ಉಯ್ಯಾಲೆ ಆಟ



ಹಿತ್ತಲ ತೋಟದ ಹಲಸಿನ ಮರಕ್ಕೆ
ಕಟ್ಟಿರುವಳಮ್ಮ ಉಯ್ಯಾಲೆ
ಕೂಡಿಸಿ ನನ್ನನು ತೂಗುವಳಮ್ಮ
ಆಡಿಸುವಳು ಕೆಳಗೆ, ಮೇಲೆ!

ನಾನು ತೂಗಿದೆಡೆ ಬೌವೌ ಎನ್ನುತ
ತಾನೂ ಬರುವನು ರಾಮಹರಿ
ನನ್ನ ತೊಡೆ ಮೇಲೆ ಕೂತು ಜೋಕಾಲಿ
ಆಡುವುದವನಿಗೆ ನಿತ್ಯಚರಿ!

ಬಿಡುವಿಲ್ಲದೆ ಇದ್ದರೆ ಅಮ್ಮನಿಗೆ
ಅಜ್ಜಿಯ ಹೋಗಿ ಕೇಳುವೆನು
ನಡುಬಗ್ಗಿದ್ದರೂ ಹೇಗೋ ಎದ್ದು
ಹುಡುಗಿಯಾಗಿಬಿಡುವಳು ತಾನೂ!

ಅಜ್ಜಿಯ ಕೂಡಿಸಿದೆನು ನಾನೊಮ್ಮೆ
ಮಾಡಿದೆ ತುಂಬಾ ಬಲವಂತ
ಜೀವವ ಕೈಯಲಿ ಹಿಡಿದು ಕುಳಿತಳು
ನೆನೆಯುತ ಬಾಯಲಿ "ಭಗವಂತ!"

ಬೀಸುವ ತಂಗಾಳಿಯದೋ ಅಥವಾ
ಜೋಕಾಲಿಯದೋ ತಿಳಿಯದು, ಮಾಯೆ!
ಮಾಯವಾಯ್ತು ಅಜ್ಜಿಯ ಮುಖದಿಂದ
ಬಿದ್ದುಬಿಡುವ ಭೀತಿಯ ಛಾಯೆ!

ಬಾಲ್ಯದ ಸಖಿಯರ ನೆನೆದು ಮುಖದಲ್ಲಿ
ಮೂಡಿತು ನಗೆ ಕಾಮನಬಿಲ್ಲು
ಎಷ್ಟೆತ್ತರ ನೂಕುತ್ತಿದ್ದರು ಗೊತ್ತೇ
ಎನ್ನಲು ಮಿಂಚಿತು ಬಿಳಿಹಲ್ಲು!

ಅಮ್ಮನು ನೋಡಿದಳು ಬೆರಗಾಗಿ
ಅಜ್ಜಿ ಆಡುವುದು ಉಯ್ಯಾಲೆ
ಉಕ್ಕಿತು ನಗೆ ಹಾಲುಕ್ಕಿದ ಹಾಗೆ
ಕಾಯಲಿಟ್ಟದ್ದು ಒಲೆ ಮೇಲೆ!

ಹಿತ್ತಲ ತೋಟದ ಹಲಸಿನ ಮರಕ್ಕೆ
ಕಟ್ಟಿರುವಳಮ್ಮ ಉಯ್ಯಾಲೆ
ಕೂಡಿಸಿ ನನ್ನನು ತೂಗುವಳಮ್ಮ
ಆಡಿಸುವಳು ಕೆಳಗೆ, ಮೇಲೆ!


- ಸಿ. ಪಿ. ರವಿಕುಮಾರ್
ಏಪ್ರಿಲ್ ೨೩, ೨೦೨೪


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)