ಅಜ್ಜಿಯ ಬೆಕ್ಕು
ಅಜ್ಜಿಯ ಹಿಂದೆ ಓಡಾಡುವುದು
ಪಟ್ಟಾಪಟ್ಟೆ ಕರಿಬೆಕ್ಕು
ಹುಲಿ ಎಂದೇ ತಿಳಿದಿದೆ ತನ್ನನ್ನು
ಅಬ್ಬಾ ಎಂತಹ ಸೊಕ್ಕು!
ಪಟ್ಟಾಪಟ್ಟೆ ಕರಿಬೆಕ್ಕು
ಹುಲಿ ಎಂದೇ ತಿಳಿದಿದೆ ತನ್ನನ್ನು
ಅಬ್ಬಾ ಎಂತಹ ಸೊಕ್ಕು!
ಮಜ್ಜಿಗೆ, ಹಾಲು, ಏನೇ ಇರಲಿ,
ಕೃಷ್ಣನಿಗೊಂದು ಪಾಲು!
ಬೆಣ್ಣೆಯ ಕಡೆಯಲು ಕೂತರೆ ಅಜ್ಜಿ
ನೆಕ್ಕುವುದು ಕಡಗೋಲು!
ಹೂವನು ಬಿಡಿಸಲು ಹೋದರೆ ಅಜ್ಜಿ
ಅಲ್ಲಿಗೆ ಬರುವನು ಕೃಷ್ಣ
ಅಯ್ಯೋ ಹಸಿವಾಯಿತೆ ಕೃಷ್ಣನಿಗೆ
ಎನ್ನುತ ಎದ್ದು ತಕ್ಷ್ಣ
ಅಜ್ಜನಿಗೆಂದು ಮಾಡಿದ ಕಾಫಿ
ಕೊಟ್ಟರೆ ಬಟ್ಟಲಿನಲ್ಲಿ
ಒಂದೇ ನಿಮಿಷದಿ ಹೀರಿಬಿಡುವನು
ಕೃಷ್ಣನು ಮಹಾಮಳ್ಳಿ!
ಊರಿಗೆ ಹೋದಾಗೆಲ್ಲಾ ಅಜ್ಜಿ
ಅಜ್ಜನದೇ ವಹಿವಾಟು,
ಅಜ್ಜಿಯ ಮುದ್ದು ಮುಚ್ಚಟೆಗೆಲ್ಲ
ಸ್ವಲ್ಪ ದಿನ ಫುಲ್ ಸ್ಟಾಪು
ಅಡಿಗೆಮನೆಗೇ ನುಗ್ಗುವ ಕೃಷ್ಣ,
ಅವನಿಗಿಲ್ಲ ಸಂಕೋಚ
ಕುಡಿದು ತಪ್ಪಲೆಯ ತುಂಬಾ ಹಾಲು
ಮಿಯಾಂವ್ ಎನ್ನುವನು, ಸಾಚಾ!
ಮರಳಿ ಬಂದಾಗ ಅಜ್ಜಿಯು ಇವನು
ಅವಳ ತೊಡೆಯ ಏರಿದರೆ
ಬಾರೋ ಕೃಷ್ಣ ಬಾರೋ ಎಂದು
ಮುದ್ದಿನ ಸುರಿಮಳೆಧಾರೆ
ಅಯ್ಯೋ ಸೊರಗಿಸಿಬಿಟ್ಟಿರಿ ಮಗುವನ್ನು
ಹಾಕದೆ ಊಟ, ಪಾಪ!
ಎನ್ನುತ ಹಾಲು ಸುರಿದು ಬಟ್ಟಲಿಗೆ
ಕರೆವಳು, ಕುಡಿ ಬಾರಪ್ಪಾ!
ಅವನಿಗೇನು ಆಗಿದೆಯೇ! ನೋಡು
ಕಣ್ಣು ಬಿಟ್ಟು ಸರಿಯಾಗಿ!
ಮೈ ಬಂದಿದೆ ಹಾಲೂ ಮೊಸರೂ ಬೆಣ್ಣೆ
ಕದ್ದು ತಿಂದಿಹನು ತೇಗಿ!
ಹೊತ್ತಿಗೆ ಕಾಫಿ ತಿಂಡಿ ಇಲ್ಲದೆ
ಸೊರಗಿಹೋಗಿರುವೆ ನಾನು
ಬಂದ ಕೂಡಲೇ ಅವನಿಗೆ ಉಪಚಾರ
ಮಾಡುತ್ತಿರುವೆ ನೀನು!
ಸಾಕು ಸುಮ್ಮನಿರಿ, ಕಣ್ಣು ಹಾಕದಿರಿ,
ಎನ್ನುತ ಅಜ್ಜಿ ಬಿಗಿಯುವಳು ಮುಷ್ಟಿ!
ಬಾರೋ ಕೃಷ್ಣಾ, ಉಪ್ಪು ನಿವಾಳಿಸಿ
ತೆಗೆಯುವೆ ಕೆಟ್ಟ ದೃಷ್ಟಿ!
ಅಜ್ಜಿಯ ಹಿಂದೆ ಓಡಾಡುವುದು
ಪಟ್ಟಾಪಟ್ಟೆ ಕರಿಬೆಕ್ಕು
ಹುಲಿ ಎಂದೇ ತಿಳಿದಿದೆ ತನ್ನನ್ನು
ಅಬ್ಬಾ ಎಂತಹ ಸೊಕ್ಕು!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ