ್ಲಿ ಮಕ್ಕಳು ಇಬ್ಬಿಬ್ಬರು ಕೈ ಹಿಡಿದು ನಿಂತಿದ್ದರು. ಅವರೆಲ್ಲರ ಮುಂದೆ ಅವರ ಅಪ್ಪ ಅಮ್ಮ ನಿಂತಿದ್ದರು. ಅವರ ತಾಯಿ ತನ್ನ ಗಂಡನ ಕಡೆಗೆ ಬಹಳ ಹೆಮ್ಮೆಯಿಂದ ನೋಡುತ್ತಿದ್ದಳು. ಮಕ್ಕಳನ್ನು ಹೀಗೆ ಸರ್ಕಸ್ ತೋರಿಸಲು ಕರೆದು ತಂದ ತಂದೆಯನ್ನು ಅವಳು ಅಭಿಮಾನ ಮತ್ತು ಕೃತಜ್ಞತೆಯಿಂದ  ನೋಡುತ್ತಿದ್ದಳು. ಅವನ ಭಾವವೂ ಹಾಗೇ ಇತ್ತು. ತನ್ನ ಹೆಂಡತಿ ಮಕ್ಕಳ ಕಡೆಗೆ ಅವನು ಹೆಮ್ಮೆಯಿಂದ ನೋಡುತ್ತಿದ್ದ.


ಅವರು ಟಿಕೆಟ್ ಪೆಟ್ಟಿಗೆಯ ಮುಂದೆ ಬಂದಾಗ ಪೆಟ್ಟಿಗೆಯ ಒಳಗಿದ್ದ ಹೆಂಗಸು ಎಷ್ಟು ಎಂದು ಕೇಳಿದಳು. ಅವನು ಹೆಮ್ಮೆಯಿಂದ  "ಎಂಟು ಮಕ್ಕಳ ಟಿಕೆಟ್ ಮತ್ತು ಎರಡು ವಯಸ್ಕರ ಟಿಕೆಟ್" ಎಂದು ಅಭಿಮಾನಪೂರ್ವಕವಾಗಿ ಹೇಳಿದ. ಅವಳು ಒಟ್ಟು ಎಷ್ಟಾಗುತ್ತದೆ ಎಂದು ಲೆಕ್ಕ ಮಾಡಿ ಹೇಳಿದಳು.


ಅವನ ಉತ್ಸಾಹ ಒಮ್ಮೆಲೇ ಇಳಿದುಹೋಯಿತು. ಅವನ ಮುಖದಲ್ಲಿ ಆತಂಕ ಕಾಣಿಸಿತು. "ಎಷ್ಟೆಂದಿರಿ?" ಎಂದು ಅವನು ಪುನಃ ಕೇಳಿದ.


ನನ್ನ ತಂದೆಗೆ ಒಮ್ಮೆಲೇ ಅವನ ಪರಿಸ್ಥಿತಿಯ ಅರಿವಾಯಿತು. ಹೆಂಡತಿ ಮಕ್ಕಳನ್ನು ಸರ್ಕಸ್ ತೋರಿಸಲು ಕರೆತಂದವನ ಬಳಿಯಲ್ಲಿ ಸಾಕಷ್ಟು ಹಣ ಇರಲಿಲ್ಲ. ನನ್ನ ತಂದೆಗೆ ಏನೆನ್ನಿಸಿತೋ ತಮ್ಮ ಜೋಬಿನಿಂದ ನೋಟನ್ನು ಹೊರಗೆ ತೆಗೆದು ನೆಲದ ಮೇಲೆ ಹಾಕಿದರು. ನಂತರ ಅದನ್ನು ಬಗ್ಗಿ ಮೇಲೆತ್ತಿ ಆತನ ಬೆನ್ನು ತಟ್ಟಿ "ಸ್ವಾಮೀ, ತೊಗೊಳ್ಳಿ, ಇದು ನಿಮ್ಮ ಜೋಬಿನಿಂದ ಕೆಳಕ್ಕೆ ಬಿತ್ತು!" ಎಂದರು.


ಮಕ್ಕಳ ತಂದೆಗೆ ಎಲ್ಲವೂ ಅರ್ಥವಾಯಿತು. ಅವನು ಕೃತಜ್ಞತಾಪೂರ್ವಕನಾಗಿ ನನ್ನ ತಂದೆಯ ಕೈಯನ್ನು ಬಿಗಿಯಾಗಿ ಹಿಡಿದು "ಸ್ವಾಮೀ, ಬಹಳ ಉಪಕಾರವಾಯಿತು" ಎಂದು ನುಡಿದ. ಅವರು ಟಿಕೆಟ್ ಖರೀದಿಸಿ ಒಳಗೆ ಹೋದರು. ನಾವು ಟಿಕೆಟ್ ಖರೀದಿಸದೆ ಮರಳಿದೆವು. ಏಕೆಂದರೆ ನಮ್ಮ ತಂದೆ ಕೊಟ್ಟ ಹಣವು ನಮ್ಮ ಟಿಕೆಟ್ ಹಣವಾಗಿತ್ತು. ನಾವು ಅಂದು ಸರ್ಕಸ್ ನೋಡದೆ ಮನೆಗೆ ಹಿಂತಿರುಗಿದರೂ ನಮ್ಮ ಮನಸ್ಸಿನಲ್ಲಿ ಸರ್ಕಸ್ ನೋಡಿದ್ದಕ್ಕಿಂತಲೂ ಹೆಚ್ಚಿನ ತೃಪ್ತಿ ನೆಲೆ ಮಾಡಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)